Advertisement

ಪುನರ್ವಸತಿಗೆ ಪಾಲಿಕೆ ಬಳಿ ಅಹೋರಾತ್ರಿ ಧರಣಿ

04:56 PM Mar 13, 2018 | Team Udayavani |

ದಾವಣಗೆರೆ: ಪುನವರ್ಸತಿ ಕಲ್ಪಿಸಲು ಒತ್ತಾಯಿಸಿ ಸೋಮವಾರ ನಾಗರಿಕ ಮೂಲ ಸೌಕರ್ಯ ಹೋರಾಟ ವೇದಿಕೆ ನೇತೃತ್ವದಲ್ಲಿ ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ನಿವಾಸಿಗಳು ನಗರ ಪಾಲಿಕೆಗೆ ಮುತ್ತಿಗೆ ಹಾಕಿ, ಅಹೋರಾತ್ರಿ ಹೋರಾಟ ಪ್ರಾರಂಭಿಸಿದ್ದಾರೆ.

Advertisement

ಕಳೆದ 35 ವರ್ಷದಿಂದ ರಿಂಗ್‌ ರಸ್ತೆ ನಿವೇಶನದಲ್ಲಿ ವಾಸ ಮಾಡುತ್ತಿರುವ ಬಡವರು, ನಿರ್ಗತಿಕರು ಶಾಶ್ವತ ಸೂರಿಗಾಗಿ 
ಅಲೆಯುತ್ತಿದ್ದಾರೆ. ಆದರೆ, ಯಾರೊಬ್ಬರೂ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. 3 ವರ್ಷದಿಂದ ನಿರಂತರವಾಗಿ ಹೋರಾಟ
ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆಯು ಆಶ್ರಯ ಸಮಿತಿ ಸ್ವಾಧೀನದಲ್ಲಿರುವ ಸರ್ವೇ ನಂಬರ್‌ 144/2ರಲ್ಲಿನ ಜಮೀನು ಅಥವಾ
ನಗರ ವ್ಯಾಪ್ತಿಯಲ್ಲಿ ಬೇರೆ ಕಡೆ ಜಾಗ ಗುರುತಿಸಿ, ಶಾಶ್ವತ ಸೂರು ಒದಗಿಸಲು ಮುಂದಾಗದಿರುವುದು ಖಂಡನೀಯ ಎಂದು 
ಪ್ರತಿಭಟನಾಕಾರರು ಹೇಳಿದರು.

ಈಚೆಗೆ ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಶಿವನಗರದ ಕೊಳಚೆ
ಶುದ್ಧೀಕರಣ ಘಟಕದ ಬಳಿ ತಾತ್ಕಾಲಿಕ ಶೆಡ್‌ ನಿರ್ಮಿಸಿ, ಅಲ್ಲಿಗೆ ಎಲ್ಲ ನಿವಾಸಿಗಳ ಸ್ಥಳಾಂತರ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಪಾಲಿಕೆಯ ಯಾವ ಸಾಮಾನ್ಯ ಸಭೆಯಲ್ಲಿ ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ನಿವಾಸಿಗಳ ಸ್ಥಳಾಂತರ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಇಲ್ಲಿಯವರೆಗೆ ನಿವಾಸಿಗಳ ಬಗ್ಗೆ ಅಪ್ಪಿತಪ್ಪಿಯೂ ಗಮನ ನೀಡದೇ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳು ನಿವಾಸಿಗಳ ಸ್ಥಳಾಂತರಕ್ಕೆ ಅತೀವ ಆಸಕ್ತಿ ತೋರುತ್ತಿರುವ ಏನು ಕಾರಣ ಎಂದು ಪ್ರಶ್ನಿಸಿದರು.

ರಿಂಗ್‌ ರಸ್ತೆಯು ಬಾಷಾನಗರದಿಂದ ಕೊಂಡಜ್ಜಿ ರಸ್ತೆಯವರೆಗೆ ಸಂಪೂರ್ಣವಾಗಿ ಮುಕ್ತವಾಗಿದ್ದರೂ ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿಲ್ಲ. ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ನಿವಾಸಿಗಳು ಶಾಶ್ವತ ಸೂರಿಗಾಗಿ ಹೋರಾಟ
ಮಾಡುತ್ತಿರುವುದರಿಂದ ಅವರನ್ನು ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಸಲಾಗುತ್ತಿದೆ. ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವವರೆಗೆ ಯಾವ ಕಾರಣಕ್ಕೂ ಸ್ಥಳಾಂತರ ಮಾಡುವುದಿಲ್ಲ ಎಂದು ಲಿಖೀತ ಭರವಸೆ ನೀಡಬೇಕು ಎಂದು ಆಗ್ರಹಿದರು. ವೇದಿಕೆ ಸಂಚಾಲಕ ಜೆ. ಅಮಾನುಲ್ಲಾಖಾನ್‌, ಖಾದರ್‌ ಬಾಷಾ, ಸಲೀಂ ಸಾಬ್‌, ಹಸೇನ್‌
ಸಾಬ್‌, ಯು.ಎಂ. ಮನ್ಸೂರ್‌ ಅಲಿ, ಆದಿಲ್‌ ಖಾನ್‌, ವೈ.ಎಂ. ಜಿಕ್ರಿಯಾಸಾಬ್‌, ಬಾಷಾಸಾಬ್‌, ಇನಾಯತ್‌ ಅಲಿಖಾನ್‌, ಅಹಮ್ಮದ್‌ ಬಾಷಾ, ಸೈಯ್ಯದ್‌ ರಸೂಲ್‌ಸಾಬ್‌, ಬಶೀರ್‌, ಗುಲ್ಜಾರ್‌ ಬೀ, ನಜ್ಮುನ್‌ ಬೀ, ಹಮೀದಾಬಾನು, ಸಲೀಮಾಬಾನು, ಶಬಾನಾಬಾನು, ವನಿತಾ, ರತ್ನಮ್ಮ, ರೇಣುಕಾ, ಸೀತಮ್ಮ, ಗೌರಮ್ಮ, ಲಕ್ಷ್ಮಕ್ಕ, ಸಾಯಿರಾಬಾನು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಮಾತಿನ ಚಕಮಕಿ
ಪುನವರ್ಸತಿಗೆ ಒತ್ತಾಯಿಸಿ ನಾಗರಿಕ ಮೂಲ ಸೌಕರ್ಯ ಹೋರಾಟ ವೇದಿಕೆ ನೇತೃತ್ವದಲ್ಲಿ ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ನಿವಾಸಿಗಳು ನಗರ ಪಾಲಿಕೆಗೆ ಮುತ್ತಿಗೆ ಹಾಕಿ, ಅಹೋರಾತ್ರಿ ಹೋರಾಟ ಪ್ರಾರಂಭಿಸಲು ಮಹಾನಗರ ಪಾಲಿಕೆಯತ್ತ ಆಗಮಿಸುತ್ತಿರುವ ವೇಳೆ ಅಖ್ತರ್‌ ರಾಜ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬೈಕ್‌ ರ್ಯಾಲಿ ಆಗಮಿಸಿತು. ಕೆಲವು ಪ್ರತಿಭಟನಾಕಾರರು ಮುಂದೆ ಹೋಗಲು ಅವಕಾಶ ನೀಡದೆ ಜನರನ್ನು ಅಲ್ಲಿಯೇ ತಡೆಯುವ ಯತ್ನ ನಡೆಸಿದರು. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ಪ್ರತಿಭಟನಾ ಮೆರವಣಿಗೆ ಮುಂದಕ್ಕೆ
ಸಾಗಲು ಅವಕಾಶ ಮಾಡಿಕೊಟ್ಟರು. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಸುತ್ತೇವೆ. ಮಂಗಳವಾರ
ದಾವಣಗೆರೆಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘೇರಾವ್‌ ಮಾಡುತ್ತೇವೆ ಎಂದು ಅಹೋರಾತ್ರಿ
ಹೋರಾಟ ನಿರತರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next