ಉಡುಪಿ: ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ 2022-23ನೇ ಸಾಲಿನಲ್ಲಿ ಯಂತ್ರಶ್ರೀ ಯೋಜನೆಯಡಿ ರಾಜ್ಯದ 20,000 ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರಿಧೀಕೃತ ಭತ್ತ ಬೇಸಾಯದ ಗುರಿ ಹೊಂದಲಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ಬಾರಕೂರು ಕೂಡ್ಲಿ ಡಾ| ಕೆ. ವೆಂಕಟರಮಣ ಉಡುಪ ಅವರ ಮನೆಯಲ್ಲಿ ಜೂ. 28ರಂದು ನಡೆಯಲಿದ್ದು, ಶ್ರೀಕ್ಷೇತ್ರ ಧರ್ಮ ಸ್ಥಳದ ಧರ್ಮಾ ಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು ಎಂದರು.
2 ವರ್ಷಗಳಿಂದ ಪ್ರಾಯೋಗಿಕವಾಗಿರುವ “ಯಂತ್ರಶ್ರೀ’ ರೈತರಿಗೆ ಪ್ರಯೋಜನಕಾರಿಯಾದ್ದು, ಕಾರ್ಯಕ್ರಮವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 6 ಸಾವಿರ ಹೆಕ್ಟೇರ್‌ನಲ್ಲಿ ಯೋಜನೆ ಅನು ಷ್ಠಾನಿಸಲಾಗುವುದು. 156 ನಾಟಿ ಮಾಡು ವಯಂತ್ರಗಳು “ಕೃಷಿ ಯಂತ್ರ ಧಾರೆ’ ಕೇಂದ್ರ ದಲ್ಲಿ ಲಭ್ಯವಿದ್ದು, ರೈತರು ಆರ್‌ಟಿಸಿ, ಆಧಾರ್, ಓಟರ್ ಐಡಿ, ಡ್ರೈವಿಂಗ್ ಲೈಸನ್ಸ್ ಪ್ರತಿ ನೀಡಿ ಹೆಸರು ನೋಂದಾಯಿಸಿದ ಅನಂತರ ಯಂತ್ರಗಳನ್ನು ಪೂರೈಸಲಾಗುವುದು ಎಂದರು.
ಯಂತ್ರಶ್ರೀ ಯೋಧರು
ಗ್ರಾಮೀಣ ಭಾಗದಲ್ಲಿ ಯಂತ್ರಶ್ರೀ ಯೋಜನೆ ಅನುಷ್ಠಾನಕ್ಕಾಗಿ ರೈತರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲು “ಯಂತ್ರಶ್ರೀ ಯೋಧರು’ ಎನ್ನುವ ಯುವಕರ ಪಡೆಯನ್ನು ರಚಿಸಲಾಗಿದೆ ಎಂದು ಡಾ| ಮಂಜುನಾಥ ಅವರು ಹೇಳಿದರು.