Advertisement
“ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಅಥವಾ ವೈಜ್ಞಾನಿಕ ಬೆಲೆ ಸಿಗಬೇಕು’, ವೇದಿಕೆಗಳ ಮೇಲಿಂದ ಭಾಷಣಗಳಲ್ಲಿ ಈ ಮಾತುಗಳು ಕೇಳಿ ಬರುತ್ತಲೇ ಇವೆ. ಕನಿಷ್ಠ ಬೆಂಬಲ ಬೆಲೆಗಳು ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚಕ್ಕಿಂತ ಶೇ.50ಕ್ಕಿಂತ ಹೆಚ್ಚಾಗಿರಬೇಕೆಂದು ಡಾ| ಎಂ. ಎಸ್. ಸ್ವಾಮಿನಾಥನ್ ನೇತೃತ್ವದ ಆಯೋಗ ಕೇಂದ್ರಕ್ಕೆ ವರದಿ ಸಲ್ಲಿಸಿ ಏಳೆಂಟು ವರ್ಷಗಳೇ ಕಳೆದಿವೆ.
Related Articles
Advertisement
ರೈತರಿಗೆ ಆದಾಯಕರ ವಿನಾಯತಿ ಇದ್ದು ಉದ್ದಿಮೆದಾರರು, ವ್ಯಾಪಾರಸ್ಥರು, ಕಪ್ಪು ಹಣ ಉಳ್ಳವರು ತೆರಿಗೆ ವಿನಾಯತಿಯ ಲಾಭ ಪಡೆಯಲು ಭೂಮಿ ಖರೀದಿಸಿ ಸಾಕಷ್ಟು ಲಾಭ ತೋರಿಸುತ್ತಿರುವುದು ಸರಕಾರಕ್ಕೆ ಗೊತ್ತಿರದ ಸಂಗತಿಯೇನಲ್ಲ. ಅದೇನೇ ಇರಲಿ ಈ ಕುರಿತು ವಿಧಾನಸಭೆಯಲ್ಲಿ ಚರ್ಚೆ ಆಗಲೇ ಇಲ್ಲ. ವಿರೋಧ ಪಕ್ಷಗಳೂ ಮೌನ ಸಮ್ಮತಿ ಸೂಚಿಸಿವೆ. ಇದೆಲ್ಲಕ್ಕೂ ಮಹತ್ವದ ಸಂಗತಿ ಏನೆಂದರೆ ಕೋರಂಗೇ ಬರಗಾಲ!
ಕಬ್ಬು ಬೆಲೆ ಆಯೋಗವೂ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಒಮ್ಮೆ ಮಾತ್ರ ಕಬ್ಬು ಬೆಲೆ ನಿಗದಿ ಮಾಡುವ ಪ್ರಯತ್ನ ಮಾಡಿ ಆರಂಭ ಶೂರತನ ಮಾಡಿದ್ದು ತಾಜಾ ಉದಾಹರಣೆ ಕಬ್ಬಿನಿಂದ ಕಬ್ಬಿನ ಉಪ ಉತ್ಪನ್ನಗಳಿಂದ ಎಷ್ಟೊಂದು ಆದಾಯ ಇದೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡದೆ ವಂಚಿಸುತ್ತಿರುವ ಸಂಗತಿ ಎತ್ತಿ ತೋರಿಸಲಿಲ್ಲ. ಒಂದು ಟನ್ ಕಬ್ಬಿನಿಂದ ಬರುವ ಆದಾಯ ಮತ್ತು ಟನ್ ಕಬ್ಬು ಉತ್ಪಾದಿಸಲು ರೈತರಿಗೆ ತಗಲುವ ವೆಚ್ಚ ಕುರಿತು ತುಲನೆ ಮಾಡಲೇ ಇಲ್ಲ. ಅರ್ಥಶಾಸ್ತ್ರವನ್ನೇ ಮುಖ್ಯ ವಿಷಯವಾಗಿ ಅಧ್ಯಯನ ಮಾಡಿದ ಲೇಖಕ ಕಳೆದ 40 ವರ್ಷಗಳಿಂದಲೂ ಕೃಷಿ ಮಾಡುತ್ತಲಿರುವನು. ಹತ್ತಿ ಜೋಳ, ಮುಸುಕಿನ ಜೋಳ, ತೊಗರಿ, ಕಡಲೆ, ಶೇಂಗಾ, ಕಬ್ಬು, ಸೋಯಾ ಅವರೆ, ಹೆಸರು ಟೊಮೆಟೋ, ಈರುಳ್ಳಿ ಮತ್ತು ಆಲೂಗಡ್ಡೆ ಮೊದಲಾದ ಬೆಳೆ ಮಾಡಿದ ಅನುಭವ ಹೊಂದಿದ ಪ್ರಜ್ಞಾವಂತರಿಗೆ ಈ ವರದಿ ಎಷ್ಟು ಸಾಚಾ ಎಷ್ಟು ಸಕಾಲಿಕ ಎಂಬುದೇ ಆಶ್ಚರ್ಯಕರ ಸಂಗತಿ ಎನಿಸಿದೆ.
ಲಾಭದ ಪರಿ ಯಾವುದು?ಅತಿವೃಷ್ಟಿ-ಅನಾವೃಷ್ಟಿ ಆಗಬಾರದು ಸಕಾಲಿಕ ಮಳೆ ಆಗಬೇಕು ಅಕಾಲಿಕ ಮಳೆ ಆಗಬಾರದು. ಉತ್ತಮ ಹವಾಮಾನ ಇರಬೇಕು. ರೈತರ ಕೈಗೆ ಉತ್ತಮ ಬೀಜಗಳು ಸಿಗಬೇಕು. ಸಕಾಲದಲ್ಲಿ ಕೃಷಿ ಕೂಲಿಕಾರರ ಅಭಾವ ಆಗದೆ ಕಸಗಳ ನಿರ್ವಹಣೆ; ಕೀಟ- ರೋಗಗಳ ನಿಯಂತ್ರಣ ಕೊಯ್ಲು, ಒಕ್ಕಣೆ ಕೆಲಸ ಕಾರ್ಯಗಳು ನಡೆಯಬೇಕು. ಬೆಳೆಗಳ ಸಂದಿಗ್ಧ ಹಂತದಲ್ಲಿ ಮಳೆ ಆಗಬೇಕು ನಿರೀಕ್ಷಿತ ಇಳುವರಿ ಬರಬೇಕು. ಕೃಷಿ ಮಾರುಕಟ್ಟೆಗಳಲ್ಲಿ ನಿರೀಕ್ಷಿತ ಬೆಲೆ ಇರಬೇಕು. ಇವು ಮೂಲಭೂತ ಅವಶ್ಯಕತೆಗಳಾಗಿವೆ. ಕಳೆದ ಮೂರು ವರ್ಷಗಳಿಂದ ಸತತ ಬರಗಾಲ. ರೈತರ ಲೆಕ್ಕಾಚಾರ ಹುಸಿಯಾಗಿರುವುದಲ್ಲದೆ ಹವಾಮಾನದ ಭವಿಷ್ಯವೂ ಹುಸಿಯಾಗಿದೆ. ಹವಾಮಾನದ ವೈಪರೀತ್ಯ, ಅನಿಶ್ಚಿತ ಮಳೆಗಾಲ, ಅನಿಶ್ಚಿತ ಬೆಳೆಗಳು ಮತ್ತು ಅನಿಶ್ಚಿತ ಬೆಲೆಗಳಿಂದಾಗಿ ರೈತ ಕಂಗಾಲಾಗಿದ್ದಾನೆ. ಆಯೋಗ ಎಕರೆವಾರು ಬೆಳೆಯ ಇಳುವರಿ ಎಷ್ಟೊಂದು ಪರಿಗಣಿಸಿದೆ? ಬೆಲೆಗಳ ಕುಸಿತದ ನಡುವೆ ಎಷ್ಟು ಬೆಲೆ ನಿಗದಿ ಮಾಡಲಾಗಿದೆ? ಮತ್ತು ಆಯಾ ಬೆಳೆಗಳ ಉತ್ಪಾದನಾ ವೆಚ್ಚ ಎಷ್ಟೆಂದು ಪರಿಗಣಿಸಲಾಗಿದೆ ಎಂಬುದು ಸ್ಪಷ್ಟವಾಗಬೇಕಿದೆ. ಟೊಮೆಟೋ ಮತ್ತು ಈರುಳ್ಳಿ ಬೆಳೆಗಳಿಗೆ ಮಾರುಕಟ್ಟೆಗೆ ಸಾಗಾಣಿಕೆ ವೆಚ್ಚದಷ್ಟೂ ಬೆಲೆ ಸಿಕ್ಕಿಲ್ಲ. ಟೊಮೆಟೋ ಮತ್ತು ಈರುಳ್ಳಿಗೆ ಕರ್ನಾಟಕ ಸರಕಾರ ನಿಗದಿ ಮಾಡಿದ ಬೆಂಬಲ ಬೆಲೆ ಕೇವಲ 6 ರೂ! (ಕಿಲೋಕ್ಕೆ). ಇದು ವಾಸ್ತವ. ಪ್ರಸಕ್ತ 2016ರ ಮುಂಗಾರಿನಲ್ಲಿ ಬೆಳೆದ ಹೆಸರು ಬೆಳೆ (ಕಾಯಿ) ಕಟಾವು ಮಾಡಲು ಎಕರೆಗೆ ಏಳೆಂಟು ಸಾವಿರ ಖರ್ಚು ಬಂದಿದೆ. ಇದು ಅನಿರೀಕ್ಷಿತ ವೆಚ್ಚ. ಇನ್ನುಳಿದ ವೆಚ್ಚಗಳನ್ನು ಲೆಕ್ಕ ಹಾಕಿದರೆ ರೈತರು ಮಾಡಿದ ಸಾಲದ ಬಾಲ ಬೆಳೆಯುತ್ತಿದೆ. ಯಾವುದೇ ದ್ವಿದಳ ಧಾನ್ಯಗಳ ಅಂದರೆ ಹೆಸರು, ಕಡಲೆ, ತೊಗರಿಯ ಬೆಲೆಗಳು ಕ್ವಿಂಟಾಲ್‌ಗೆ 4 ರಿಂದ 5 ಸಾವಿರದ ಒಳಗಡೆ ಇದೆ. ಕರ್ನಾಟಕ ಹಾಲು ಒಕ್ಕೂಟವು ರೈತರ ಹಾಲನ್ನು ಖರೀದಿಸಿ, ಸಂಸ್ಕರಿಸಿ, ಮಾರಾಟ ಮಾಡಿ ಪ್ರತಿ ಲೀಟರ್‌ಗೆ 16ರೂ. ಲಾಭ ಪಡೆಯುತ್ತಿದೆ. ಈ ಲಾಭ ರೈತರು ಹಾಲು ಉತ್ಪಾದಿಸಿ ಕಡಿಮೆ ಬೆಲೆಗೆ ಕೊಟ್ಟಿದ್ದರಿಂದ ಸಾಧ್ಯವಾಯಿತು. ರೈತರು ಒಂದು ಲೀಟರ್ ಹಾಲು ಉತ್ಪಾದಿಸಲು ಮಾಡುವ ಉತ್ಪಾದನಾ ವೆಚ್ಚ ಎಷ್ಟು? ಕರ್ನಾಟಕ ಹಾಲು ಒಕ್ಕೂಟ ಹಾಲನ್ನು ಖರೀದಿಸಿ ಸಂಸ್ಕರಿಸಿ ಮಾರಾಟ ಮಾಡಲು ತಗಲುವ ವೆಚ್ಚ ಎಷ್ಟೆಂದು ಯಾರು ಲೆಕ್ಕಾಚಾರ ಮಾಡಿದಂತಿಲ್ಲ. ಇಲ್ಲಿ ರೈತರಿಗೆ ಅಂದರೆ ಹಾಲು ಉತ್ಪಾದಕರಿಗೆ ಆಗುವ ಹಾನಿಯನ್ನು ಕೃಷಿ ಬೆಲೆ ಆಯೋಗ ಗಮನಿಸಬೇಕಿತ್ತು. ಇದನ್ನು ನೀರು ಮಾರುವ ವ್ಯಾಪಾರಿಗೆ ಹೋಲಿಕೆ ಮಾಡಬೇಕಿತ್ತಲ್ಲವೇ? ಕೃಷಿ ಬೆಲೆಗಳ ಉತ್ಪಾದನಾ ವೆಚ್ಚದಲ್ಲಿ ರೈತರ ಭೂಮಿಯು ಬಂಡವಾಳ ಎಂದು ಪರಿಗಣಿಸಬೇಕು. ಹೊಲ ಇದ್ದಾಗಲೇ ಬೆಳೆ ಬರಬಲ್ಲದು. ಎಕರೆ ಹೊಲದ ಇಂದಿನ ಪೇಟೆಯ ಬೆಲೆ ಸರಾಸರಿ 5 ಲಕ್ಷ ಎಂದಿಟ್ಟುಕೊಂಡರೆ. ಶೇ.10ರ ಬಡ್ಡಿ ದರ ಎಂದರೂ ಬಂಡವಾಳದ ಬಡ್ಡಿಯೇ 50 ಸಾವಿರ ಆಗುತ್ತದೆ. ಸರಕಾರ ಉದ್ದಿಮೆಗಳಿಗೆ ಕೊಟ್ಟಂತೆ ರೈತರಿಗೆ ಭೂಮಿ ಪುಕ್ಕಟ್ಟೆಯಾಗಿ ಕೊಟ್ಟಿಲ್ಲ ಅಥವಾ ಕಡಿಮೆ ಬೆಲೆಗೆ ಕೊಟ್ಟಿಲ್ಲ. ಉಳುಮೆ, ಕೃಷಿ ಯಂತ್ರೋಪಕರಣಗಳು, ಬಿತ್ತನೆ ಬೀಜ, ರಸಗೊಬ್ಬರ ಕಳೆ ಕಸಗಳ ನಿರ್ವಹಣೆ, ಕೀಟರೋಗಗಳ ನಿಯಂತ್ರಣ ಕೃಷಿ ಕೂಲಿಕಾರರ ಕೂಲಿ, ಕೊಯ್ಲು, ಒಕ್ಕಣೆ, ಸಾಗಾಟದ ಖರ್ಚು ಹೊಲಕ್ಕೆ ಒಡ್ಡು (ಬದುವುಗಳ) ನಿರ್ಮಾಣದ ಖರ್ಚು, ಮಧ್ಯಂತರ ಬೇಸಾಯದ ಖರ್ಚು ಇದಕ್ಕೆಲ್ಲ ಮಾಡಿದ ಬೆಳೆ ಸಾಲ, ಬಂಗಾರ ಸಾಲ, ಇತರೆ ಲೇವಾದೇವಿದಾರರಿಂದ ಪಡೆದ ಸಾಲದ ಮೇಲಿನ ಬಡ್ಡಿ, ಮೊದಲಾದವು ಪ್ರತ್ಯಕ್ಷ ಉತ್ಪಾದನಾ ವೆಚ್ಚದಲ್ಲಿ ಸೇರುತ್ತವೆ. ಮನೆ ಮಂದಿಯೆಲ್ಲಾ ಕೃಷಿ ಕೆಲಸ ಕಾರ್ಯಗಳಲ್ಲಿ ರಜೆ ಪಡೆಯದೆ ದುಡಿದಿರುತ್ತಾರೆ. ಹಾಗೂ ಹೊಲದ ಉಸ್ತುವಾರಿಯ ವೆಚ್ಚಗಳೂ ಇವೆ. ಕೃಷಿ ಉತ್ಪನ್ನಗಳ ಹಣೆಬರಹ ಬರೆಯುವವರು ಕೃಷಿಕರಲ್ಲ. ಕೃಷಿಕರು ಕೇವಲ ಉತ್ಪಾದನಾ ಜೀತದಾಳುಗಳು! ಕಾಯ ಕಷ್ಟ ಪಡದವರು, ಪ್ರತಿ ತಿಂಗಳೂ ರಜೆಯಲ್ಲೂ ವೇತನ ಭತ್ಯೆ ಪಡೆಯುವ ಅಧಿಕಾರಿಗಳು ರೈತರ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುತ್ತಾರೆ. ಕೃಷಿ ಬೆಲೆ ಆಯೋಗದ ಅಧ್ಯಕ್ಷರೂ ಇದರಿಂದ ಹೊರತಾಗಿಲ್ಲ. ಕೃಷಿ ಬೆಲೆ ಆಯೋಗದ ಸದಸ್ಯರು ಹತ್ತಾರು ವರ್ಷ ಕೃಷಿ ಮಾಡಿ ಹಲವಾರು ಬೆಳೆ ಮಾಡಿದ ಅನುಭವಿಗಳಂತೂ ಒಬ್ಬರಾದರೂ ಇದ್ದರೆ, ಅದು ರೈತರ ಸುದೈವ. ಕೃಷಿ ಮಾರುಕಟ್ಟೆ ಇಲಾಖೆ, ಕೃಷಿ ಇಲಾಖೆ ಕೃಷಿ ವಿಶ್ವವಿದ್ಯಾಲಯಗಳ ಮುಖ್ಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಕೃಷಿ ಉತ್ಪನ್ನಗಳ ಹಣೆಬರಹ ಬರೆಯುತ್ತಾರೆ! ಇದನ್ನೆಲ್ಲ ಗಮನಿಸಿದರೆ ಲಾಭದ ವರದಿ ಎಷ್ಟು ಸಾಚಾ ಎಂಬುದು ಮನದಟ್ಟಾಗದೇ ಇರದು. ಬೆಳೆಗಳ ಲಾಭ ಗಳಿಕೆಯ ಅಂಕಿ ಸಂಖ್ಯೆಗಳು ಬೆಳೆ ವಿಮೆ ಮಾಡಿಸಿದ ರೈತರಿಗೆ ನೆರವಾದರೆ ರೈತರ ಸುದೈವ ಸರಕಾರ ಮತ್ತು ವಿಮಾ ಕಂಪನಿಗಳು ಈ ಲಾಭಗಳಿಕೆಯ ಸಂಗತಿಯನ್ನು ಗಮನಿಸಿ ಹೊಸ್ತಿಲ ಇಳುವರಿಯ ಪ್ರಮಾಣ ಪರಿಗಣಿಸಿದರೆ ಬೆಳೆ ಹಾನಿ ಆಗಿರುವ ಸಂದರ್ಭದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕಿದೆ. ಇದರಿಂದ ಬೆಳೆ ವಿಮೆ ಮಾಡಿಸಿದ ರೈತರಿಗೆ ಹೆಚ್ಚಿನ ಪರಿಹಾರದ ಮೊತ್ತ ದೊರಕಬಲ್ಲದು. ನಿಜಾಮರ ಕಾಲದಲ್ಲಿದ್ದ ಕೃಷಿ ವ್ಯವಸ್ಥೆ ಕುರಿತು ಒಂದು ಕಡೆಗೆ ಓದಿದ್ದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ ಎನಿಸುತ್ತದೆ. ಏನೇನೋ ಕಾರಣಗಳಿಂದ ಯಾವುದೋ ಒಬ್ಬ ರೈತ ಅಕಸ್ಮಾತ್ ಸರಕಾರಕ್ಕೆ ಕೊಡಬೇಕಿರುವ ಬಾಕಿ ಹಣ ಕೊಡಲು ಶಕ್ತಿ ಇಲ್ಲದಿದ್ದರೆ ನಿಜಾಮರ ಆಡಳಿತ ಏನು ಮಾಡುತ್ತಿತ್ತು ಗೊತ್ತೇ? ಆ ರೈತನ ಹತ್ತಿರ ಬಂದು ನಿನಗೆ ಸರಿಯಾಗಿ ವ್ಯವಸಾಯ ಮಾಡಲು ಶಕ್ತಿ ಇಲ್ಲ. ಈ ವರ್ಷ ನಿನ್ನ ಹೊಲವನ್ನು ನಾವೇ ವ್ಯವಸಾಯ ಮಾಡಿಸ್ತೀವಿ. ಅದರಲ್ಲಿ ಸಂಪತ್ತು ಉತ್ಪತ್ತಿ ಮಾಡಿ ನಮ್ಮ ಬಾಕಿ ಮೊತ್ತವನ್ನು ಪಡೆದುಕೊಂಡು ನಿಮಗೆ ಹೊಲ ವಾಪಸು ಕೊಡ್ತೀವಿ. ಇಂಥ ಒಂದು ವ್ಯವಸ್ಥೆಯನ್ನು ಬ್ಯಾಂಕುಗಳು ಸರಕಾರ, ಕೃಷಿ ವಿಶ್ವವಿದ್ಯಾಲಯಗಳು ಅನುಸರಿಸಿದರೆ.. ಅಥವಾ ಕೃಷಿ ಬೆಲೆ ಆಯೋಗ ಈ ಸವಾಲನ್ನು ಸ್ವೀಕರಿಸಬಲ್ಲದೇ? – ಈರಯ್ಯ ಕಿಲ್ಲೇದಾರ