ಏರ್ ಇಂಡಿಯಾದ ಡ್ರೀಂ ಲೈನರ್ ವಿಮಾನದಲ್ಲಿ ಲಂಡನ್ ಗೆ ಪ್ರಯಾಣಿಸುತ್ತಿದ್ದ ದಂಪತಿಗೆ ಆದ ವಿಶೇಷ ಅನುಭವವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಏರ್ ಇಂಡಿಯಾ ಸಿಬ್ಬಂದಿಯ ಸೇವಾಬದ್ಧತೆಯನ್ನು ಪ್ರಶಂಸಿಸಿ ಈ ದಂಪತಿ ಶಹಬ್ಬಾಸ್ ಗಿರಿ ನೀಡಿದ್ದಾರೆ.
‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ನಂತಹ ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕಿ ಮತ್ತು ಕಿರುತೆರೆ ನಟಿ ಸೌಮ್ಯಾ ಟಂಡನ್ ತನ್ನ ಪುಟ್ಟ ಮಗುವಿನೊಂದಿಗೆ ಲಂಡನ್ ಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಗು ನಿದ್ರಿಸದೆ ರಚ್ಚೆ ಹಿಡಿದಿತ್ತು. ಮಗುವಿಗೆ ವಿಮಾನ ಪ್ರಯಾಣದ ಅನುಭವವಿಲ್ಲದಿದ್ದ ಕಾರಣ ಹೀಗಾಗಿರಬೆಕೆಂದು ಆ ದಂಪತಿ ಅಂದುಕೊಂಡಿದ್ದರು ಮತ್ತು ಮಗುವನ್ನು ಸಮಾಧಾನಪಡಿಸಲು ಸಾಧ್ಯವಾಗದೇ ಕಂಗಾಲಾಗಿದ್ದರು.
ಆ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿಯೊಬ್ಬರು ಮಗುವನ್ನು ಎತ್ತಿಕೊಂಡು ‘ಜೋಕಾಲಿ’ ರೀತಿಯಲ್ಲಿ ಆಡಿಸಿದಾಗ ಮಗು ಸುಮ್ಮನಾಗುತ್ತದೆ ಮತ್ತು ಖುಷಿಯಿಂದ ನಗುತ್ತಿರುತ್ತದೆ. ಈ ವಿಚಾರವನ್ನು ಸೌಮ್ಯ ಅವರ ಪತಿ ವಿಡಿಯೋ ಸಹಿತ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮತ್ತು ಏರ್ ಇಂಡಿಯಾ ಸಿಬ್ಬಂದಿಯ ಸೇವಾಬದ್ಧತೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ಅನ್ನು ಸೌಮ್ಯ ಟಂಡನ್ ಅವರೂ ಸಹ ಶೇರ್ ಮಾಡಿಕೊಂಡಿದ್ದು ವಿಮಾನದ ಸಿಬ್ಬಂದಿಯ ಸೇವಾಪರತೆಯಿಂದಾಗಿ ನಮಗೆ ಉಂಟಾಗಿದ್ದ ಆತಂಕ ದೂರವಾಯ್ತು ‘ಥ್ಯಾಂಕ್ಸ್ ಏರ್ ಇಂಡಿಯಾ’ ಎಂದವರು ಬರೆದುಕೊಂಡಿದ್ದಾರೆ.