ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಜನವರಿ 26ರಂದು ರೈತರು ನಡೆಸಿದ ಟ್ರ್ಯಾಕ್ಟರ್ ರಾಲಿ ಹಿಂಸಾಚಾರಕ್ಕೆ ತಿರುಗಿ, ಕೆಂಪುಕೋಟೆಗೆ ನುಗ್ಗಿ ಸಿಖ್ ಧ್ವಜ ಹಾರಿಸಲಾಗಿತ್ತು. ಏತನ್ಮಧ್ಯೆ ಟೀಕೆ, ಟಿಪ್ಪಣಿ ನಡುವೆಯೇ ಕೇಂದ್ರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘ ಮತ್ತು ಭಾರತೀಯ ಕಿಸಾನ್ ಯೂನಿಯನ್ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಬುಧವಾರ (ಜನವರಿ 27) ಘೋಷಿಸಿದೆ.
ಇದನ್ನೂ ಓದಿ:ರೈತರ ಹೋರಾಟಕ್ಕೆ ಕಾಂಗ್ರೇಸ್ ಕುಮ್ಮಕ್ಕು ನೀಡುತ್ತಿದೆ : ಶೆಟ್ಟರ್ ಆರೋಪ
ಗಣರಾಜ್ಯೋತ್ಸದ ದಿನ ಟ್ರ್ಯಾಕ್ಟರ್ ರಾಲಿ ವೇಳೆ ನಡೆದ ಹಿಂಸಾಚಾರವನ್ನು ಎರಡೂ ಸಂಘಟನೆಗಳು ಖಂಡಿಸಿದ್ದು, ಈ ರೀತಿಯಲ್ಲಿ ನಾವು ಪ್ರತಿಭಟನೆಯನ್ನು ಮುಂದುವರಿಸಲು ಇಚ್ಚಿಸುವುದಿಲ್ಲ ಎಂದು ಎರಡು ಸಂಘಟನೆ ತಿಳಿಸಿದೆ.
“ನಿನ್ನೆ ನಡೆದ ಘಟನೆಯಿಂದ ತುಂಬಾ ನೋವಾಗಿದೆ. ಇದರೊಂದಿಗೆ ನಮ್ಮ 58 ದಿನಗಳ ಹೋರಾಟ ಕೂಡಾ ಅಂತ್ಯ ಕಾಣಲಿದೆ” ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಠಾಕೂರ್ ಭಾನು ಪ್ರತಾಪ್ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
“ನಾವು ಬೇರೆ ಯಾರದ್ದೋ ನಿರ್ದೇಶನದ ಮೇರೆಗೆ ಪ್ರತಿಭಟನೆಯನ್ನು ಮುಂದುವರಿಸಲು ಇಷ್ಟ ಪಡುವುದಿಲ್ಲ. ನಾವು ತಕ್ಷಣದಿಂದಲೇ ನಮ್ಮ ಪ್ರತಿಭಟನೆಯನ್ನು ವಾಪಸ್ ಪಡೆಯುತ್ತಿದ್ದೇವೆ. ನಮಗೆ ಎಂಎಸ್ ಪಿ ಭರವಸೆ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಆದರೆ ಈ ಸಂಘಟನೆಗಳ ಜತೆ ನಮ್ಮ ಹೋರಾಟ ಮುಂದುವರಿಯಲ್ಲ. ನಾವು ಇಲ್ಲಿಗೆ ಹೋರಾಡಲು ಬಂದಿರುವುದು ಹುತಾತ್ಮರಾಗಲೋ ಅಥವಾ ಹೊಡೆತ ತಿನ್ನಲು ಅಲ್ಲ ಎಂದು ಆಲ್ ಇಂಡಿಯ ಕಿಸಾನ್ ಸಂಘರ್ಷ ಕೋ ಆರ್ಡಿನೇಷನ್ ಸಮಿತಿಯ ವಿಎಂ ಸಿಂಗ್ ತಿಳಿಸಿದ್ದಾರೆ.