ಬೆಂಗಳೂರು: ದುಬೈನಿಂದ ಪ್ರಿಯಕರನನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಗಗನಸಖೀಯೊಬ್ಬರು 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧಿಮಾನ್ (28) ಮೃತ ಗಗನಸಖೀ. ಈ ಸಂಬಂಧ ಕೇರಳದ ಕಾಸರಗೊಡು ಮೂಲದ ಆದೇಶ್ (30) ಎಂಬಾತನನ್ನು ವಶಕ್ಕೆ ಪಡೆಯ ಲಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರಿನ ಖಾಸಗಿ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದ ಆದೇಶ್ ಮತ್ತು ದುಬೈನಲ್ಲಿ ಖಾಸಗಿ ಏರ್ ಲೈನ್ಸ್‌ನಲ್ಲಿ ಗಗನಸಖೀಯಾಗಿದ್ದ ಅರ್ಚನಾ ಧಿಮಾನ್ ಡೇಟಿಂಗ್ ಆ್ಯಪ್ ಮೂಲಕ ಪರಸ್ಪರ ಪರಿಚಯವಾಗಿದ್ದು, 6 ತಿಂಗಳಿಂದ ಇಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.
ಈ ಹಿಂದೆಯೂ ಪ್ರಿಯಕರ ಆದೇಶ್‌ನನ್ನು ನೋಡಲು ಅರ್ಚನಾ ಬೆಂಗಳೂರಿಗೆ ಬಂದಿದ್ದಳು. ಈ ಮಧ್ಯೆ ಆಗಾಗ್ಗೆ ಇಬ್ಬರ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಆದರೂ 4 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅರ್ಚನಾ, ಕೋರಮಂಗಲದ 8ನೇ ಬ್ಲಾಕ್‌ನಲ್ಲಿರುವ ಅಪಾರ್ಟ್ ಮೆಂಟ್‌ನ 4ನೇ ಮಹಡಿಯಲ್ಲಿರುವ ಆದೇಶ್ ಮನೆಯಲ್ಲಿ ವಾಸವಾಗಿದ್ದರು.
ಶುಕ್ರವಾರ ಇಬ್ಬರು ಮಾಲ್‌ವೊಂದರಲ್ಲಿ ಸಿನಿಮಾಗೆ ಹೋಗಿದ್ದರು. ತಡರಾತ್ರಿ ಮನೆಗೆ ಬಂದು ಪಾರ್ಟಿ ಕೂಡ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ.
ಆಗ ಅರ್ಚನಾ 4ನೇ ಮಹಡಿಯಿಂದ ಬಿದ್ದಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ಗಳು ಹಾಗೂ ಸ್ಥಳೀಯರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಮೃತಪಟ್ಟಿದ್ದಾಳೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಡೆತ್‌ನೋಟ್ ಕೂಡ ಪತ್ತೆಯಾಗಿಲ್ಲ. ಆರೋಪಿ ಆದೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.