ಸಿರುಗುಪ್ಪ: ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಎತ್ತುಗಳ ಸಂಖ್ಯೆ ಕಡಿಮೆ ಇರುವುದರಿಂದ ಬಿತ್ತನೆ, ಭತ್ತದ ಗದ್ದೆ ನಾಟಿಗೆ ಮುನ್ನಾ ಭೂಮಿಯನ್ನು ಸಮಮಾಡಲು ಮತ್ತು ಬಿತ್ತಿದ ಹೊಲಗಳಲ್ಲಿ ಹರಗಲು ಎತ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.
ತಾಲೂಕಿನಲ್ಲಿ ಸುಮಾರು 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ಸೂರ್ಯಕಾಂತಿ, ಸಜ್ಜೆ, ನವಣೆ, ಜೋಳ, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಬೆಳೆಯಲಾಗಿದೆ. ಬೆಳೆದು ನಿಂತಿರುವ ಹತ್ತಿ, ಸೂರ್ಯಕಾಂತಿ, ಸಜ್ಜೆ, ನವಣೆ, ಜೋಳ, ಮೆಣಸಿನಕಾಯಿ ಬೆಳೆಗಳಲ್ಲಿ ಕಳೆ, ಕಸ ತೆಗೆಯಲು ಎತ್ತುಗಳನ್ನು ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಬೇಡಿಕೆಯು ಹೆಚ್ಚಾಗಿದ್ದು, ಎತ್ತುಗಳ ಸಂಖ್ಯೆ ಕಡಿಮೆ ಇರುವುದರಿಂದ ಎತ್ತುಗಳ ಮೂಲಕ ಕೃಷಿ ಚಟುವಟಿಕೆ ಮಾಡಲು ಎತ್ತುಗಳನ್ನು ಹೊಂದಿದ ರೈತರು ಬೆಲೆಯನ್ನು ಹೆಚ್ಚಿಸಿದ್ದಾರೆ.
ಆದರೆ ಮೆಣಸಿನಕಾಯಿ, ಜೋಳ, ಹತ್ತಿ ಬೆಳೆಗಳನ್ನು ಎತ್ತುಗಳಿಂದ ಹರಗಿದರೆ ಭೂಮಿಯಲ್ಲಿ ಬೆಳೆಗಳ ಬೇರು ಆಳವಾಗಿ ಬೇರೂರುತ್ತವೆ. ಇದರಿಂದ ಬೆಳೆಗಳು ಉತ್ತಮವಾಗಿ ಬೆಳೆದು ಇಳುವರಿ ಹೆಚ್ಚಾಗುತ್ತದೆ ಎನ್ನುವ ಕಾರಣದಿಂದ ಬಹುತೇಕ ರೈತರು ಎತ್ತುಗಳ ಮೂಲಕವೇ ತಮ್ಮ ಬೆಳೆಗಳಲ್ಲಿ ಕಳೆ ತೆಗೆಯಲು ಮತ್ತು ಬೋದು ಮಾಡಲು ಬಳಸುತ್ತಾರೆ.
ಇನ್ನೂ ಭತ್ತದ ಗದ್ದೆ ನಾಟಿಗೆ ಮುನ್ನ ಟ್ರಾಕ್ಟರ್ ನಿಂದ ಕೆ.ಜಿ. ವೀಲ್‌ನಿಂದ ಧಮ್ ಹೊಡೆದು ಸಿದ್ಧಮಾಡುತ್ತಾರೆ. ಆದರೆ ಭೂಮಿಯಲ್ಲಿ ಸಮಾನವಾಗಿ ನೀರು ನಿಂತರೆ ಮಾತ್ರ ಭತ್ತದ ಬೆಳೆ ಉತ್ತಮವಾಗಿ ಬೆಳೆಯುತ್ತದೆ ಎನ್ನುವ ಕಾರಣಕ್ಕೆ ರೈತರು ಎತ್ತುಗಳ ಮೂಲಕ ಹಲಗೆಯೊಂದಿಗೆ ಭೂಮಿಯನ್ನು ಸಮಾನಾಂತರ ಮಾಡುತ್ತಾರೆ. ಗದ್ದೆಯಲ್ಲಿ ಭೂಮಿಯನ್ನು ಸಮಾನಾಂತರ ಮಾಡಲು ಒಂದು ದಿನಕ್ಕೆ ಒಂದು ಸಾವಿರ ರೂ.ಗಳನ್ನು ಮತ್ತು ಒಣಭೂಮಿಯಲ್ಲಿ ಬೆಳೆದ ಬೆಳೆಗಳಲ್ಲಿ ಕುಂಟೆ, ರಂಟೆ ಹೊಡೆಯಲು ರೂ. 700 ಬಾಡಿಗೆಯನ್ನು ಎತ್ತುಗಳ ಮಾಲೀಕರು ನಿಗದಿ ಮಾಡಿದ್ದಾರೆ. ಆದರೂ ಸಮಯಕ್ಕೆ ಸರಿಯಾಗಿ ಎತ್ತುಗಳು ಕೃಷಿ ಮಾಡಲು ದೊರೆಯುತ್ತಿಲ್ಲ. ಸಮಯಕ್ಕೆ ಸರಿಯಾಗಿ ಎತ್ತುಗಳು ದೊರೆಯದೇ ಇರುವುದರಿಂದ ಹೆಚ್ಚಿನ ಬಾಡಿಗೆ ರೈತರು ನೀಡಿ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಇಂದಿನ ಕೃಷಿಯಲ್ಲಿ ಆಧುನಿಕ ಯಂತ್ರಗಳು ಕೃಷಿ ಕೆಲಸಕ್ಕೆ ಕಾಲಿಟ್ಟಿದ್ದರಿಂದ ಸಾಂಪ್ರದಾಯಿಕವಾಗಿ ರೈತರ ಕೃಷಿಗೆ ಹೆಗಲು ನೀಡುತ್ತಿದ್ದ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಎತ್ತುಗಳ ಬಾಡಿಗೆಯೂ ಹೆಚ್ಚಾಗಿದೆ.
– ಹುಲುಗಯ್ಯ, ಬಗ್ಗೂರು ಗ್ರಾಮದ ರೈತ
ಆರ್.ಬಸವರೆಡ್ಡಿ ಕರೂರು