ಅಹ್ಮದಾಬಾದ್: ವೈಬ್ರೆಂಟ್ ಗುಜರಾತ್ ಜಾಗತಿಕ ಹೂಡಿಕೆ ಸಮಾವೇಶ ಹಿನ್ನೆಲೆಯಲ್ಲಿ ಗುಜರಾತ್‌ನ ಅಹ್ಮದಾಬಾದ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮಂಗಳವಾರ ಸಂಜೆ ರೋಡ್ ಶೋ ನಡೆಸಿದರು.
ಇದಕ್ಕೂ ಮುನ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುಎಇ ಅಧ್ಯಕ್ಷರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಅನಂತರ ಉಭಯ ನಾಯಕರು ವಿಮಾನ ನಿಲ್ದಾಣದಿಂದ ಇಂದಿರಾ ಸೇತುವೆವರೆಗೆ ರೋಡ್ ಶೋ ನಡೆಸಿದರು. ರಸ್ತೆಗಳ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯ ಸಾರ್ವಜನಿಕರು ನೆರೆದಿದ್ದರು. ಸಾಂಸ್ಕೃತಿಕ ತಂಡಗಳಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಅನಂತರ ಗಾಂಧಿನಗರದ ಹೆಲಿಪ್ಯಾಡ್ ಮೈದಾನ ಪ್ರದರ್ಶನ ಕೇಂದ್ರದಲ್ಲಿ “ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ 2024′ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಬುಧ ವಾ ರ ವೈಬ್ರೆಂಟ್ ಗುಜರಾತ್ ಜಾಗತಿಕ ಆರ್ಥಿಕ ಹೂಡಿಕೆ ಸಮಾವೇಶ ಆರಂಭವಾಗಲಿದೆ. ಈ ಸಮಾವೇಶದಲ್ಲಿ 20 ದೇಶಗಳು ಭಾಗವಹಿಸುತ್ತಿವೆ.
ಸಿಇಒಗಳೊಂದಿಗೆ ಪ್ರಧಾನಿ ಸಭೆ
ಜಲಜನಕ ಆಧಾರಿತ ಹಸುರು ಇಂಧನ ಬಳಕೆಯ ವಾಹನಗಳನ್ನು ಭಾರತದಲ್ಲಿ ತಯಾರಿಸುವ ಕುರಿತು ಬಹುರಾಷ್ಟ್ರೀಯ ಕಂಪೆನಿಗಳ ಸಿಇಒಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲು, ಆರ್ಥಿಕತೆ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಕುರಿತು ಕಂಪೆನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು.