Advertisement

ರಾಹುಲ್‌ ಗಾಂಧಿ ಪ್ರಧಾನಿಯಾಗುವುದು ಖಚಿತ

01:00 AM Mar 11, 2019 | Harsha Rao |

ಉಡುಪಿ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ಗೆಲುವು ಸಾಧಿಸಿ ರಾಹುಲ್‌ ಗಾಂಧಿ ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ, ರಾಜ್ಯ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ರವಿವಾರ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಜರಗಿದ “ಪರಿವರ್ತನಾ ರ್ಯಾಲಿ’ಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಕಳೆದ ಚುನಾವಣೆ ವೇಳೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ 27 ಲಕ್ಷ ಉದ್ಯೋಗ ಮಾತ್ರ ಸೃಷ್ಟಿಸಿದ್ದಾರೆ. 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿರುದ್ಯೋಗದ ಪ್ರಮಾಣ ಶೇ. 7.2ರಷ್ಟು ಹೆಚ್ಚಾಗಿದೆ. ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ವಾಪಸ್‌ ತರುತ್ತೇನೆ, ರೈತರ ಬೆಳೆಗೆ ಶೇ. 50ರಷ್ಟು ಹೆಚ್ಚು ಬೆಲೆ ಸಿಗುವಂತೆ ಮಾಡುತ್ತೇನೆ, ದೇಶವನ್ನು ಕಾಯುವ ಚೌಕಿದಾರ್‌ ಆಗುತ್ತೇನೆ ಎಂದು ಭರವಸೆ ನೀಡಿ ಭ್ರಮಾಲೋಕ ಸೃಷ್ಟಿಸಿದ್ದರು. ಆದರೆ ಈಗ ಎಷ್ಟು ಈಡೇರಿಸಿದ್ದಾರೆ ಎಂಬ ಬಗ್ಗೆ ಮಾತನಾಡುತ್ತಿಲ್ಲ. ಅವರು ಈಗ ಚೋರ್‌ ಹೇ ಚೌಕಿದಾರ್‌, ಭ್ರಷ್ಟಾಚಾರದ ಭಾಗೀದಾರ್‌ ಎಂದು ಕರೆಯಲ್ಪಡುತ್ತಿದ್ದಾರೆ ಎಂದರು.

ಸುಳ್ಳ ಪ್ರಧಾನಿ
ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಬಂದಿಲ್ಲ. ಮೋದಿ ಮತ್ತೆ ಪ್ರಧಾನಿ ಆಗಬಾರದು. ಈ ಬಾರಿಯ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಥವಾ ಮೋದಿ ಮತ್ತು ರಾಹುಲ್‌ ಗಾಂಧಿ ನಡುವಿನದಲ್ಲ. ಅದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸತ್ಯದ ಉಳಿವಿಗಾಗಿ ನಡೆಯುವ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದರು.

ಶಾಸಕರ ಖರೀದಿಗೆ ಮೋದಿ ಹಣ
ರಾಜ್ಯದ ಸಮ್ಮಿಶ್ರ ಸರಕಾರವನ್ನು ಕಿತ್ತು ಹಾಕುವುದಕ್ಕಾಗಿ ಶಾಸಕರನ್ನು ಖರೀದಿ ಸಲು ಮೋದಿ ಮತ್ತು ಅಮಿತ್‌ ಶಾ 500 ಕೋ.ರೂ.ಗಳನ್ನು ರಾಜ್ಯ ಬಿಜೆಪಿಗೆ ನೀಡಿದ್ದಾರೆ. ಈ ಹಣ ಅಂಬಾನಿಯಿಂದ ಪಡೆದಿದ್ದಾರೆ ಎಂದು ಆರೋಪಿಸಿದರು.

Advertisement

ಇಂದಿರಾ ಗಾಂಧಿ ಬಡವರಿಗೆ ಬಾಗಿಲು
 ತೆರೆದಿದ್ದರು. ಆದರೆ ಮೋದಿ ಶ್ರೀಮಂತ ರಿಗೆ ಮಾತ್ರ ಬಾಗಿಲು ತೆರೆದಿದ್ದಾರೆ. ರೈತರ ಸಾಲಮನ್ನಾ ಮಾಡಿಲ್ಲ. 56 ಇಂಚಿನ ಎದೆ ಇದ್ದರೆ ಸಾಲದು, ಬಡವರ ಬಗ್ಗೆ ಕಾಳಜಿ ಇರುವ ಎದೆ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಕೊಲೆ ಮಾಡುತ್ತಾರೆ, ಮಾಡಿಸುತ್ತಾರೆ. ಅವರು ರಾಕ್ಷಸೀ ಪ್ರವೃತ್ತಿ ಯವರು. ಕಾಂಗ್ರೆಸ್‌ ದೇಶ, ಸಮಾಜ ಕಟ್ಟುವ ಕೆಲಸ ಮಾಡಿದೆ. ಅಚ್ಛೇ ದಿನ್‌ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.

“ಶೋಭಾ ಗೋ ಬ್ಯಾಕ್‌’ ಯಾಕೆಂದರೆ…
ಸಂಸದೆಯಾಗಿ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕೊಡುಗೆ ಶೂನ್ಯ. ಇದೇ ಕಾರಣಕ್ಕೆ ಅವರ ಪಕ್ಷದವರೇ “ಗೋ ಬ್ಯಾಕ್‌’ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಯು.ಟಿ. ಖಾದರ್‌, ಆಸ್ಕರ್‌ ಫೆರ್ನಾಂಡಿಸ್‌, ಬ್ಲೋಸಂ ಫೆರ್ನಾಂಡಿಸ್‌, ರಾಜೇಗೌಡ, ಐವನ್‌ ಡಿ’ಸೋಜಾ, ಸಚಿನ್‌ ಮೀಗಾ, ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಪುಷ್ಪಾ ಅಮರನಾಥ್‌, ಆರತಿ ಕೃಷ್ಣ, ಡಾ| ವಿಜಯ ಕುಮಾರ್‌, ವಿಷ್ಣುನಾಥನ್‌, ಜನಾರ್ದನ ತೋನ್ಸೆ, ರಾಕೇಶ್‌ ಮಲ್ಲಿ, ಮಮತಾ ಗಟ್ಟಿ, ಡಾ| ದೇವಿಪ್ರಸಾದ್‌ ಶೆಟ್ಟಿ, ಜಿ.ಎ. ಬಾವಾ, ಅಮೃತ್‌ ಶೆಣೈ, ಪ್ರಖ್ಯಾತ್‌ ಶೆಟ್ಟಿ, ಹರೀಶ್‌ ಕಿಣಿ, ರಮೇಶ್‌ ಕಾಂಚನ್‌, ಯತೀಶ್‌ ಕರ್ಕೇರ ಉಪಸ್ಥಿತರಿದ್ದರು. 
ಅಶೋಕ್‌ ಕುಮಾರ್‌ ಕೊಡವೂರು ಅವರು ಸ್ವಾಗತಿಸಿದರು. ನರಸಿಂಹ ಮೂರ್ತಿ ಮತ್ತು ಎಂ.ಎ. ಗಫ‌ೂರ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಮೈತ್ರಿ ಒಪ್ಪಂದ ಪ್ರಕಾರ  ಮಂಡ್ಯ ಜೆಡಿಎಸ್‌ಗೆ
ಮಂಗಳೂರು
: ಮೈತ್ರಿ ಸರಕಾರದ ಒಪ್ಪಂದದ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರವು ಜೆಡಿಎಸ್‌ಗೆ ಹೋಗುವ ಸಾಧ್ಯತೆ ಇದೆ ಎಂದು ರಾಜ್ಯದ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಕೂಟದ ಸಮನ್ವಯ ಸಮಿತಿ ಸಂಚಾಲಕ ಸಿದ್ದರಾಮಯ್ಯ ತಿಳಿಸಿದರು.

ರವಿವಾರ ಪೊಳಲಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಮೈತ್ರಿಯ ಒಪ್ಪಂದದ ಪ್ರಕಾರ ಈಗ ಎಲ್ಲೆಲ್ಲಿ ಕಾಂಗ್ರೆಸ್‌ ಪಕ್ಷದ ಸಂಸದರಿದ್ದಾರೋ ಅಲ್ಲಿ ಕಾಂಗ್ರೆಸ್‌ಗೆ ಬಿಟ್ಟು ಕೊಡಬೇಕು ಹಾಗೂ ಜೆಡಿಎಸ್‌ ಸಂಸದರು ಇದ್ದ ಕಡೆ ಜೆಡಿಎಸ್‌ಗೆ ಬಿಟ್ಟು ಕೊಡಬೇಕಾಗುತ್ತದೆ. ಅದರಂತೆ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕಾಗಬಹುದು ಎಂದು ತಿಳಿಸಿದರು. ಆದರೆ ಜೆಡಿಎಸ್‌ನಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಗೊತ್ತಿಲ್ಲ ಎಂದರು.

ಸೀಟುಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಬಗ್ಗೆ ಯಾವುದೇ ಗೊಂದಲ ಇಲ್ಲ. ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ವಿವರಿಸಿದರು.

ಸತೀಶ್‌ ಜಾರಕಿಹೊಳಿ ಬಿಜೆಪಿ ಸೇರುವ ಸುದ್ದಿ ಇದೆಯಲ್ಲವೇ ಎಂದು ಸುದ್ದಿಗಾರರು ಪ್ರಸ್ತಾವಿಸಿದಾಗ, ಆರು ತಿಂಗಳುಗಳಿಂದ ಅದು ಸುದ್ದಿಯಾಗಿಯೇ ಇದೆ. ಆ ಸುದ್ದಿ ನಿಮ್ಮ ಹತ್ತಿರವೇ ಇದೆ, ನೀವೇ ಇರಿಸಿಕೊಳ್ಳಿ’ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಚಾರಕ್ಕೆ  ಸೇನೆ ಹೆಸರು ಬೇಡ
ಉಡುಪಿ: ಪಾಕಿಸ್ಥಾನದ ವಿರುದ್ಧ ಇನ್ನೊಂದು ಸರ್ಜಿಕಲ್‌ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಂತಹ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸಬಾರದು. ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಪಾಕಿಸ್ಥಾನದ ವಿರುದ್ಧ ಭಾರತ ಯುದ್ಧ ನಡೆಸಿ
ಸೋಲಿಸಿತ್ತು. ಬಾಂಗ್ಲಾ ವಿಮೋಚನೆ ಕೂಡ ಆಗಿತ್ತು. ಈ ಬಗ್ಗೆ ರಾಜನಾಥ್‌ ಏನನ್ನುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ ಸಮಾವೇಶದ ಪ್ರಯುಕ್ತ ರವಿವಾರ ಉಡುಪಿಗೆ ಆಗಮಿಸಿದ್ದ ಅವರು ಖಾಸಗಿ ಹೊಟೇಲ್‌ನಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ರಾಜನಾಥ್‌ ರಾಜ್ಯ ಸರಕಾರವನ್ನು ಕಿಚಡಿ ಸರಕಾರ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಮಿಳು ನಾಡು, ಬಿಹಾರ, ಮಹಾರಾಷ್ಟ್ರದಲ್ಲಿ ಬಿಜೆಪಿಯವರೇ ಕಿಚಡಿ ಸರಕಾರ ಮಾಡುತ್ತಿದ್ದಾರೆ. ಅವರಿಗೆ ರಾಜ್ಯ ಸರಕಾ ರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ  ಎಂದರು.

ಅನಂತ ಕುಮಾರ್‌ ಹೆಗಡೆ ಅವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅಂತಹವರು ರಾಜಕೀಯದಲ್ಲಿ ಇರಬಾರದು ಎಂದು ತಿಳಿಸಿದರು.

ಪುಲ್ವಾಮಾದಲ್ಲಿ ಸೈನಿಕರು ಹುತಾತ್ಮರಾಗಲು ಭದ್ರತಾ ವೈಫ‌ಲ್ಯ ಕಾರಣ. ಸರ್ಜಿಕಲ್‌ ಸ್ಟ್ರೈಕ್‌ಗೆ ನಾನು ಸೆಲ್ಯೂಟ್‌ ಮಾಡುತ್ತೇನೆ. ಆದರೆ ಮೋದಿಯವರ ವೈಫ‌ಲ್ಯ ಮುಚ್ಚಿ ಹಾಕಲು, ರಾಜಕೀಯ ಲಾಭ ಪಡೆಯಲು ಇದನ್ನು ಬಳಕೆ ಮಾಡಲಾಗುತ್ತಿದೆ. ಬಿಜೆಪಿ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳೆಂದು ಕರೆಯಲಾಗುತ್ತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವು ಸುಲಭ ಇಲ್ಲ. ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಅಭ್ಯರ್ಥಿ ಯಾರೇ ಆದರೂ ಒಂದಾಗಿ ಕೆಲಸ ಮಾಡಬೇಕು. ಜನ ಬದಲಾವಣೆ ಬಯಸುತ್ತಿದ್ದಾರೆ.
 -ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

ಮೋದಿ ಸರಕಾರ ಮಹಿಳಾಪರ ಚಿಂತನೆ ಇಲ್ಲದ್ದು. ವಿಕಾಸ್‌ ಎಂದು ಹೇಳಿ ವಿನಾಶ ಮಾಡಿದರು. ಕೇಂದ್ರ ನಿರ್ಲಕ್ಷಿಸಿದ ಯೋಜನೆಗಳನ್ನು ರಾಜ್ಯ ಸರಕಾರ ಮಾಡಿದೆ. ಒಂದು ಹೆತ್ತವಳು ಏಳು ಹೆತ್ತವಳನ್ನು ಕೇಳುವಂತೆ ಮೋದಿ ಸರಕಾರ, ಕಾಂಗ್ರೆಸ್‌ ಏನು ಮಾಡಿದೆ ಎಂದು ಕೇಳುತ್ತಿದೆ. ನಾವು ಏಳು ಹೆತ್ತವರು, ಸದ್ದು ಮಾಡದೆ ಕೆಲಸ ಮಾಡುವುದು ಕಾಂಗ್ರೆಸ್‌ ಸಂಸ್ಕೃತಿ.
-ಡಾ| ಜಯಮಾಲಾ, ಸಚಿವೆ

ಐದು ವರ್ಷಗಳಲ್ಲಿ ಅತೀ ಹೆಚ್ಚು ಉಗ್ರರು ನುಸುಳಿದ್ದಾರೆ. ಮೋದಿಯವರಿಗೆ ಏನೂ ಮಾಡಲಾಗಲಿಲ್ಲ. ಇಂದಿರಾ ಗಾಂಧಿ ಪಾಕಿಸ್ಥಾನವನ್ನು ಸೋಲಿಸಿದರು. ಆದರೆ ಮೋದಿ ಪಟಾಕಿ ಮಾತ್ರ ಹೊಡೆಯುತ್ತಿದ್ದಾರೆ. 
-ಬಿ.ಕೆ. ಹರಿಪ್ರಸಾದ್‌, ರಾಜ್ಯಸಭಾ ಸದಸ್ಯರು

ಭಾರತದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಸುವರ್ಣ ಯುಗವಿತ್ತು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಸುವರ್ಣ ಯುಗವಿತ್ತು. ನಮಗೆ ಭಾಷಣ ಮಾಡುವ ಎಂಪಿ ಬೇಕಿಲ್ಲ. ಕೆಲಸ ಮಾಡುವವರು ಬೇಕು.  ಅಂಥವರನ್ನೇ ಆಯ್ಕೆ ಮಾಡಿ.
– ಪ್ರಮೋದ್‌ ಮಧ್ವರಾಜ್‌, ಮಾಜಿ ಸಚಿವರು

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರತೀ ಕ್ಷೇತ್ರಕ್ಕೂ 2,000 ಕೋ.ರೂ.ಗೂ ಅಧಿಕ ಅನುದಾನ ಒದಗಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಪ್ರಜಾಸತ್ತೆ ಉಳಿಸಬೇಕು.
-ವಿನಯ ಕುಮಾರ್‌ ಸೊರಕೆ,  ಮಾಜಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next