ಲಕ್ನೋ : ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್‌ಬಿ) ಪಾಕಿಸ್ಥಾನ ಮತ್ತು ಸೌದಿ ಅರೇಬಿಯದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ಉಪ ಸಂಸ್ಥೆಯಾಗಿರುವುದರಿಂದ ಇದನ್ನು ನಿಷೇಧಿಸಬೇಕು ಎಂದು ಶಿಯಾ ಸೆಂಟ್ರಲ್ ವಕ್‌ಫ್ ಬೋರ್ಡ್ ಆಗ್ರಹಿಸಿದೆ.
“ಭಾರತದಲ್ಲಿನ ಮುಸ್ಲಿಮರಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಪಾಕಿಸ್ಥಾನ ಮತ್ತು ಸೌದಿ ಅರೇಬಿಯದಲ್ಲಿರುವ ಉಗ್ರ ಸಂಘಟನೆಗಳು ತೆಗೆದುಕೊಳ್ಳುತ್ತವೆ; ಅಂತಹ ಉಗ್ರ ಸಂಘಟನೆಗಳ ಉಪ ಸಂಸ್ಥೆಯೇ ಎಐಎಂಪಿಎಲ್‌ಬಿ. ಇದು ಆ ಉಗ್ರ ಸಂಘಟನೆಗಳ ಸಿದ್ಧಾಂತಗಳನ್ನು ಅನುಸರಿಸಿ ದೇಶದಲ್ಲಿನ ವಾತಾವರಣವನ್ನು ಹಾಳುಗೆಡಹುತ್ತಿವೆ’ ಎಂದು ಶಿಯಾ ಸೆಂಟ್ರಲ್ ವಕ್‌ಫ್ ಬೋರ್ಡ್ ಅಧ್ಯಕ್ಷ ವಾಸೀಂ ರಿಜ್ವಿ ಹೇಳಿದ್ದಾರೆ.
ಎಐಎಂಪಿಎಲ್‌ಬಿ ತನ್ನ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಓರ್ವರಾದ ಮೌಲಾನಾ ಸಲ್ಮಾನ್ ಹಸ್ನಿ ನದ್ವೀ ಅವರನ್ನು ಉಚ್ಚಾಟಿಸಿದ ಬೆನ್ನಲ್ಲೇ ಶಿಯಾ ಸೆಂಟ್ರಲ್ ವಕ್‌ಫ್ ಬೋರ್ಡ್ ನಿಂದ ಈ ಹೇಳಿಕೆ ಬಂದಿದೆ.
ನದ್ವೀ ಅವರು ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ರಾಮ ಮಂದಿರವನ್ನು ನಿರ್ಮಿಸುವುದಕ್ಕೆ ತಮ್ಮ ಬೆಂಬಲ ಸೂಚಿಸಿದ ಕಾರಣ ಅವರನ್ನು ಮಂಡಳಿಯಿಂದ ಉಚ್ಚಾಟಿಸಲಾಗಿತ್ತು.
ವಿವಾದಿತ ಅಯೋಧ್ಯೆ ನಿವೇಶನದಲ್ಲಿ ರಾಮ ಮಂದಿರವನ್ನು ಕಟ್ಟುವುದಕ್ಕೆ ಅವಕಾಶ ನೀಡಬೇಕು; ಮುಸ್ಲಿಮರು ತಮಗೆ ಬೇಕಿರುವ ಮಸೀದಿಯನ್ನು ಬೇರೆಡೆ ಕಟ್ಟಬಹುದು ಎಂಬ ನದ್ವೀ ಅವರು ಅಭಿಪ್ರಾಯವನ್ನು ರಿಜ್ವಿ ಬೆಂಬಲಿಸಿದ್ದಾರೆ.