Advertisement
ಗುರುವಾರ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲ ಸ್ಥಳೀಯ ನಾಯಕರೂ ಒಗ್ಗಟ್ಟಿನಿಂದ ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್ ಶಕ್ತಿ ನೋಡಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಜೊತೆಗೆ ಕೇಂದ್ರದ 20 ಕ್ಕೂ ಹೆಚ್ಚು ಸಚಿವರು ಹೆದರಿ ಇಲ್ಲಿ ಬಂದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅವರು ಇಲ್ಲಿ ಬಂದು ಪ್ರಚಾರ ಮಾಡಿದಷ್ಟು ನಮಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ಈ ಚುನಾವಣೆಯು ಸ್ಥಳೀಯ ಸಂಸ್ಕೃತಿ -ಭಾಷೆ ಹತ್ತಿಕ್ಕುವ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ಹಾಗೂ ಪ್ರಾದೇಶಿಕತೆಯ ನಡುವಿನ ಹೋರಾಟವಾಗಿದೆ ಎಂದು ಬಣ್ಣಿಸಿದರು. ಕಾಂಗ್ರೆಸ್ ಪಕ್ಷವು ಹೊರಗಡೆಯಿಂದ ನಾಯಕರನ್ನು ತಂದು ಪ್ರಚಾರ ಮಾಡಲು ಬಯಸಿಲ್ಲ. ನಮಗೆ ಪ್ರಬಲ ಸ್ಥಳೀಯ ನಾಯಕರಿದ್ದಾರೆ ಎಂದು ಸಮರ್ಥಿಸಿಕೊಂಡ ರಾಹುಲ್‌ಗಾಂಧಿ, ಆರ್‌ಎಸ್‌ಎಸ್ ಬಿಜೆಪಿ ಸೇರಿ ಎಲ್ಲರನ್ನೂ ಹಿಡಿತದಲ್ಲಿಟ್ಟುಕೊಳ್ಳಲು ಬಯಸುತ್ತಿದೆ. ಬಸವಣ್ಣನ ತತ್ವ ಸಿದ್ದಾಂತಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ಮೋದಿಗೆ ಈ ಬಗ್ಗೆ ಸಿಟ್ಟಿದೆ. ಆ ಸಿಟ್ಟನ್ನು ಇಲ್ಲಿ ಹೊರ ಹಾಕುತ್ತಿದ್ದಾರೆ. ಅದು ಅವರ ಸಮಸ್ಯೆ. ನಾವು ದೇಶದ ಜನರ ಸಮಸ್ಯೆ ಬಗ್ಗೆ ಯೋಚನೆ ಮಾಡತ್ತಿದ್ದೇವೆ ಎಂದು ಟಾಂಗ್ ನೀಡಿದರು. ಬಿಜೆಪಿ ನಕಾರಾತ್ಮಕ ಪ್ರಚಾರ
ಕಾಂಗ್ರೆಸ್ ಅಭಿವೃದ್ದಿ ಪರವಾಗಿ ಪ್ರಚಾರ ಮಾಡುತ್ತಿದೆ. ಆದರೆ ಬಿಜೆಪಿ ನಕಾರಾತ್ಮಕ ಪ್ರಚಾರ, ವೈಯಕ್ತಿಕ ನಿಂದನೆ ಮಾಡುವುದರಲ್ಲಿ ತೊಡಗಿದೆ. ಕಾಂಗ್ರೆಸ್ ಐದು ವರ್ಷದಲ್ಲಿ ಏನು ಮಾಡಿದ್ದೇವೆ ಮತ್ತು ಮುಂದಿನ ಐದು ವರ್ಷದಲ್ಲಿ ಏನು ಮಾಡುತ್ತೇವೆ ಎನ್ನುವುದನ್ನು ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಆದರೆ, ಬಿಜೆಪಿಯವರು ರೂಮಿನಲ್ಲಿ ಕುಳಿತು ಮೂರು ದಿನದಲ್ಲಿ ನಮ್ಮ ಪ್ರಣಾಳಿಕೆಯ ಅರ್ಧ ಅಂಶಗಳನ್ನು ಕದ್ದು ಪ್ರಣಾಳಿಕೆ ರಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
Related Articles
ಬಿಜೆಪಿಗೆ ಒಳ್ಳೆ ಡೀಲ್ ರಫೆಲ್ ಯುದ್ಧ ವಿಮಾನ ಖರೀದಿ ಒಳ್ಳೆಯ ಡೀಲ್ ಎಂದಿರುವ ಪ್ರಧಾನಿ ಮಾತು ಸರಿಯಾಗಿದೆ. ಆದರೆ, ಅದು ದೇಶಕ್ಕೆ ಒಳ್ಳೆಯದಲ್ಲ ಬಿಜೆಪಿಯವರಿಗೆ ಮತ್ತು ಪ್ರಧಾನಿ ಸ್ನೇಹಿತರಿಗೆ ಒಳ್ಳೆಯ ಡೀಲ್ ಆಗಿದೆ. ಇದರಿಂದ ರಾಜ್ಯದ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯುತ್ತಿತ್ತು ಎಂದು ಹೇಳಿದರು.
Advertisement
ಕಾಂಗ್ರೆಸ್ ದಲಿತರ ಪರಕಾಂಗ್ರೆಸ್ ಯಾವಾಗಲೂ ದಲಿತರ ಪರವಾಗಿ ನಿಲ್ಲುತ್ತದೆ. ರೊಹಿತ್ ವೆಮ್ಯುಲ್ ಪ್ರಕರಣ, ಊನಾದಲ್ಲಿ ದಲಿತರ ಮೇಲಿನ ಹಲ್ಲೆ ನಡೆದರೂ ಪ್ರಧಾನಿ ತುಟಿ ಬಿಚ್ಚುವುದಿಲ್ಲ. ನಾವು ದಲಿತರ ಪರವಾಗಿ ಧ್ವನಿ ಎತ್ತುತ್ತೇವೆ. ಪ್ರಧಾನಿ ಇಡೀ ದೇಶದ ದಲಿತರ ಏಳಿಗೆಗೆ ನೀಡಿದ ಹಣದ ಅರ್ಧದಷ್ಟು ಹಣವನ್ನು ಕರ್ನಾಟಕ ರಾಜ್ಯ ನೀಡುತ್ತದೆ. ಇದು ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು. ಮಹಿಳೆಯರ ಮೇಲಿನ ಅತ್ಯಾಚಾರ ಚುನಾವಣೆಯ ವಿಷಯವಲ್ಲ. ಇದು ಮೂಲಭೂತ ವಿಷಯ. ಇದರ ಬಗ್ಗೆ ರಾಜಕೀಯವಾಗಿ ಮಾತನಾಡುವುದಲ್ಲ. ರೈತರಿಗೆ ಹಣ ನೀಡಿಲ್ಲ
ರೈತರ ಸಾಲ ಮನ್ನಾ ಬಗ್ಗೆ ಪ್ರಧಾನಿ ರಾಜಕೀಯವಾಗಿ ಮಾತನಾಡಲಿ.ದೇಶದ ರೈತರಿಗೆ ಒಂದೇ ಒಂದು ರೂ. ನೀಡಿಲ್ಲ. ರೆಡ್ಡಿ ಸೋದರರು ರಾಜ್ಯದ ಜನತೆಯ 35 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಯಾಕೆ ಮಾತನಾಡುತ್ತಿಲ್ಲ ಎಂದು ರಾಹುಲ್ ಪ್ರಶ್ನಿಸಿದರು. ಮಹದಾಯಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿವಾದವನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಹಿಂದುತ್ವ ಸರಿಯಾಗಿ ಅರ್ಥವಾಗಿಲ್ಲ
ಮಂದಿರ ಮಸೀದಿ, ಚರ್ಚ್‌ಗೆ ಭೇಟಿ ನೀಡಿರುವುದನ್ನು ಸಮರ್ಥಿಸಿಕೊಂಡ ರಾಹುಲ್ ಗಾಂಧಿ, ನಾನು ಎಲ್ಲರನ್ನೂ ಗೌರವಿಸುತ್ತೇವೆ. ಬಿಜೆಪಿಯರಿಗೆ ಅದು ಸಹಿಸಲು ಆಗುತ್ತಿಲ್ಲ. ಬಿಜೆಪಿಯವರು ಹಿಂದುತ್ವದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವುದನ್ನು ಸಮರ್ಥಿಸಿಕೊಂಡ ಅವರು ಸಮುದಾಯದ ಬೇಡಿಕೆಯನ್ನು ಕಾಂಗ್ರೆಸ್ ಗೌರವಿಸಿದೆ ಎಂದರು. ನನ್ನ ತಾಯಿ ಭಾರತೀಯರು
ತಮ್ಮ ಹಾಗೂ ತಮ್ಮ ತಾಯಿಯ ಬಗ್ಗೆ ಮಾತನಾಡುವುದರಿಂದ ಬಿಜೆಪಿಗೆ ಖುಷಿಯಾಗುತ್ತದೆ ಎಂದರೆ ಮಾತನಾಡಿಕೊಳ್ಳಲಿ, ನನ್ನ ತಾಯಿ ಇಟಲಿ ಮೂಲದವರಾಗಿದ್ದರೂ, ಅನೇಕ ವರ್ಷದಿಂದ ಭಾರತೀಯರಾಗಿದ್ದಾರೆ. ಅವರು ದೇಶಕ್ಕಾಗಿ ಕಷ್ಟ ಪಟ್ಟಿದ್ದಾರೆ. ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ಕರ್ನಾಟಕದ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಒಂದು ಕಡೆ ಪ್ರಾಮಾಣಿಕ ವ್ಯಕ್ತಿ ಸಿದ್ದರಾಮಯ್ಯ ಇದ್ದಾರೆ. ಇನ್ನೊಂದು ಕಡೆ ಭ್ರಷ್ಟಾಚಾರ ಆರೋಪದಲ್ಲಿ ಮುಳುಗಿದ್ದ ಬಿ.ಎಸ್. ಯಡಿಯೂರಪ್ಪ ಇದ್ದಾರೆ. ಈ ಚುನಾವಣೆಯಿಂದ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಗೆ ಆಗುವುದೇನೂ ಇಲ್ಲ. ಇದು ಕರ್ನಾಟಕದ ಭವಿಷ್ಯಕ್ಕೆ ಸಂಬಂಧಿಸಿದ ಚುನಾವಣೆ. ಅವರು ಕೇವಲ ವಿನಾಶದ ಬಗ್ಗೆ ಮಾತನಾಡುತ್ತಾರೆ. ನಾನು ಅದರಲ್ಲಿ ಪಾಲ್ಗೊಳ್ಳುವುದಿಲ್ಲ.
– ರಾಹುಲ್‌ಗಾಂಧಿ