ಭಾರತದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಬಗ್ಗೆ ತಿಳಿದಿರಬಹುದು ಆದರೆ ಅದು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ಅದರಿಂದ ಯಾವೆಲ್ಲಾ ರೀತಿಯ ಅನುಕೂಲಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು.
ಕೃಷಿ ಆಧಾರಿತ ಕೈಗಾರಿಕೆಗಳು ಯಾಕೆ ಬೇಕು?
ಈ ಕೈಗಾರಿಕೆಗಳು ಬಹಳ ಮುಖ್ಯ, ಏಕೆಂದರೆ ಅವು ಕೈಗಾರಿಕಾ ಉತ್ಪನ್ನಗಳನ್ನು, ವಿದೇಶಿ ವಿನಿಮಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಆದಾಯ ಮಟ್ಟವನ್ನು ಹೆಚ್ಚಿಸಿ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತದೆ. ಈ ಕೃಷಿ ಆಧಾರಿತ ಕೈಗಾರಿಕೆಗಳು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾಗಿದೆ. ಈ ಕೈಗಾರಿಕೆಗಳಿಂದ ರೈತರ ಆದಾಯದಲ್ಲಿ ಏರಿಕೆ ಕಂಡು ಬರುವುದಲ್ಲದೆ ಮಾರುಕಟ್ಟೆಯ ವಿಸ್ತರಣೆಗೆ ಸುಗಮವಾಗುತ್ತದೆ.
ಭಾರತೀಯ ಆರ್ಥಿಕತೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಪಾತ್ರ ಕೃಷಿ ಆಧಾರಿತ ಕೈಗಾರಿಕೆಗಳು ಜಿಡಿಪಿಯ ಬೆಳವಣಿಗೆಗೆ ಕಾರಣವಾಗುವುದಲ್ಲದೆ ಕೃಷಿಯ ಉತ್ತೇಜನಕ್ಕೆ ಅವು ಸಹಾಯ ಮಾಡುತ್ತದೆ. ಕಡಿಮೆ ವೆಚ್ಚ ಹೊಂದಿರುವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲು ಕಾರಣವಾಗುತ್ತದೆ.
ಆ್ಯಗ್ರೋ ಆಧಾರಿತ ಕೈಗಾರಿಕೆಗಳಲ್ಲಿ ಸಕ್ಕರೆ, ಕಾಗದ, ಜವಳಿ, ಎಣ್ಣೆ ಹೀಗೆ ಹತ್ತು ಹಲವಾರು ರೀತಿಯ ಉದ್ಯಮಗಳಿದ್ದು ಈ ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ತಮ್ಮ ಕಚ್ಚಾವಸ್ತುಗಳನ್ನಾಗಿ ಬಳಸಿಕೊಳ್ಳುತ್ತದೆ. ಈ ಸಂಘಟಿತ ವಲಯದಲ್ಲಿ ಜವಳಿ ಉದ್ಯಮ ಅತಿದೊಡ್ಡದ್ದಾಗಿದ್ದು, ಇದರಲ್ಲಿ ಹತ್ತಿ, ಉಣ್ಣೆ, ರೇಷ್ಮೆ, ಸೆಣಬು. ಸಂಶ್ಲೇಷಿತ ನಾರುಗಳ ಜವಳಿ ಉದ್ಯಮವನ್ನು ಹೊಂದಿದೆ. ಪ್ರಸ್ತುತ ದೇಶದಲ್ಲಿ 1600ಕ್ಕೂ ಹೆಚ್ಚು ಹತ್ತಿ ಮತ್ತು ಮಾನವ ನಿರ್ಮಿತ ಫೈಬರ್ ಗಿರಣಿಗಳಿವೆ. ಇವುಗಳಲ್ಲಿ ಶೇ. 80ರಷ್ಟು ಖಾಸಗಿ ವಲಯದಲ್ಲಿದ್ದರೆ ಇನ್ನುಳಿದವು ಸಾರ್ವಜನಿಕ ಮತ್ತು ಸಹಕಾರಿ ವಲಯದಲ್ಲಿದೆ. ಇವುಗಳಲ್ಲಿ ನಾಲ್ಕರಿಂದ ಹತ್ತು ಮಗ್ಗಗಳನ್ನು ಹೊಂದಿರುವ ಕಾರ್ಖಾನೆ ಸಣ್ಣ ಪ್ರಮಾಣದ್ದಾಗಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡುವಲ್ಲಿ ಇದು ಸಫಲವಾಗಿದೆ.
ಭಾರತವು ಸ್ಪಿನ್ನಿಂಗ್‌ನಲ್ಲಿ ವಿಶ್ವ ದರ್ಜೆಯ ಉತ್ಪಾದನೆಯನ್ನು ಹೊಂದಿದೆ. ಹತ್ತಿ ನೂಲಿನ ವ್ಯಾಪಾರದಲ್ಲಿ ನಮಗೆ ಹೆಚ್ಚಿನ ಪಾಲಿದ್ದು, ವ್ಯಾಪಾರದ ನಾಲ್ಕನೇ ಒಂದು ಭಾಗವಾಗಿದೆ. ಆದರೆ ದೊಡ್ಡ ದೊಡ್ಡ ಕಾರ್ಖಾನೆಗಳಿಂದಾಗಿ ಸ್ಥಳೀಯ ಮಾರುಕಟ್ಟೆಗಳಿಗೆ ದೊಡ್ಡ ನ್ಯೂನತೆಯಾಗಿ ಪರಿಣಮಿಸಿದೆ.
ಇನ್ನು ಸೆಣಬಿನ ಸರಕುಗಳ ಉತ್ಪಾದನೆಯಲ್ಲಿ ಅತಿದೊಡ್ಡ ಉತ್ಪಾದಕ ಮತ್ತು ಬಾಂಗ್ಲಾದೇಶದ ಅನಂತರ ರಫ್ತುದಾರರಾಗಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು 70 ಸೆಣಬಿನ ಗಿರಣಿಗಳಿವೆ. ಸಕ್ಕರೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ 460ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ.
-ಪ್ರೀತಿ ಭಟ್ ಗುಣವಂತೆ