ಹೊಸದಿಲ್ಲಿ : ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಇಂದು ಶುಕ್ರವಾರ ಅರುಣಾಚಲ ಪ್ರದೇಶದಲ್ಲಿ ತರಬೇತಿ ಹಾರಾಟದ ವೇಳೆ ಪತನಗೊಂಡಿದೆ. ಈ ಅವಘಡದಲ್ಲಿ 7 ಮಂದಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು ಒಬ್ಟಾತ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ದುರಂತ ಸಂಭವಿಸಿದ ವೇಳೆ ಇಬ್ಬರು ಸೇನಾ ಜವಾನರು ಮತ್ತು ಐವರು ಅಧಿಕಾರಿಗಳು ಸೇರಿದಂತೆ ಒಟ್ಟು ಏಳು ಮಂದಿ ವಾಯು ಪಡೆ ಹೆಲಿಕಾಪ್ಟರ್‌ನಲ್ಲಿ ಇದ್ದರು.
ಈಗ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಪತನಗೊಂಡ ವಾಯು ಪಡೆ ಹೆಲಿಕಾಪ್ಟರ್ ಎಂಐಎಲ್ ಎಂಐ -17 ಎಂದು ಗೊತ್ತಾಗಿದೆ. ಹಾರಾಟ ನಿರ್ವಹಣ ಅಭಿಯಾನದಲ್ಲಿ ತೊಡಗಿದ್ದ ವಾಯು ಪಡೆ ಹೆಲಿಕಾಪ್ಟರ್ ಇಂದು ಶುಕ್ರವಾರ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಪತನಗೊಂಡಿತು.
ಈ ದುರ್ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ಹೇಳಿದೆ.
ಕಳೆದ ವಾರವಷ್ಟೇ ಹೈದರಾಬಾದಿನ ಕಿಸಾರಾದಲ್ಲಿ ಭಾರತೀಯ ವಾಯುಪಡೆಯ ತರಬೇತಿ ವಿಮಾನವೊಂದು ಪತನಗೊಂಡಿತ್ತು. ಆದರೆ ಅದೃಷ್ಟವಶಾತ್ ಆ ಅವಘಡದಲ್ಲಿ ಯಾವುದೇ ಜೀವ ಹಾನಿ ಆಗಿರಲಿಲ್ಲ. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಅದು ತುಂಡಾಗಿ ಧರೆಗೆ ಉರುಳಿತ್ತು. ಪೈಲಟ್ ಸೇರಿದಂತೆ ವಿಮಾನದೊಳಗಿದ್ದ ಎಲ್ಲ ಮೂವರು ಸುರಕ್ಷಿತವಾಗಿ ಹೊರ ಜಿಗಿದು ಪಾರಾಗಿದ್ದರು.