Advertisement
ಸೆಪ್ಟಂಬರ್‌ನಲ್ಲಿ ಅಂದರೆ ನವರಾತ್ರಿ ಸಮಯದ ಯಾವುದಾದರೂ ಒಂದು ದಿನ ಹೊಸ್ತ್ ಆಚರಣೆ ನಮ್ಮಲ್ಲಿದೆ.
Related Articles
Advertisement
ಬೆಳಗ್ಗೆ ಬೇಗ ಎದ್ದು ತಂದಿಟ್ಟ ತೆನೆಗೆ ಮನೆಯ ಗಂಡಸರು ಪೂಜೆ ಮಾಡಿ, ಕಾಯಿ ಒಡೆದು, ಮುಳ್ಳುಸೌತೆ ಕತ್ತರಿಸಿಟ್ಟು, ತೆನೆಗೆ ಹಾಲು ಹಾಕಿ, ಆರತಿ ಮಾಡಿ, ತೆನೆ ಕತ್ತರಿಸಿ ಹರಿವಾಣದಲ್ಲಿ ಇಟ್ಟು, ಮಾವಿನ ಎಲೆ ಮೇಲೆ ಹಲಸಿನ ಎಲೆ ಇಟ್ಟು, ಅದರ ಮೇಲೆ ಬಿದಿರು, ತೆನೆಯಿಟ್ಟು, ಬಲ ಮತ್ತು ಎಡ, ಕೆಳಗಿನಿಂದ ಮಡಚಿ, ಸಾಂತಿನಿಂದ ಕಟ್ಟಿ ನಿಲ್ಲಿಸಿದ ಕೋಲಿಗೆ ಕಟ್ಟುತ್ತಾರೆ. ತಲೆಗೆ ಶುಭ್ರ ವಸ್ತ್ರ ಕಟ್ಟಿಕೊಂಡು, ತಲೆಯ ಮೇಲೆ ಹೊತ್ತು ಶಂಖದ ನಾದದೊಂದಿಗೆ ಅಂಗಳಕ್ಕೆ ತಂದು ಮೇಟಿಕಂಬ(ಮರದ ಕಂಬ)ದ ಕೆಳಕ್ಕೆ ಇಟ್ಟು ಅಲ್ಲೊಂದು ತೆನೆ ಕಟ್ಟಿ, ಮತ್ತೆ ತುಳಸಿಕಟ್ಟೆ ಮೇಲೆ ತಂದಿಟ್ಟು ಅಲ್ಲೊಂದು ಕಟ್ಟಿ, ಪುನಃ ತಲೆಯ ಮೇಲೆ ಹೊತ್ತು ಒಳಗೆ ಬರುವಾಗ ಹುಡುಗಿಯರು ತೆನೆಗೆ ಅಕ್ಷತೆ ಹಾಕಿ, ಕಾಲು ತೊಳೆದು ಬರಮಾಡಿಕೊಳ್ಳುವುದು ಸಂಪ್ರದಾಯ.
ಅನಂತರ ದೇವರ ಮುಂದೆ ರಂಗೋಲಿ ಇಟ್ಟು, ಅದರ ಮೇಲೆ ಮಣೆ ಇಟ್ಟು, ಅದರ ಮೇಲೆ ಹರಿವಾಣ ಇಟ್ಟು, ಉಳಿದ ತೆನೆಯನ್ನು ಬಾಗಿಲು, ಮರ, ಅರೆಯುವ ಕಲ್ಲು, ಗೋಧಿಕಲ್ಲು, ಹಡಿಮಂಚ(ಭತ್ತದ ಸೂಡಿಯನ್ನು ಬಡಿಯಲು ಬಳಸುವ ಮೇಜಿನ ತರಹದ್ದು)ಹೀಗೆ ಎಲ್ಲ ಉಪಕರಣಗಳಿಗೆ ಕಟ್ಟಿ ಸಂಭ್ರಮಿಸಲಾಗುತ್ತದೆ.
ತೆನೆ ತರುವ ಸಮಯದಲ್ಲಿ ಒಲೆ ಮೇಲೆ ಕೆಸು ಹಾಗೂ ಹರಿವೆಗಳನ್ನು ಬೇಯಿಸಲು ಇಡುವ ಪದ್ಧತಿ ಇದೆ. ಮಧ್ಯಾಹ್ನ ಊಟಕ್ಕೆ ಹಲವು ಬಗೆಯ ತರಕಾರಿ ಬಳಸಿ ಅಡುಗೆ ಮಾಡಲಾಗುತ್ತದೆ. ಹಾಗೇ ಕೆಸು, ಹರಿವೆಯ ಸಾರು, ಸೌತೆಕಾಯಿಯ ಒಂದು ರೀತಿಯ ಗಸಿ ಆವಶ್ಯಕ. ಅಕ್ಕಿಗೆ ಹೊಸ ತೆನೆಯ 9(ನವರಾತ್ರಿಯ ವಿಶೇಷ)ಭತ್ತ ಸುಲಿದು ವೀಳ್ಯದೆಲೆ ಮೇಲೆ ಇಟ್ಟು ಹಾಲು ಸುರಿದು ಅನ್ನದ ಪಾತ್ರಕ್ಕೆ ಬಿಟ್ಟು ಪೂಜೆ ಮಾಡುವುದು ವಾಡಿಕೆ.
ಸಂಪ್ರದಾಯವೆಂದರೆ ತಮ್ಮ ಮನೆಯ ಹೊಸ್ತಿನ ಊಟ ಮಾಡದೇ ಬೇರೆಯವರ ಮನೆಯಲ್ಲಿ ಹೊಸ ಅಕ್ಕಿಯನ್ನು ಹಾಕಿದ ಅನ್ನ ಉಣ್ಣುವಂತಿಲ್ಲ. ವಿಶೇಷವೆಂದರೆ ವರ್ಷದಲ್ಲಿ 7 ಮನೆಯ ಹೊಸ್ತ್ ಊಟ ಮಾಡಿದರೆ ಒಳ್ಳೆಯದು ಅನ್ನುತ್ತಾರೆ ಹಿರಿಯರು. ಹಾಗೆಯೇ ಆ ವರ್ಷದಲ್ಲಿ ಮದುವೆಯಾದ ಮನೆಯಲ್ಲಿ ವಿಶೇಷ ತುಸು ಹೆಚ್ಚು. ಆ ದಿನ ಹುಡುಗಿಯ ಮನೆಯವರು ತುಪ್ಪ, ಮೊಟ್ಟೆ, ಅವಲಕ್ಕಿ, ಲಡ್ಡು ಮುಂತಾದ ಉಡುಗೊರೆ ಕೊಟ್ಟು ಊಟ ಮಾಡಿ ಹೋಗಬೇಕು. ಹಾಗೇ ಗಂಡನ ಮನೆಯವರು ಸೊಸೆಗೆ ಹೊಸ ಸೀರೆ ಕೊಡಬೇಕು.ಇದನ್ನು “ಮದಿ ಹೊಸ್ತ್’ ಎನ್ನುತ್ತಾರೆ.
ಪದ್ಧತಿಊಟ ಮಾಡುವ ಮುಂಚೆ ಹಿರಿಯವರಲ್ಲಿ “ಹೊಸ್ತ್ ಉಂತೆ'(ಊಟ ಮಾಡುವೆ) ಎಂದು ಹೇಳಿ ಆಶೀರ್ವಾದ ಪಡೆಯುವುದು ರೂಢಿ. ಊಟ ಮಾಡುವ ಮಧ್ಯದಲ್ಲಿ ಏಳಕೂಡದು. ಹಾಗೇ ಊಟ ಮಾಡಿದ ಅನಂತರ ವೀಳ್ಯದೆಲೆ ತಿನ್ನಬೇಕು. ಎಲೆ ತಿನ್ನುವ ಮುಂಚಿತವಾಗಿ ಸೀನುವಂತಿಲ್ಲ ಇದೆಲ್ಲ ಪದ್ಧತಿ.
ಅಂಜನಿ ಶೆಟ್ಟಿ, ಹಾಲಾಡಿ ಕುಂದಾಪುರ (ಅತಿಥಿ ಅಂಗಳ)