ಮುಂಬೈ: ಇತ್ತೀಚೆಗೆ ನಡೆದ ಐಸಿಸಿ ಏಕದಿನ ವಿಶ್ವಕಪ್ ಕೂಟದ ಫೈನಲ್ ನಲ್ಲಿ ಬಳಸಲಾದ ಪಿಚ್ ಸಾಧಾರಣ ಎಂದು ಐಸಿಸಿ ವರದಿ ನೀಡಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು.
ಮತ್ತೊಂದೆಡೆ ಫೈನಲ್ ಪಂದ್ಯದ ರೆಫ್ರಿಯಾಗಿದ್ದ ಜಿಂಬಾಬ್ವೆ ಮಾಜಿ ಆಟಗಾರ ಆಂಡಿ ಪೈಕ್ರಾಫ್ಟ್ ಅವರು ಅಹಮದಾಬಾದ್ ನ ಫೈನಲ್ ಪಂದ್ಯದ ಪಿಚ್ ಅತ್ಯುತ್ತಮ ಎಂದು ವರದಿ ನೀಡಿದ್ದರು.
ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಪಿಚ್ ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತ ತಂಡವನ್ನು ಆರು ವಿಕೆಟ್ ಅಂತರದಿಂದ ಸೋಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ ಗಳಲ್ಲಿ 240 ರನ್ ಗಳಿಸಿತ್ತು, ಚೇಸ್ ಮಾಡಿದ ಆಸೀಸ್ ಈ ಗುರಿಯನ್ನು 43 ಓವರ್ ಗಳಲ್ಲಿ ಜಯ ಗಳಿಸಿತ್ತು. ಟ್ರಾವಿಸ್ ಹೆಡ್ ಅದ್ಭುತ ಶತಕ ಬಾರಿಸಿದ್ದರು.
ಕೋಲ್ಕತ್ತಾ, ಲಕ್ನೋ, ಅಹಮದಾಬಾದ್ ಮತ್ತು ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಭಾರತದ ಲೀಗ್ ಪಂದ್ಯಗಳಲ್ಲಿ ಬಳಸಿದ ಪಿಚ್ ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ‘ಸಾಧಾರಣ’ ಎಂದು ವರ್ಗೀಕರಿಸಿದೆ. ಸೆಮಿಫೈನಲ್‌ನಲ್ಲಿ ಭಾರತವು ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಿದ ವಾಂಖೆಡೆ ಸ್ಟೇಡಿಯಂನಲ್ಲಿನ ಪಿಚ್ ‘ಉತ್ತಮ’ ರೇಟಿಂಗ್ ಪಡೆದುಕೊಂಡಿದೆ.
ಇದನ್ನೂ ಓದಿ:ಭಾರತದ ಈ ಅರಮನೆ ಲಂಡನ್‌ನ ಬಕ್ಕಿಂಗ್‌ಹ್ಯಾಮ್ ಪ್ಯಾಲೇಸ್‌ಗಿಂತ 4 ಪಟ್ಟು ದೊಡ್ಡದು.!
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಸೆಮಿಫೈನಲ್ ಗೆ ಆತಿಥ್ಯ ವಹಿಸಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ಗೂ ಐಸಿಸಿ ‘ಸಾಧಾರಣ’ ಎಂದು ರೇಟಿಂಗ್ ನೀಡಿದೆ. ಇದು ಕಡಿಮೆ ಸ್ಕೋರಿಂಗ್ ಪಂದ್ಯವಾಗಿದ್ದು, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟ್ ಮಾಡಿತು. ನಂತರ ಆಸ್ಟ್ರೇಲಿಯ 47.2 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮತ್ತೊಂದೆಡೆ, ಈಡನ್ ಗಾರ್ಡನ್ಸ್ ಪಿಚ್ ಗೆ ಅಂದಿನ ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ‘ಅತ್ಯುತ್ತಮ’ ಎಂಬ ರೇಟಿಂಗ್ ನೀಡಿದ್ದರು.