ಹೊಸದಿಲ್ಲಿ: ಏರ್ ಇಂಡಿಯಾವನ್ನು ಟಾಟಾ ಸನ್ಸ್‌ಗೆ ಮಾರಾಟ ಮಾಡಿದ ಬಳಿಕ, ಕೇಂದ್ರ ಸರಕಾರ ಅಲಯನ್ಸ್ ಏರ್ ಮತ್ತು ಇತರ ನಾಲ್ಕು ಸಹವರ್ತಿ ಸಂಸ್ಥೆಗಳು ಹೊಂದಿರುವ ಆಸ್ತಿ ಯನ್ನು ನಗದೀ ಕರಿಸಲು ಮುಂದಾ ಗಿದೆ.
ಅಲಯನ್ಸ್ ಏರ್ ಎನ್ನುವುದು ಏರ್ ಇಂಡಿಯಾದ ಸಹವರ್ತಿ ಸಂಸ್ಥೆ ಯಾಗಿದೆ. “ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಂಡವಾಳ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ, ಏರ್ ಇಂಡಿಯಾ ಏರ್ ಟ್ರಾನ್ಸ್‌ಪೊರ್ಟ್ ಸರ್ವಿಸಸ್ ಲಿಮಿಟೆಡ್ (ಎಐಎಟಿಎಸ್‌ಎಲ್), ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವಿಸಸ್ (ಎಐಇಎಸ್‌ಎಲ್), ಏರ್‌ಲೈನ್ ಅಲೈಡ್ ಸರ್ವಿಸಸ್ ಲಿಮಿಟೆಡ್ (ಎಎಎಸ್‌ಎಲ್) ಮತ್ತು ಹೊಟೇಲ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಚ್‌ಸಿಐ)ಗಳ ಆಸ್ತಿಗಳನ್ನು ಶೀಘ್ರವೇ ನಗದೀಕರಣಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಇದಲ್ಲದೆ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ಸ್ ಲಿಮಿಟೆಡ್ ಒಟ್ಟು 44,679 ಕೋಟಿ ರೂ. ನಿವ್ವಳ ಆಸ್ತಿ ಹೊಂದಿದೆ.
ಏರ್ ಇಂಡಿಯಾ ಮಾರಾಟವಾಗದ ಹೊರತಾಗಿ ಸಹವರ್ತಿ ಸಂಸ್ಥೆಗಳು ಹೊಂದಿ ರುವ ಆಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸರಕಾರಿ ಸ್ವಾಮ್ಯದ ವಿಮಾನ ಸಂಸ್ಥೆ ಟಾಟಾ ಸನ್ಸ್‌ಗೆ ಮಾರಾಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಾಲ್ಕು ಸಂಸ್ಥೆಗಳು ಹೊಂದಿರುವ ಆಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವೀಕ್‌ಎಂಡ್ ಹುಮಸ್ಸಿನಲ್ಲಿದ್ದ ಜನರಿಗೆ ಕಿರಿಕಿರಿ ಉಂಟು ಮಾಡಿದ ಮಳೆ
14, 700 ಕೋಟಿ ರೂ.: ಕಟ್ಟಡಗಳು ಮತ್ತು ಇತರ ಆಸ್ತಿ ಮಾರಾಟದಿಂದಾಗಿ 14,700 ಕೋಟಿ ರೂ. ಸರಕಾರಕ್ಕೆ ಸಿಗಲಿದೆ. ಗ್ರೌಂಡ್ ಹ್ಯಾಂಡ್ಲಿಂಗ್, ಎಂಜಿನಿಯರಿಂಗ್ ವಿಭಾಗ ಮತ್ತು ಅಲಯನ್ಸ್ ಏರ್‌ನಿಂದಾಗಿ 2 ಸಾವಿರ ಕೋಟಿ ರೂ. ಸಿಗುವ ಸಾಧ್ಯತೆ ಇದೆ. ಪ್ರಾದೇಶಿಕವಾಗಿ ವಿಮಾನ ಯಾನ ನೀಡುವ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.