Advertisement
ಈಗಾಗಲೇ ಹಿಮಾಚಲ ಪ್ರದೇಶ ಚುನಾವಣೆ ಘೋಷಣೆ ಆಗಿರುವುದರಿಂದ ಗುಜರಾತ್ ಚುನಾವಣೆಯೂ ಅದೇ ಅವಧಿಯಲ್ಲಿ ನಡೆಯುವ ಸಾಧ್ಯತೆ ಇದ್ದು, ಎರಡೂ ರಾಜ್ಯಗಳ ಚುನಾವಣೆ ಮುಗಿದ ನಂತರ ಎಐಸಿಸಿ ಮಹಾ ಅಧಿವೇಶನ ನಡೆಸುವ ಸಾಧ್ಯತೆ ಇದೆ. ಎಐಸಿಸಿ ಒಂದು ದಿನದ ಅಧಿವೇಶನ ವನ್ನು ಪಂಜಾಬ್ ಅಥವಾ ದೆಹಲಿಯಲ್ಲಿ ನಡೆಸಲಿದ್ದು, ಜನವರಿಯಲ್ಲಿ ಮೂರು ಮಹಾಧಿವೇಶನವನ್ನು ಕರ್ನಾಟಕದಲ್ಲಿ ನಡೆಸುವ ಸಾಧ್ಯತೆ ಇದೆ. ಮುಂದಿನ ವರ್ಷ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ರಾಜ್ಯದಲ್ಲಿ ಎಐಸಿಸಿ ಮಹಾಧಿವೇಶನ ನಡೆಸಬೇಕೆಂಬ ಇಚ್ಛೆಯನ್ನು ಈಗಾಗಲೇ ಕೆಪಿಸಿಸಿ ಹೈಕಮಾಂಡ್‌ಗೆ ಮನವಿ ಮಾಡಿಕೊಂಡಿದ್ದು, ಹೈಕಮಾಂಡ್ ಕೂಡ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಲಾಗುತ್ತಿದೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನವೆಂಬರ್ 19 ರಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯ ಕಾಂಗ್ರೆಸ್ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 19 ರಂದು ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ನಂತರ ನ. 20ರಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ಸಮಾವೇಶಕ್ಕೆ ರಾಹುಲ್‌ಗಾಂಧಿ ಇನ್ನೂ ಅಧಿಕೃತ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದು ಬಂದಿದೆ. ನ.21 ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮೀನುಗಾರರ ಬೃಹತ್ ಸಮಾವೇಶ
ಏರ್ಪಡಿಸಲಾಗಿದ್ದು, ಅಂದಿನ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.