Advertisement

Pranab Mukherjee: ಅಧ್ಯಾದೇಶ ರಾಹುಲ್‌ ಹರಿದಿದ್ದು, ಯುಪಿಎಗೆ ಹೊಡೆದ ಕೊನೆಯ ಮೊಳೆ

12:23 AM Dec 07, 2023 | Team Udayavani |

ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ದಿ| ಪ್ರಣವ್‌ ಮುಖರ್ಜಿ ಅವರ ಕುರಿತು ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಬರೆದಿರುವ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. “ಪ್ರಣವ್‌, ಮೈ ಫಾದರ್‌: ಎ ಡಾಟರ್‌ ರಿಮೆಂಬರ್’ ಪುಸ್ತಕದಲ್ಲಿ ಅವರು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದೊಂದಿಗೆ ಪ್ರಣವ್‌ ಮುಖರ್ಜಿ ಅವರು ಹೊಂದಿದ್ದ ಒಡನಾಟದ ಕುರಿತು ಪ್ರಸ್ತಾವಿಸಿದ್ದಾರೆ.

Advertisement

“ರಾಹುಲ್‌ ಗಾಂಧಿ ಅವರು ವಿನಯ ಶೀಲ. ತಲೆಯ ತುಂಬ ಪ್ರಶ್ನೆಗಳನ್ನೇ ಹೊಂದಿದ್ದಾರೆ. ಆದರೆ ರಾಜಕೀಯವಾಗಿ ಇನ್ನೂ ಪ್ರಬುದ್ಧತೆ ಹೊಂದಿಲ್ಲ. ಅಂತಹ ಯಾವುದೇ ಯೋಗ್ಯತೆ ಇಲ್ಲದಿದ್ದರೂ, ಗಾಂಧಿ- ನೆಹರೂ ಕುಟುಂಬದ ಎಲ್ಲ ದುರಹಂಕಾರಗಳನ್ನೂ ಅವರು ಹೊಂದಿದ್ದಾರೆ’ ಎಂದು ಪ್ರಣವ್‌ ಹೇಳಿದ್ದರು ಎಂದು ಪುಸ್ತಕದಲ್ಲಿದೆ. ಅಷ್ಟು ಮಾತ್ರವಲ್ಲ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಸರಕಾರ, ಅಪರಾಧಿಗಳೆಂದು ಸಾಬೀತಾದ ನಾಯಕರು ಅನರ್ಹರಾಗುವುದನ್ನು ತಪ್ಪಿಸಲು ಹೊರಡಿಸಿದ್ದ ಅಧ್ಯಾದೇಶವನ್ನು ಪತ್ರಿಕಾಗೋಷ್ಠಿ ಯಲ್ಲೇ ಹರಿದು ಹಾಕಿದ್ದರು. ಇದು ಯುಪಿಎ ಸರಕಾರದ ಮೇಲೆ ಹೊಡೆದ ಕೊನೆಯ ಮೊಳೆ ಎಂದೂ ಪ್ರಣವ್‌ಹೇಳಿದ್ದರೆಂದು ಪುಸ್ತಕದಲ್ಲಿದೆ.

“ಅವರು ತಮ್ಮನ್ನು ತಾವು ಏನೆಂದು ಭಾವಿಸಿದ್ದಾರೆ? ಸಂಪುಟದ ಸದಸ್ಯರಲ್ಲದ ಅವರು ಸಂಪುಟದ ತೀರ್ಮಾನದ ಪ್ರತಿಯನ್ನು ಹರಿಯಲು ಏನು ಅಧಿಕಾರವಿದೆ? ತಮ್ಮ ಕ್ರಿಯೆಯ ಪರಿ ಣಾಮ ವನ್ನು ಅವರು ಅರಿತಿಲ್ಲ. ಪ್ರಧಾನಿ ಯನ್ನು ಅವಮಾನಿಸಲು ಅವರಿಗೆ ಏನು ಹಕ್ಕಿದೆ?’ ಎಂದು ರಾಹುಲ್‌ ಬಗ್ಗೆ ಪ್ರಣವ್‌ ಕ್ರೋಧಗೊಂಡಿದ್ದರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next