ಚಿತ್ತಾಪುರ: ಮನುಷ್ಯನಲ್ಲಿ ಆರೋಗ್ಯದ ಬಗ್ಗೆ ಅರಿವು ಇರಬೇಕು. ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿದಾಗ ಮಾತ್ರ ಏಡ್ಸ್ ಮುಕ್ತ ವಿಶ್ವ ಆಗಲು ಸಾಧ್ಯ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ ಹೇಳಿದರು.
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಜಿಪಂ, ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ, ಪುರಸಭೆ, ಕರ್ನಾಟಕ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಎನ್‌ಎಸ್‌ಎಸ್ ಘಟಕಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಕುರಿತು ನಮ್ಮನ್ನು ನಾವೇ ತಿಳಿದುಕೊಳ್ಳಬೇಕು. ಏಡ್ಸ್ ರೋಗಿಗಳಿಗೆ ಅವಮಾನ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ನಂದಾ ರಾಂಪೂರೆ ಮಾತನಾಡಿ, ಆರೋಗ್ಯವೇ ಸಂಪತ್ತು. ಜನರಿಗೆ ಆರೋಗ್ಯದ ಬಗ್ಗೆ ಶಿಕ್ಷಣ ನೀಡುವ ಅಗತ್ಯವಿದೆ. ರೋಗಗಳ ಬಗ್ಗೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು, ಮುನ್ನೆಚ್ಚರಿಕೆ ವಹಿಸಬೇಕು. ಸ್ವತ್ಛತೆ ಕಾಪಾಡಬೇಕು. ಪೋಲಿಯೋ, ಏಡ್ಸ್, ಕೊರೊನಾದಂತ ರೋಗಗಳು ಬಂದು ಜನರು ತತ್ತರಿಸಿದ್ದಾರೆ. ಪ್ರತಿಯೊಂದು ರೋಗಗಳು ಈಗ ವೈದ್ಯ ಲೋಕಕ್ಕೆ ಸವಾಲಾಗುತ್ತಿದೆ. ಆದರೂ ದೇಶದ ವೈದ್ಯರು ರೋಗಗಳ ನಿವಾರಣೆಗೆ ಎಲ್ಲ ತರದ ಚಿಕಿತ್ಸೆ ಹಾಗೂ ಔಷಧ ನೀಡುತ್ತಿದ್ದಾರೆ ಎಂದು ಹೇಳಿದರು.
ಡಾ| ಸುಧಾರಾಣಿ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಪದವಿ ಕಾಲೇಜು ಪ್ರಾಧ್ಯಾಪಕ ಅನಿಲಕುಮಾರ ಮಾತನಾಡಿದರು. ಪದವಿ ಕಾಲೇಜು ಪ್ರಾಧ್ಯಾಪಕ ಡಾ| ಪಂಡಿತ ಬಿ.ಕೆ ಏಡ್ಸ್ ಕುರಿತು ಉಪನ್ಯಾಸ ನೀಡಿದರು. ನ್ಯಾಯವಾದಿ ಈಶ್ವರ ಅಳ್ಳೊಳ್ಳಿ, ಪ್ರಾಧ್ಯಾಪಕರಾದ ಮಲ್ಲಪ್ಪ ಮಾನೇಗರ, ಮಹೇಂದ್ರಕುಮಾರ ಪಟ್ಟಣಕರ್, ಮರೇಪ್ಪ ಮೈತ್ರಿ, ಡಾ| ಶೃತಿ, ಮುಖಂಡರಾದ ಕವಿತಾ ಪಾಟೀಲ, ಸೈಯದ್ ಸೈಪೋದ್ದಿನ ಚಿಸ್ತಿ, ನಿಜಾಮ, ಮುನ್ನಾ ಪಟೇಲ್, ಸುನಂದಾ, ಕಿರಣಕುಮಾರ, ಗುರುರಾಜ, ಸಂಗಮೇಶ, ಶಿಲ್ಪರಾಣಿ, ಮಲ್ಲಮ್ಮ ಶ್ರೀನಿವಾಸ, ರೇಣುಕಾ, ಭೀಮರೆಡ್ಡಿ, ಜ್ಯೋತಿ, ಹಣಮಂತ, ಶರಣಮ್ಮ ಇದ್ದರು. ಡಾ| ರಾಣಪ್ಪ ಸ್ವಾಗತಿಸಿದರು, ಸುಜ್ಞಾನಿ ಪಾಟೀಲ ನಿರೂಪಿಸಿದರು, ಕಾಳಮ್ಮ ವಂದಿಸಿದರು.