ಮುಂಬಯಿ: ಮಹಾರಾಷ್ಟ್ರ ಗದ್ದುಗೆಯೇರಲು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಪ್ರಯತ್ನ ನಡೆಸುತ್ತಿರುವಂತೆಯೇ, ಒಂದು ವೇಳೆ ಈ ಸರಕಾರ ರಚನೆಯಾದರೆ, ಭಾರತದ ಮೊದಲ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆ ಹಳ್ಳ ಹಿಡಿಯಲಿದೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಅಹಮದಾಬಾದ್-ಮುಂಬಯಿ ನಡುವಿನ ಒಂದು ಲಕ್ಷ ಕೋಟಿ ರೂ. ವೆಚ್ಚದ ಹೈಸ್ಪೀಡ್ ಬುಲೆಟ್ ರೈಲು ಯೋಜನೆ ಇದಾಗಿದ್ದು, ಯೋಜನೆಗೆ ಕೇಂದ್ರ ಸರಕಾರ ತಿಲಾಂಜಲಿ ಇಡಲಿದೆ ಎಂದು ಮೂಲಗಳು ಹೇಳಿವೆ.
ಈ ಬುಲೆಟ್ ರೈಲು ಯೋಜನೆಗೆ 2017ರಲ್ಲಿ ಜಪಾನ್ ಪ್ರಧಾನಿ ಶಿಂಝೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು. ಯೋಜನೆಗೆ ಜಪಾನ್ 88 ಸಾವಿರ ಕೋಟಿ ರೂ. ಸಾಲವನ್ನು ಶೇ. 0.1 ಬಡ್ಡಿದರಲ್ಲಿ ನೀಡುತ್ತಿದೆ.
ಸದ್ಯ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದರೆ, ಇಡೀ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಬೇಕೆನ್ನುವ ಇಂಗಿತವನ್ನು ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಈ ಹಿಂದಿನ ಒಪ್ಪಂದ ಪ್ರಕಾರ ಮಹಾರಾಷ್ಟ್ರ ಸರಕಾರ 5 ಸಾವಿರ ಕೋಟಿ ರೂ.ಗಳನ್ನು ಬುಲೆಟ್ ರೈಲು ಯೋಜನೆಗೆ ನೀಡಲು ಒಪ್ಪಿಕೊಂಡಿತ್ತು. ಆದರೆ ಈಗ ಎನ್‌ಸಿಪಿ – ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಯಾವುದೇ ಮೊತ್ತವನ್ನು ಭರಸಿಲು ಸಾಧ್ಯವಿಲ್ಲ ಎಂಬುದನ್ನು ಹೇಳಿದ್ದಾರೆ.
ಸರಕಾರ ಅಸ್ತಿತ್ವಕ್ಕೆ ಬಂದರೆ ಈ ವಿಚಾರವನ್ನು ಕೇಂದ್ರ ಸರಕಾರಕ್ಕೆ ತಿಳಿಸುವುದಾಗಿಯೂ ಹೇಳಿದ್ದಾರೆ. ಮೂಲ ಯೋಜನೆ ಪ್ರಕಾರ 2023ರಲ್ಲಿ ಯೋಜನೆ ಪೂರ್ಣಗೊಳ್ಳಬೇಕಿದ್ದು 508 ಕಿ.ಮೀ. ಉದ್ದದ ಬುಲೆಟ್ ಮಾರ್ಗ ನಿರ್ಮಾಣವಾಗಲಿದೆ. ಇದರಲ್ಲಿ ಗಂಟೆಗೆ 350 ಕಿ.ಮೀ. ವೇಗದಲ್ಲಿ ಬುಲೆಟ್ ರೈಲು ಓಡಿಸುವ ಉದ್ದೇಶ ಹೊಂದಲಾಗಿತ್ತು.