ತೋಟದಂಚಿನ ಭತ್ತದ ಸಸಿಗಳಿಗೆ ಯಾವತ್ತೂ ಗೆಲುವಿನ ಮುಖವಿಲ್ಲ. ಬಳ್ಳೆಯಾಗಿ ಬೆಳೆಯುತ್ತವೆ, ತೆನೆ ಸರಿಯಾಗಿ ಬರುವುದಿಲ್ಲ, ಕಾಳಿನಲ್ಲಿ ಜೊಳ್ಳು ವಿಪರೀತ. ಗದ್ದೆಯ ಬಯಲೆಲ್ಲ ಮಾಗಿ ಗರಿಗಳು ಬಂಗಾರ ವರ್ಣಕ್ಕೆ ತಿರುಗಿದರೂ, ಇಲ್ಲಿ ಇನ್ನೂ ಹಸಿರು ಉಳಿದಿರುತ್ತದೆ. ಒಂದೇ ತಳಿಯ ಭತ್ತ ನಾಟಿ ಮಾಡಿ ಗದ್ದೆಯ ಎಲ್ಲೆಡೆಯೂ ಸರಿಯಾಗಿ ಗೊಬ್ಬರ ಹಾಕಿ ನೀರುಣಿಸಿದರೂ ಇಳುವರಿ ಬಹಳ ಕಡಿಮೆ. ತೋಟದಂಚಿನ ಬೇಲಿ ಗಿಡ ಕಡಿದು ಬೆಳಗಿನ ಬಿಸಿಲು ತಾಗುವ ವ್ಯವಸ್ಥೆಯಾದರೆ ಬೆಳೆ ಸ್ವಲ್ಪ ಬದಲಾಗುತ್ತದೆ. ಇದು ಗೊಳಲಿನ ಪರಿಣಾಮ. ನಾದ ಹೊಮ್ಮಿಸುವ ಕೊಳಲು ಗೊತ್ತಿದೆ. ಇದೇನು ಬೆಳೆಯ ಗಂಟಲು ಕಟ್ಟುವ ಗೊಳಲು? ಎಂಬ ಪ್ರಶ್ನೆ ಹುಟ್ಟಬಹುದು.
ಗೊಳಲು ಸೂರ್ಯನ ಬಿಸಿಲು, ಬೆಳಕು ಸರಿಯಾಗಿ ತಾಗದ ನೆಲೆ. ದಟ್ಟ ಕಾಡು, ತೋಟದ ಹೆಮ್ಮರಗಳ ನಡುನ ಗಿಡ ಬಳ್ಳಿಗಳು ಅತ್ತ ಸಾಯದೇ, ಚಿಗುರದೆ ನಿಂತ ಸ್ಥಿತಿ ಇದು. ಗೊಳಲಿನಲ್ಲಿ ಗಿಡಗಳು ಬದುಕುತ್ತವೆ. ಆದರೆ, ಸದೃಢವಾಗಿ ಬೆಳೆಯುವುದಿಲ್ಲ. ದಿನವಿಡೀ ನೆರಳಿನ ಕತ್ತಲು ಕವಿದಿರುವುದರಿಂದ ಸಸ್ಯಗಳ ಆಹಾರ ತಯಾರಿಕೆಗೆ ಅಗತ್ಯ ಸೂರ್ಯರಶ್ಮಿಯ ಅವಕಾಶ ದೊರೆಯುವುದಿಲ್ಲ. ನಿತ್ಯಹರಿದ್ವರ್ಣ ಮರಗಳ ನೆರಳು ಸಾಮಾನ್ಯವಾಗಿ ಗೊಳಲಿನ ಮುಖ್ಯ ನೆಲೆ. ಇಲ್ಲಿನ ಪರಿಸ್ಥಿತಿ ಹೇಗಿರುತ್ತದೆಂದರೆ ಮಧ್ಯಾಹ್ನ 12 ಗಂಟೆಯಾದರೂ ಭತ್ತದ ಗರಿಯ ಇಬ್ಬನಿ ಆರುವುದಿಲ್ಲ. ಗೊಳಲಿನಲ್ಲಿ ಬೆಳೆಯುವ ಹುಲ್ಲು, ಬಳ್ಳಿ, ಗಿಡಗಳೆಲ್ಲ ಒಂದರ್ಥದಲ್ಲಿ ಶಕ್ತಿ ಹೀನವಾಗಿರುತ್ತವೆ. ಅಪ್ಪನ ಯಜಮಾನಿಕೆಯ ದರ್ಬಾರಿನ ನೆರಳಲ್ಲಿ ಮಕ್ಕಳು ಯಾವುದಕ್ಕೂ ಧ್ವನಿ ಎತ್ತದೇ ಬದುಕುವಂತೆ ಇಲ್ಲಿನ ಸಸ್ಯ ಪರಿಸರ ಪರಿಸ್ಥಿತಿ.
Advertisement
ಗಿಡ ಬೆಳವಣಿಗೆಗೆ ಬಿಸಿಲು ಬೇಕು. ಕೆಲವು ಗಿಡಗಳಿಗೆ ನೇರ ಸೂರ್ಯನನ್ನು ಎದುರಿಸುವ ಆಂಜನೇಯ ಶಕ್ತಿ, ಮತ್ತೆ ಕೆಲವು ಕಾಫೀ ಗಿಡಗಳಂತೆ ಮರದ ಮರೆಯ ನೆರಳು ಬೆಳಕಿನಾಟ ಇಷ್ಟಪಡುತ್ತವೆ. ನಾವು ನೆಡುವ ಸಸಿಗೆ ಎಷ್ಟು ಕ್ಯಾಂಡಲ್ ಬೆಳಕು ಬೇಕು? ಕೃಷಿ ಮಾಡುವ ಮುಂಚೆ ಕಡ್ಡಾಯ ಅರಿಯಬೇಕಾದ ಸಂಗತಿ. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದಲ್ಲಿ ಕಬ್ಬಿನ ಸಾಲಿನ ನಡುವೆ ಮೆಣಸು, ಹೂಕೋಸು, ಬದನೆ ಮುಂತಾದ ತರಕಾರಿ ಬೆಳೆಯುತ್ತಾರೆ. ಕಬ್ಬು ನಾಟಿ ಆರಂಭದಲ್ಲಿ ಬೆಳೆಯಬಹುದಾದ ಈ ಬೆಳೆಗಳನ್ನು ಕಬ್ಬು ಎತ್ತರಕ್ಕೆ ಬೆಳೆದ ನಂತರ ಬೆಳೆಯಲಾಗುವುದಿಲ್ಲ. ಇದಕ್ಕೆ ಸಸ್ಯಗಳಿಗೆ ಅಗತ್ಯ ಬಿಸಿಲು ದೊರಕದ್ದು ಮುಖ್ಯಕಾರಣ. ಯಾವ ಗಿಡಕ್ಕೆ ಎಲ್ಲಿ ಎಷ್ಟು ಬಿಸಿಲು ದೊರೆಯುತ್ತದೆಂದು ಅರಿತು ನಾಟಿ ಮಾಡಿದರೆ ಗೆಲುವು ಸಾಧ್ಯ.
Related Articles
Advertisement
ಲಿಂಬು ಗಿಡಗಳಿಗೆ ಬಿಸಿಲು ಬೇಕು. ವಿಜಯಪುರದ ಬಿರುಬಿಸಿಲು ಬೆಳೆ ಗೆಲ್ಲಿಸಲು ಸಹಕಾರಿಯಾಗಿದೆ. ಉಪ್ಪಿನಕಾಯಿಗೆ ಬಳಸುವ ಇಟಾಲಿಯನ್ ಲಿಂಬು (ಗಜನಿಂಬೆ) ಗಿಡಗಳನ್ನು ಅಡಕೆ ತೋಟದಲ್ಲಿ ನಾಟಿ ಮಾಡಿದ ಶಿವಮೊಗ್ಗ ಗಾಜನೂರಿನ ಎಂ.ಪಿ. ದೇವರಾಜ್ ಉತ್ತಮ ಬೆಳೆ ಕಂಡವರು. ಲಿಂಬು ಗಿಡದ ಬೆಳವಣಿಗೆ ಗಮನಿಸಿ ಐದು ಎಕರೆ ಅಡಕೆ ತೋಟದ ತುಂಬ ಲಿಂಬು ನೆಟ್ಟಿದ್ದರು. ಅಡಕೆಯ ಜೊತೆ ಉಪಬೆಳೆಯಾಗಿ ಕೆಲವು ವರ್ಷ ಇದು ದೇವರಾಜರ ಕೈಹಿಡಿದಿತ್ತು. ದೇವರ ರಾಜರ ಸುಮಾರು ಐದಾರು ವರ್ಷದ ಅಡಕೆ ತೋಟದ ಪರಿಸರ ಲಿಂಬು ಬದುಕುವ ಪರಿಸರ ಒದಗಿಸಿತು. ತೋಟದಲ್ಲಿ ಬಾಳೆ, ಕಾಳು ಮೆಣಸು ಇರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ರಬ್ಬರ್ ಸಸಿ ನಾಟಿಯ ಆರಂಭದಲ್ಲಿ ಗಿಡಗಳ ನಡುವಿನ ಜಾಗದಲ್ಲಿ ಸುವರ್ಣಗಡ್ಡೆ, ಮರಗೆಣಸು, ಕೆಸುವಿನ ಗಡ್ಡೆಯನ್ನು ಮಳೆಗಾಲದ ಉಪಬೆಳೆಯಾಗಿ ಒಂದೆರಡು ವರ್ಷ ಬೆಳೆಯುವ ನೋಟಗಳು ಶಿವಮೊಗ್ಗ ರಿಪ್ಪನ್‌ಪೇಟೆ, ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶಗಳಲ್ಲಿ ನೋಡಬಹುದು. ಅಡಕೆ ತೋಟಗಳಂಚಿನಲ್ಲಿ ತೆಂಗು ಬೆಳೆಸುವುದು ಮಲೆನಾಡು, ಕರಾವಳಿಯ ಜಾನ. ತೋಟದಂಚಿನ ಮರಗಳಲ್ಲಿ ಹೆಚ್ಚು ಫಸಲು ಸಿಗುವುದು ತೆಂಗಿನ ಬಿಸಿಲು ಪ್ರೀತಿಯ ಗುಣ. ರಾಜ್ಯದ ವಿವಿಧ ಕೃಷಿ ವಲಯಗಳಲ್ಲಿ ಈಗಾಗಲೇ ಬೆಳೆದು ಬದುಕಿದ ಚಿತ್ರ ನೋಡುತ್ತ ಹೋದರೆ ಪರಿಸರಕ್ಕೆ ಯೋಗ್ಯ ತೋಟ ಕಟ್ಟುವ ಕಲಿಕೆ ಸಾಧ್ಯವಾಗುತ್ತದೆ.
ಬಯಲುಸೀಮೆಯ ಭತ್ತದ ಗದ್ದೆಗಳು ಮಾವಿನ ತೋಟವಾಗಿ ಪರಿವರ್ತನೆಯಾದ ಹೊಸತರಲ್ಲಿ ಭತ್ತ ಬೆಳೆಯುತ್ತಿದ್ದರು. ಮಾವಿನ ಮರ ಬೆಳೆದಂತೆ ನೆರಳು ಹೆಚ್ಚಾಗಿ ಭತ್ತದ ಬೆಳೆ ನಿಂತಿತು. ಕಡಿಮೆ ನೀರು ಬಯಸುವ ಗೋವಿನ ಜೋಳ ಬೆಳೆದರು. ಹೀಗೆ ಮರ ಬೆಳೆಯುತ್ತ ವಿಸ್ತಾರಕ್ಕೆ ಚಾಚಿದ ಬಳಿಕ ತುಂಡು ಬಿಸಿಲಲ್ಲಿ ಹುರಳಿ ಮಾತ್ರ ಸಾಧ್ಯವಾಯ್ತು. ಯಾವ ನೆರಳು ಯಾರಿಗೆ ಇಷ್ಟ? ಯಾರಿಗೆ ಕಷ್ಟ? ಅರ್ಥಮಾಡಿಕೊಳ್ಳಲು ಪರಿಸರದ ಮರ ಓದುವ ಸೂಕ್ಷ್ಮತೆ ಬೇಕು. ಕಬ್ಬಿನ ಸಾಲಿನ ಜೊತೆಗೆ ಪುಂಡಿ, ಬೆಂಡೆ ಬೆಳೆಯುವ ವಿದ್ಯೆ ರಾಜ್ಯದ ಕರಾವಳಿಯಿಂದ ಬೀದರ್‌ವರೆಗೂ ಇದೆ. ಪಪ್ಪಾಯ, ಬಾಳೆ, ನುಗ್ಗೆ ತೋಟ ಆರಂಭಿಸುವ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ರೈತರು ಎಡೆ ಬೆಳೆಯಾಗಿ ಮೆಂತ್ಯೆ, ಕೊತ್ತಂಬರಿ ಮುಂತಾದ ಸೊಪ್ಪು ಬೆಳೆಯುತ್ತಾರೆ. ಬೆಳೆ ಕೂಡಿಸುವ ಇಂಥ ಪರಿಜ್ಞಾನ ನೆಲದ ಬೆಳಕು ಓದಿದ ಬದುಕಿನಿಂದ ಬಂದಿದೆ.
ಸೂರ್ಯನ ಚಲನೆ ಗಮನಿಸಿ ತೋಟ ನಿರ್ಮಿಸುವ ಮುಖ್ಯ ಉದ್ದೇಶ ಬಿಸಿಲಿನ ಪ್ರಕರತೆಯಿಂದ ಮರ ರಕ್ಷಿಸುವುದಾಗಿದೆ. ಪಶ್ಚಿಮದ ಇಳಿ ಬಿಸಿಲು ಅಡಕೆ ಮರಕ್ಕೆ ತಾಗಿದರೆ ಒಂದು ಪಾರ್ಶ್ವ ಸುಟ್ಟು ಹೋಗುತ್ತದೆ. ಹೀಗಾಗಿ ತೋಟದ ಪಶ್ಚಿಮ ದಿಕ್ಕಿನಲ್ಲಿ ನೆರಳಿಗೆ ಮರ ಬೆಳೆಸುವ ಪರಂಪರೆ ಇದೆ. ಇದರ ಜೊತೆಗೆ ಒಂದು ಅಡಕೆ ಮರದ ನೆರಳು ಇನ್ನೊಂದರ ಮೇಲೆ ಬೀಳುವಂತೆ ಹೊಸ ತೋಟ ರೂಪಿಸುವ “ಉತ್ತರಕಾಟಿ’ ವಿನ್ಯಾಸವಿದೆ. ಅಡಕೆ ತೋಟದ ಒಳಗಡೆ ಬಾಳೆ, ಏಲಕ್ಕಿ, ಕಾಳು ಮೆಣಸು, ಲವಂಗ, ಕೊಕ್ಕೋ ಮುಂತಾದ ಬೆಳೆ ಸೇರಿಸಲು ಬಿಸಿಲು ಬೆಳಕಿನ ಲಭ್ಯತೆಯ ಜಾnನ ಅಗತ್ಯವಿದೆ. ಗಿಡಗಳಿಗೆ ಬಿಸಿಲಿನಂತೆ ಗಾಳಿಯೂ ಬೇಕು. ಆದರೆ, ಜೋರು ಗಾಳಿಗೆ ನೆಲದ ತೇವ ಬಹುಬೇಗ ಆರಬಹುದು. ಫ್ಯಾನ್ ಹಾಕಿದಾಗ ಒದ್ದೆ ಬಟ್ಟೆಗಳು ಒಣಗುವಂತೆ ಇಲ್ಲಿನ ಕ್ರಿಯೆಯಾಗಿದೆ. ಬಿಸಿಲು, ಗಾಳಿ ತಡೆಗೆ ತೋಟದ ಆಯ್ದ ನೆಲೆಗಳಲ್ಲಿ ಮರ ಬೆಳೆದಾಗ ನೀರಿನ ಬಳಕೆ ಮಿತಗೊಳ್ಳುತ್ತದೆ. ನೆಲದ ತೇವ ಉಳಿಸುವುದು ಮರೆತು ತೋಟಕ್ಕೆ ಪ್ರವಾಹದಂತೆ ನೀರುಣಿಸುವುದು ತಪ್ಪಲ್ಲವೇ? ನೆಲದ ತಂಪು ಉಳಿಸುವ ಕಾಡಿನ ಸೂತ್ರದಲ್ಲಿ ನೀರಿನ ಮಿತ ಬಳಕೆಯ ದಾರಿ ಇದೆ. (ಮುಂದಿನ ಭಾಗ: ಸಸ್ಯ ಲೋಕದಲ್ಲಿ ಜಾತಿ ಸಂಘರ್ಷ!)
- ಶಿವಾನಂದ ಕಳವೆ