ಕುಂದಗೋಳ: ಬರಗಾಲದಲ್ಲಿ ಕೃಷಿ ಬದುಕೇ ಭಾರವಾಗಿದ್ದು, ಸಾವಯವ ಕೃಷಿ ಅಳವಡಿಸಿಕೊಂಡು ಮಿಶ್ರ ಬೆಳೆಯೊಂದಿಗೆ ಡ್ರ್ಯಾಗನ್ ಹಣ್ಣು ಬೆಳೆದು ಸಿದ್ದನಗೌಡ್ರ ಸಹೋದರರು ಮಾದರಿಯಾಗಿದ್ದಾರೆ.
ತಾಲೂಕಿನ ಕಡೇ ಗ್ರಾಮವಾದ ಗುರುಗೋವಿಂದ ಭಟ್ಟರ ಜನ್ಮಭೂಮಿ ಕಳಸ ಗ್ರಾಮದ ಜಗದೀಶಗೌಡ ಸಿದ್ದನಗೌಡ್ರ ಹಾಗೂ ಮಂಜುನಾಥಗೌಡ ಸಿದ್ದನಗೌಡ್ರ ಕೇವಲ 2 ಎಕರೆ ಜಮೀನಿನಲ್ಲಿ ಕಳೆದ 10 ವರ್ಷಗಳಿಂದ ರಾಸಾಯನಿಕ ಮುಕ್ತ ಕೃಷಿ ಮಾಡುತ್ತ ಬಂದಿದ್ದಾರೆ. ಸ್ವತಃ ಜೀವಾಮೃತ ತಯಾರಿಸಿಕೊಂಡು, ಬೀಜೋಪಚಾರ ಮಾಡಿಕೊಂಡು ಉತ್ತಮ ಬೆಳೆ ತೆಗೆಯುತ್ತಿದ್ದಾರೆ.
ಮಂಜುನಾಥ ಅವರು ವಿದ್ಯೆ ತಲೆಗೆ ಹತ್ತಲಿಲ್ಲವೆಂದು ತಂದೆಯ ಜೊತೆಗೆ ಕೃಷಿಯಲ್ಲಿಯೇ ತೊಡಗಿಕೊಂಡರು. ಪ್ರತಿವರ್ಷ ಒಂದಿಲ್ಲೊಂದು ಕಾರಣಕ್ಕೆ ಹಾಕಿದ ಬೆಳೆ ಕೈಗೆ ಬಾರದೇ ಮಾಡಿದ ಸಾಲ ತೀರಿಸಲಾಗದೆ ಕೃಷಿ ಬದುಕೇ ಬಿಟ್ಟು ಹೋಗಬೇಕೆಂಬ ಚಿಂತೆಯಲ್ಲಿದ್ದರು. ಆಗ ಅವರಿಗೆ ಹೊಳೆದಿದ್ದು ಸಾವಯವ ಕೃಷಿ. ಅದರತ್ತ ಮುಖ ಮಾಡಿದ ಬಳಿಕ ಕಳೆದ 10 ವರ್ಷದಲ್ಲಿ ಹಂತ ಹಂತವಾಗಿ ಉತ್ತಮ ಬೆಳೆ ಬರುತ್ತಿರುವುದರಿಂದ ಈಗ ಹೊಸ ಮಾದರಿಯ ಹಣ್ಣು ಬೆಳೆಯಲು ಸಹ ಮುಂದಾಗಿ ಸೈ ಎನಿಸಿಕೊಂಡಿದ್ದಾರೆ.
ಸಾವಯವ ಕೃಷಿ ರುಚಿ: ಈ ಭಾಗದಲ್ಲಿ ಬಾಳೆ, ಪೇರಲ,ಚಿಕ್ಕು, ಮಾವಿನಹಣ್ಣು ಬೆಳೆಯುವುದು ಸಾಮಾನ್ಯ. ಆದರೆ ಇವರು ವಿಶೇಷ ರೀತಿಯಲ್ಲಿ ಆರೋಗ್ಯಕ್ಕೂ ಉತ್ತಮ ಬೇಡಿಕೆಯಲ್ಲಿರುವ ಡ್ರಾÂಗನ್ ಹಣ್ಣು ಬೆಳೆಯಲು ಮುಂದಾದರು. ಆರಂಭಿಕ ಹಂತದಲ್ಲಿ 15 ಗುಂಟೆಯಲ್ಲಿ ಡ್ರ್ಯಾಗನ್ ಹಣ್ಣುಗಳನ್ನು ಬೆಳೆಯಲು ಕಳೆದ ಡಿಸೆಂಬರ್‌ನಲ್ಲಿ ಆರಂಭಿಸಿದ್ದು, ಈಗಾಗಲೇ ಎರಡು ಬಾರಿ ಹಣ್ಣು ಕಟಾವು ಮಾಡಿದ್ದಾರೆ. ಮೊದಲಿಗೆ ಬಂದ ಹಣ್ಣನ್ನು ಗ್ರಾಮದ ಎಲ್ಲ ದೇವರ ಗುಡಿಗಳಿಗೆ ಅರ್ಪಿಸಿದರೆ, ಎರಡನೆ ಹಂತದ ಬೆಳೆಯನ್ನು ಸಹ ಮಾರಾಟ ಮಾಡದೆ ಗ್ರಾಮದ ಮನೆಗಳಿಗೆ ಉಚಿತವಾಗಿ ವಿತರಿಸಿ ಸಾವಯವ ಕೃಷಿಯ ಹಣ್ಣಿನ ರುಚಿ ಹಂಚಿದ್ದಾರೆ.
ಕೈ ಹಿಡಿದ ಮಿಶ್ರಬೆಳೆ: 15 ಗುಂಟೆಯಲ್ಲಿ ಈ ಬೆಳೆ ಬೆಳೆಯಲು 1.50 ಲಕ್ಷ ರೂ. ಖರ್ಚು ಮಾಡಿದ್ದು, ಇದೀಗ ಒಂದೊಂದು ಗಿಡವು ಉತ್ತಮ ರೀತಿಯಲ್ಲಿ ಹಣ್ಣು ನೀಡುತ್ತಿದೆ ಎಂದು ಮಂಜುನಾಥ ಹರ್ಷ ವ್ಯಕ್ತಪಡಿಸಿದರು. ಜಗದೀಶಗೌಡ್ರ ಮಾತನಾಡಿ, ಎರಡು ಎಕರೆಯಲ್ಲಿ 20 ಗುಂಟೆಯಲ್ಲಿ ಮಲ್ಲಿಗೆ ಹಾಗೂ ಗಲಾಟೆ ಹೂ ಬೆಳೆಯುತ್ತಿದ್ದು, 4 ಗುಂಟೆಯಲ್ಲಿ ಸವತೆಕಾಯಿ, ಬೆಂಡೆಕಾಯಿ ಹಾಗೂ 5 ಗುಂಟೆಯಲ್ಲಿ ಮೆಣಸಿನಕಾಯಿ, ಉಳಿದ ಜಮೀನಿನಲ್ಲಿ ಶೇಂಗಾ ಬೆಳೆಯುತ್ತಿದ್ದೇವೆ. ಮಿಶ್ರ ಬೆಳೆ ಬೆಳೆಯುವುದರಿಂದ ವಾರದ ಖರ್ಚಿಗೆ ಅನುಕೂಲವಾಗುತ್ತಿದೆ ಎಂದರು.
ಅನೇಕ ರೈತರು ರಾಸಾಯನಿಕ ಕೃಷಿ ಮಾಡುತ್ತಿದ್ದಾರೆ. ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ಸಾಲಸೋಲ ಹೆಚ್ಚಿದೆ. ದುಬಾರಿ ಬೀಜ-ಗೊಬ್ಬರಕ್ಕೆ ಹಣ ಸುರಿದರೂ ಬೆಳೆ ಕೈಗೆ ದೊರೆಯದೆ ಕೃಷಿ ಬದುಕು ಭಾರವಾಗಿದೆ. ಆದರೆ ಕಳಸ ಗ್ರಾಮದ ಈ ಸಹೋದರರು ಎರಡು ಎಕರೆ ಭೂಮಿಯಲ್ಲಿ ಸಾವಯವ ಪದ್ಧತಿಯಲ್ಲಿ ಉತ್ತಮ ಬೆಳೆ ಬೆಳೆದು ಸುತ್ತಮುತ್ತಲಿನ ರೈತರಲ್ಲಿ ಸೈ ಎನಿಸಿಕೊಳ್ಳುತ್ತಿದ್ದಾರೆ.
ನಾನು ವೃತ್ತಿಯಲ್ಲಿ ಲಾರಿ ಚಾಲಕ. ಬೇರೆ ಬೇರೆ ರಾಜ್ಯದಲ್ಲಿನ ತೋಟಗಾರಿಕೆ ಬೆಳೆಗಳನ್ನು ನೋಡಿ, ಸಹೋದರರೊಂದಿಗೆ ಬೆಳೆಗಳ ಬಗ್ಗೆ ಚರ್ಚಿಸಿ ಬೆಳೆ ಬೆಳೆಯುತ್ತಿದ್ದೇವೆ. ಸಾವಯವ ಕೃಷಿಯತ್ತ ಹುಮ್ಮಸ್ಸು ಹೆಚ್ಚಿದೆ. ಮೊದಲು ರಾಸಾಯನಿಕ ವ್ಯವಸಾಯದಿಂದ ಇಳುವರಿಗಿಂತ ಖರ್ಚು ಹೆಚ್ಚಾಗುತ್ತಿತ್ತು. ಈಗ ನಾವೇ ಬೀಜೋಪಚಾರ ಮಾಡಿ ಯಾವುದೇ ಖರ್ಚಿಲ್ಲದೆ ಬೆಳೆಗಳನ್ನು ತೆಗೆಯುತ್ತಿದ್ದೇವೆ. –
ಜಗದೀಶಗೌಡ ಸಿದ್ದನಗೌಡ್ರ, ಕಳಸ ಗ್ರಾಮದ ಕೃಷಿಕರು
-ಶೀತಲ್ ಎಸ್.ಎಂ.