ಸಿಡ್ನಿ: ಭಾರತ-ಪಾಕಿಸ್ಥಾನದಂತೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಜಾಗತಿಕ ಕ್ರಿಕೆಟಿನ ಬದ್ಧ ಎದುರಾಳಿಗಳು. ವೈರಿಗಳೆಂದರೂ ತಪ್ಪಿಲ್ಲ. ಇತ್ತಂಡಗಳ ನಡುವಿನ ಆ್ಯಶಸ್ ಹಣಾಹಣಿಯೇ ಇದಕ್ಕೆ ಸಾಕ್ಷಿ.
ಆದರೀಗ ಆಸ್ಟ್ರೇಲಿಯನ್ನರು ಇಂಗ್ಲೆಂಡ್ ಪರ ಬ್ಯಾಟಿಂಗ್ ಮಾಡಲಾರಂಭಿಸಿದ್ದಾರೆ. ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಸರಣಿಯನ್ನು 2-2ರಿಂದ ಸಮಬಲಗೊಳಿಸಲಿ ಎಂದು ಆಶಿಸುತ್ತಿದ್ದಾರೆ. ಕಾರಣ, ಆಗ ಆಸ್ಟ್ರೇಲಿಯಕ್ಕೆ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್ ಟಿಕೆಟ್ ಲಭಿಸಲಿದೆ!
ಇಂಗ್ಲೆಂಡ್ ಈಗಾಗಲೇ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಭಾರತದ ಫೈನಲ್ ಪ್ರವೇಶ ಬಹುತೇಕ ಖಚಿತಗೊಂಡಿದೆ. ಆದರೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತರೆ ಫೈನಲ್ ಟಿಕೆಟ್ ಕೈತಪ್ಪಲಿದೆ. ಆಗ ಭಾರತಕ್ಕಿಂತ ಹೆಚ್ಚಿನ “ಗೆಲುವಿನ ಸರಾಸರಿ’ ದಾಖಲಿಸಲಿರುವ ಆಸ್ಟ್ರೇಲಿಯ ದ್ವಿತೀಯ ಸ್ಥಾನಿಯಾಗಿ ಫೈನಲ್‌ಗೆ ನೆಗೆಯಲಿದೆ! ಈ ಕಾರಣಕ್ಕಾಗಿ ಅದು ಆಂಗ್ಲರ ಗೆಲುವನ್ನು ಹಾರೈಸಿಕೊಂಡು ಕುಳಿತಿದೆಯೇ ಹೊರತು ಅವರ ಮೇಲಿನ ಅಭಿಮಾನದಿಂದಲ್ಲ!
ಆಸೀಸ್ ಕೋಚ್ ಹಾರೈಕೆ
ನಾವು ಇಂಗ್ಲೆಂಡ್ ಗೆಲುವನ್ನು ಎದುರು ನೋಡುತ್ತಿದ್ದೇವೆ ಎಂಬುದು ಆಸೀಸ್ ಕ್ರಿಕೆಟ್ ತಂಡದ ಹಂಗಾಮಿ ಕೋಚ್ ಆ್ಯಂಡ್ರೂé ಮೆಕ್‌ಡೊನಾಲ್ಡ್ ಅವರ ಓಪನ್ ಸ್ಟೇಟ್‌ಮೆಂಟ್!
“ಈ ಗೆಲುವು ಇಂಗ್ಲೆಂಡಿಗೆ ಎಷ್ಟು ಮುಖ್ಯವೋ ಅಷ್ಟೇ ಆಸ್ಟ್ರೇಲಿಯಕ್ಕೂ ಮುಖ್ಯವಾಗಿದೆ. ನಾವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಬೇಕಾದರೆ ಭಾರತವನ್ನು ಇಂಗ್ಲೆಂಡ್ ತಂಡ ಮಣಿಸಬೇಕಿದೆ. ಆದ್ದರಿಂದ ಸುದೀರ್ಘ ಕಾಲದ ಬಳಿಕ ನಾವು ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಬೆಂಬಲಿಸುತ್ತಿದ್ದೇವೆ’ ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.
“ಇಂಗ್ಲೆಂಡಿಗರು ತಮ್ಮ ಅಭಿಲಾಷೆ ಯನ್ನು ಈಡೇರಿಸಲಿದ್ದಾರೆ ಎಂಬ ಭರವಸೆ ಹೊಂದಿದ್ದೇವೆ. ರೂಟ್ ಪಡೆ ಅತ್ಯುತ್ತ ಮವಾಗಿ ಪ್ರದರ್ಶನ ನೀಡಲಿ ಎಂದು ಹಾರೈಸುತ್ತೇವೆ’ ಎಂದು ಮೆಕ್‌ಡೊನಾಲ್ಡ್ ಹೇಳಿದರು.