ಬೀದರ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ರಣಕಹಳೆ ಮೊಳಗಿಸಲು ವೇದಿಕೆ ಸಜ್ಜಾಗಿದೆ. ನಗರದ ನೆಹರು ಕ್ರೀಡಾಂಗಣದಲ್ಲಿ “ಜನಧ್ವನಿ’ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದು, ಸಾರ್ವತ್ರಿಕ ಸಮರಕ್ಕೆ ಚಾಲನೆ ನೀಡಲಿದ್ದಾರೆ.
ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ನೇರವಾಗಿ ಬೀದರ ಏರ್‌ಬೇಸ್‌ಗೆ 11ಕ್ಕೆ ಆಗಮಿಸಲಿರುವ ರಾಹುಲ್, ಅಲ್ಲಿಂದ ನೇರವಾಗಿ ನಗರದ ನೆಹರು ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ಭದ್ರತೆಗೆ ಎಸ್‌ಪಿಜಿ ಸೇರಿ 1200 ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜನಧ್ವನಿ ಕಾರ್ಯಕ್ರಮ ಎರಡು ತಾಸು ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯದರ್ಶಿ ವೇಣುಗೋಪಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ದಿನೇಶ ಗುಂಡೂರಾವ್, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಸಚಿವ ಡಿ.ಕೆ. ಶಿವಕುಮಾರ ಸೇರಿ ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮದ ವೇಳೆ ರಾಹುಲ್ ಅವರನ್ನು ಈಶ್ವರ ಖಂಡ್ರೆ ವಿಶೇಷವಾಗಿ ಸನ್ಮಾನಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಬೀದರ ಏರ್‌ಬೇಸ್‌ದಿಂದ ಹೈದ್ರಾಬಾದ್‌ಗೆ ತೆರಳಲಿದ್ದಾರೆ.ನೆಹರು ಕ್ರೀಡಾಂಗಣದಲ್ಲಿ ದೊಡ್ಡ ವೇದಿಕೆ ನಿರ್ಮಿಸಲಾಗಿದ್ದು, ಮಳೆ ಬಂದರೂ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 30 ಸಾವಿರಕ್ಕೂ ಅ ಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಬೀದರ ಜಿಲ್ಲೆಯಿಂದ ಲೋಕಸಭೆ ಚುನಾವಣೆಗೆ ಚಾಲನೆ ನೀಡಲಾಗುತ್ತಿದೆ. ಸೋಮವಾರ ನಡೆಯುವ ಸಮಾವೇಶದಲ್ಲಿ 2 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಬರುವ ಬೀದರ ಕಾರ್ಯಕ್ರಮದ ನಂತರ ಎರಡು ದಿನಗಳ ಕಾಲ ರಾಹುಲ್ ಗಾಂಧಿ ತೆಲಂಗಾಣದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
– ದಿನೇಶ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
ರಾಹುಲ್ ಗಾಂಧಿ ಸಮಾವೇಶಕ್ಕೆ ನೆಹರು ಕ್ರೀಡಾಂಗಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. 2 ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಸಿದ್ಧವಾಗಿದೆ. ರಾಹುಲ್ ಬೀದರ ಕ್ಷೇತ್ರದಿಂದ ಸ್ಪ ರ್ಧಿಸಲು ಆಹ್ವಾನ ನೀಡುತ್ತೇನೆ.
– ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ.