Advertisement
ಸುಲಭವಾಗಿ ಮರೆಯುವ ಘಟನೆ ಆಗಿದ್ದರೆ ಮರೆಯ ಬಹುದಿತ್ತು, ಆದರೆ ಹೇಗೆ ಮರೆಯಲು ಸಾಧ್ಯ? ಕೆಂಜಾರು ಕಣಿವೆಯಲ್ಲಿ ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡ ದಟ್ಟವಾದ ಹೊಗೆ, ಧಗಧಗಿಸುವ ಬೆಂಕಿಯ ಜ್ವಾಲೆ, ಬಚಾವೋ… ಬಚಾವೋ ಎನ್ನುವ ಆಕ್ರಂದನ, ಮತ್ತೆ ಮತ್ತೆ ಸಂಭವಿಸಿದ ಸ್ಫೋಟವನ್ನು. ಮುಗಿಲು ಸುರಿಸಿದ ಹನಿಮಳೆ, ಅಗ್ನಿಶಾಮಕ ದಳಗಳ ಕಾರ್ಯಾ ಚರಣೆ, ಸಾಗರದಂತೆ ಹರಿದು ಬಂದ ನೂರಾರು ಸಾರ್ವಜನಿಕರ ದಂಡು ಕಣಿವೆಗೆ ಲಗ್ಗೆಯಿಟ್ಟಿತು. ಆಗ ಕೆಂಜಾರು ಕಣಿವೆಯಲ್ಲಿ ಮೌನ ಆವರಿಸಿಕೊಂಡಿತ್ತು. ಆ ಕಣಿವೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು ದೂರದ ದುಬೈನಿಂದ 166 ಮಂದಿಯನ್ನು ಹೊತ್ತುತಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ.
Related Articles
Advertisement
ಆ್ಯಂಬುಲೆನ್ಸ್‌ಗಳು ದೇಹಗಳನ್ನು ತುಂಬಿಸಿ ಕೊಳ್ಳುವಾಗ ಅಲ್ಲಿ ನೆರೆದಿದ್ದವರ ಕಣ್ಣುಗಳು ಬದುಕಿರುವವರಿಗಾಗಿ ತಡಕಾಡುತ್ತಿದ್ದವು, ಹಾಗೆ ಬದುಕಿದವರಲ್ಲಿ ನಮ್ಮವರಿರಲಿ ಎನ್ನುವ ಆಸೆ, ಆದರೆ ಕಣಿವೆಯಿಂದ ಮೇಲಕ್ಕೆ ಬರುತ್ತಿದ್ದುದು ಸುಟ್ಟು ಹೋದ ದೇಹಗಳು ಮಾತ್ರ. ಬದುಕಿನಲ್ಲಿ ಇದಕ್ಕಿಂತ ಭಯಾನಕವಾದ ದೃಶ್ಯಗಳನ್ನು ಕಾಣಲು ಸಾಧ್ಯವೇ ಇಲ್ಲ ಅನ್ನಿಸಿತು ಆ ಕರಕಲು ದೇಹಗಳನ್ನು ಕಂಡಾಗ. ಅದು ಮಗುವಿನ ದೇಹವೋ, ಇಳಿವಯಸ್ಸಿನ ಗಂಡಸೋ ಅಥವಾ ಹೆಂಗಸೋ? ಒಂದೂ ಗೊತ್ತಾಗುತ್ತಿರಲಿಲ್ಲ ಆ ಸಂದರ್ಭ ದಲ್ಲಿ. ರುಂಡದ ಭಾಗವೇ ಇಲ್ಲ, ಕೆಲವಕ್ಕೆ ಒಂದೇ ಕಾಲು, ಕಾಲು ಬೇರೆ-ಕೈ ಬೇರೆ ಅದು ಆ ದೇಹದ್ದೇ ಕಾಲು-ಕೈ ಇರಬಹುದೇ ಸಂಶಯ ಮಾತ್ರ, ಉತ್ತರಕ್ಕೆ ಯಾರನ್ನು ಕೇಳಬೇಕು?.
ವಿಮಾನ ದುಬೈನಿಂದ ಹಾರುತ್ತ ಮಂಗಳೂರು ವಿಮಾನ ನಿಲ್ದಾಣ ತಲಪುತ್ತಿದೆ ಎನ್ನುವಾಗ “ಪ್ರಯಾಣಿಕರ ಗಮನಕ್ಕೆ-ಏರ್ ಇಂಡಿಯಾ ಎಕ್ಸಪ್ರಸ್ ಪ್ರಯಾಣ ಸುಖಕರವಾಗಿತ್ತು. ಕೆಲವೇ ಕ್ಷಣಗಳಲ್ಲಿ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ, ಎಲ್ಲರೂ ನಿಮ್ಮ ಸೀಟ್ ಬೆಲ್ಟ್‌ಗಳನ್ನು ಕಟ್ಟಿಕೊಳ್ಳಿ’ ಎನ್ನುವ ಸಂದೇಶವನ್ನು ಪ್ರಯಾಣಿಕರಿಗೆ ಕೊಟ್ಟಿದ್ದಾರೆ. ಆಗ ಎಲ್ಲರೂ ಸೀಟ್ ಬೆಲ್ಟ್ ಕಟ್ಟಿಕೊಂಡಿದ್ದಾರೆ. ಆದ್ದರಿಂದಲೇ ವಿಮಾನಗಳ ಅವಶೇಷಗಳಿಂದ ಹೊರತೆಗೆಯಲಾದ ಕರಕಲು ದೇಹಗಳು ಸೀಟ್ ಬೆಲ್ಟ್ ಕಟ್ಟಿಕೊಂಡು ಕುಳಿತಂಥ ಸ್ಥಿತಿಯಲ್ಲಿದ್ದವು. ಕುಳಿತಲ್ಲೇ ಉರಿದು ಹೋಗಿದ್ದ ದೇಹಗಳನ್ನು ಸೀಟುಗಳಿಂದ ಬಿಡಿಸಿ ತೆಗೆಯುವುದೇ ದೊಡ್ಡ ಸಾಹಸವಾಗಿತ್ತು, ಅವಸರ ಮಾಡಿ ಎಳೆದರೆ ಉಳಿದ ದೇಹದ ಭಾಗಗಳೂ ಬಿಡಿ ಬಿಡಿಯಾಗುತ್ತಿದ್ದವು.
ಈ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಅಚ್ಚರಿಕರ ಸುದ್ದಿ ಗಳೂ ಬರತೊಡಗಿದವು. ವಿಮಾನ ಅವಘಡಕ್ಕೀಡಾದಾಗ ಕೆಲವರು ವಿಮಾನದಿಂದ ಹಾರಿ ಬದುಕುಳಿದಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲು ಮುರಿದುಕೊಂಡಿದೆಯಂತೆ, ಸುಟ್ಟ ಗಾಯಗಳಾಗಿವೆಯಂತೆ. ಯಾರಿರಬಹುದು ಕುತೂಹಲ, ಆಸ್ಪತ್ರೆಗಳಿಗೆ ದೌಡು. ನಿಜ ಐದು ಮಂದಿ ಬದುಕಿ ಉಳಿದಿದ್ದರು. ಸುಟ್ಟ ಗಾಯಗಳಾ ಗಿಳಿದ್ದವು. ಮೂಳೆಮುರಿತವೂ ಇತ್ತು. ಗಾಯಾಳುಗಳಿಗೆ ಚಿಕಿತ್ಸೆ ಯಾಗುತ್ತಿತ್ತು. ಬದುಕಿ ಉಳಿದವರ ಬಂಧುಗಳ ಮುಖದಲ್ಲಿ ಧನ್ಯತೆಯಿತ್ತು. ಧನಕನಕ ಇಲ್ಲದಿದ್ದರೂ ಪರವಾಗಿಲ್ಲ ಬದುಕಿ ಉಳಿದರಲ್ಲಾ ಅದೇ ಸಾಕು ಎನ್ನುವ ಸಂತೃಪ್ತಿಯ ಮಾತುಗಳೂ ಕೇಳಿಸಿದವು.
ಮತ್ತೆ ಕೆಂಜಾರಿನ ಕಣಿವೆಯತ್ತ ಬಂದಾಗ ಇಳಿಹೊತ್ತು. ಜನಜಾತ್ರೆಯಲ್ಲಿ ಅಳುವವರು, ಗೋಳಾಡುವವರು, ಮೈಯೆಲ್ಲಾ ಕೆಸರು ಮಾಡಿಕೊಂಡು ದೇಹಗಳನ್ನು ಸಾಗಿಸುವುದರಲ್ಲಿ ನಿರತರಾಗಿದ್ದರು. ತುಂಡು ಬ್ರೆಡ್ಡನ್ನು ಬೇರೆಯವರಿಂದ ಬಾಯಿಗೆ ಹಾಕಿಸಿಕೊಳ್ಳುತ್ತಿದ್ದ ಕಾರ್ಯಾಚರಣೆಯ ಮಂದಿಯ ಮುಖ ಈಗಲೂ ಕಣ್ಣಿಗೆ ಕಟ್ಟುತ್ತದೆ. ದುರ್ನಾತ ಬೀರುವ ಅರೆಬೆಂದ ದೇಹಗಳನ್ನು ಸಾಗಿಸುವುದನ್ನು ದೂರದಲ್ಲಿ ನಿಂತು ನೋಡುವುದೇ ಅಸಹನೀಯವಾಗಿತ್ತು. ಆದರೆ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ಕಾರ್ಯಾಚರಣೆಯಲ್ಲಿದ್ದವರಿಗೆ ಮುಸ್ಸಂಜೆಯಲ್ಲಿ ಮತ್ತೂಂದು ಅಚ್ಚರಿ. ತುಂಡಾಗಿ ಸಿಡಿದು ನೆಲದಲ್ಲಿ ಹೂತು ಹೋಗಿದ್ದ ರೆಕ್ಕೆಯ ಕೆಳಭಾಗದಲ್ಲಿ ಮತ್ತೆ ಮೂರುಮಂದಿ ಬದುಕಿ ಉಳಿದಿದ್ದರು. ಅವರ ಧ್ವನಿ ಕ್ಷೀಣಿಸಿತ್ತು. ಮೇಲಕ್ಕೆ ತಂದು ಪ್ರಥಮ ಚಿಕಿತ್ಸೆ ಕೊಡುತ್ತಲೇ ಆ್ಯಂಬುಲೆನ್ಸ್ ಸೈರನ್ ಮೊಳಗಿಸಿ ಕೊಂಡು ಆಸ್ಪತ್ರೆಗೆ ದೌಡಾಯಿಸಿತು. ಹೀಗೆ ಈ ದುರಂತದಲ್ಲಿ ಬದುಕಿ ಉಳಿದವರು ಎಂಟು ಮಂದಿ. ಸಂಜೆ ಏಳು ಗಂಟೆ ಹೊತ್ತಿಗೆ 158 ಮಂದಿಯ ಸುಟ್ಟದೇಹಗಳು ಸಿಕ್ಕವು, ಆದ್ದರಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಯಾದಿಯಂತೆ ಒಟ್ಟು ಪ್ರಯಾಣಿಕರು 166, ಬದುಕಿ ಉಳಿದವರು ಎಂಟು ಮಂದಿ, ರಕ್ಷಣಾ ಕಾರ್ಯಾಚರಣೆ ಸ್ಥಗಿತ.
ಸುಟ್ಟ ದೇಹಗಳನ್ನು ಮಂಗಳೂರಿನ ವೆನಾಕ್ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಮಾಡಲಾಗುತ್ತಿತ್ತು. ದೇಹಗಳನ್ನು ಸಂಬಂಧಿಕರು ಗುರುತಿಸಲು ಹೆಣಗುತ್ತಿದ್ದರು. ಮೈಮೇಲೆ ಬಟ್ಟೆಯ ತುಂಡೂ ಇಲ್ಲ. ಅದೆಷ್ಟೋ ದೇಹಗಳ ಲಿಂಗ ತಿಳಿಯಲೇ ಆಗುತ್ತಿರಲಿಲ್ಲ ಅಂದ ಮೇಲೆ ಹೇಳುವುದೇನು. ಆಸ್ಪತ್ರೆ ಸಿಬ್ಬಂದಿಗಳು ಸತ್ತವರ ಸಂಬಂಧಿಕರು ಗುರುತಿಸಿದ ದೇಹಗಳಿಗೆ ಹೆಸರು ಬರೆದು ಟ್ಯಾಗ್ ಹಾಕುತ್ತಿದ್ದರು. ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ಚೀರಾಟ, ಗೋಳಾಟ ಮುಗಿಲುಮುಟ್ಟಿತ್ತು. ದೇಹಗಳನ್ನು ಆ್ಯಂಬುಲೆನ್ಸ್‌ಗಳಲ್ಲಿ ಒಯ್ಯುವಾಗಿನ ದೃಶ್ಯಗಳು ಹೃದಯ ವಿದ್ರಾವಕ. ಗುರುತಿಸಲಾಗದ ದೇಹಗಳು, ಗುರುತಿಸಿದ ದೇಹಗಳು, ಗಂಡು, ಹೆಣ್ಣು ವಿಂಗಡಿಸಿ ಇಡಲಾಗಿತ್ತು. ಹಾಗೆ ಅಲ್ಲಿ ಬಿದ್ದುಕೊಂಡಿದ್ದ ದೇಹ ಭಾಗಗಳನ್ನು ನೋಡಿದಾಗ ಒರಿಜಿನಲ್ ಮುಖ, ರೂಪ ಹೇಗಿತ್ತು? ಅದು ಅವನೇ? ಅವಳೇ? ನನ್ನನ್ನೇ ನಾನು ಕೇಳಿಕೊಂಡೆ. ಆ ನಗು ಮುಖ, ಸುಂದರ ರೂಪ, ಶ್ರೀಮಂತಿಕೆ ಕಲ್ಪಿಸಿಕೊಂಡೆ. ನಿಜಕ್ಕೂ ನಾನು ಇಂತಹ ಬರಹ ಬರೆಯುತ್ತೇನೆಂದು ಕೂಡಾ ಅಂದು ಕೊಂಡಿರಲಿಲ್ಲ, ಇದು ನಮ್ಮ ನಡುವೆಯೇ ನಡೆದ ಟ್ರ್ಯಾಜಿಡಿ.
ಚಿದಂಬರ ಬೈಕಂಪಾಡಿ