Advertisement

Agriculture: 1.31ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ – ಹಳದಿ ರೋಗ ಭೀತಿ

12:45 PM Jul 16, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಇಲಾಖೆಯ 1.25 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 1.31 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಶೇ.104.60 ಬಿತ್ತನೆಯಾಗುವ ಮೂಲಕ ಕೃಷಿ ಇಲಾಖೆಯ ಗುರಿ ಮೀರಿ ಶೇ. 4.60 ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ.

Advertisement

ಕಳೆದ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಕೃಷಿ ಇಲಾಖೆ ನಿಗದಿಪಡಿಸಿದ್ದ ಬಿತ್ತನೆ ಗುರಿ ಮುಟ್ಟಿದ್ದಿಲ್ಲ. ಜತೆಗೆ ಸಮಯಕ್ಕೆ
ಸರಿಯಾಗಿ ಮಳೆಯಾಗದ ಕಾರಣ ಹೆಸರು ಬಿತ್ತನೆ ವಿಳಂಬವಾಗಿತ್ತು. ಈ ಕಾರಣದಿಂದ ಹೆಸರಿಗೆ ಬೂದಿರೋಗ ಅಂಟಿಕೊಂಡು ಇಳುವರಿ ಸಂಪೂರ್ಣ ಕೈಕೊಟ್ಟಿತ್ತು. ಪ್ರಸಕ್ತ ಸಾಲಿನಲ್ಲಿ ಮಳೆ ನಿಗದಿತ ಸಮಯದಲ್ಲಿ ಆಗಿದ್ದರಿಂದ ರೈತರು ಸರಿಯಾದ ಸಮಯದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಆದ್ದರಿಂದ ಕೆಲವೆಡೆ ಹೆಸರು ಹೂಬಿಟ್ಟು ಕಾಯಿಯಾಗುವ ಹಂತದಲ್ಲಿದ್ದರೆ, ಕೆಲವೆಡೆ ಮಿಡಿಕಾಯಿ ಕಾಯಿಯಾಗುವ ಹಂತದಲ್ಲಿವೆ. ಇನ್ನೂ ಕೆಲವೆಡೆ ಹೂವು ಬಿಡುವ ಹಂತದಲ್ಲಿದೆ.

ಗಜೇಂದ್ರಗಡ, ರೋಣ, ಲಕ್ಷ್ಮೇಶ್ವರ ಸೇರಿ ಕೆಲವೆಡೆ ಹೆಸರು ಬೆಳೆಗೆ ಬೂದಿ ರೋಗ ಕಾಣಿಸಿಕೊಂಡಿದ್ದು, ಇನ್ನು ಕೆಲವೆಡೆ ಹೆಸರು ಉತ್ತಮ ಇಳುವರಿ ನೀಡುವ ಹಂತದಲ್ಲಿದೆ. ಹೆಸರು, ಮೆಕ್ಕೆಜೋಳ, ತೊಗರಿ ಸೇರಿ ವಿವಿಧ ಬೆಳೆಗಳು ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾರೆ ರೈತರು.

ಗುರಿ ಸಾಧನೆ ಮೀರಿ ಬಿತ್ತನೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹೆಸರು ಮತ್ತು ಮೆಕ್ಕೆಜೋಳ ಕೃಷಿ ಇಲಾಖೆ ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದೆ. 1.25 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 1.31 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದರೆ, 1.01 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 1.02 ಲಕ್ಷ ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆಯಾಗಿದೆ.

Advertisement

ಇನ್ನು ದ್ವಿದಳ ಧಾನ್ಯದ ಪ್ರಮುಖ ಬೆಳೆ ತೊಗರಿ 750 ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 1,155 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. 29 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 28 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ತೃಣಧಾನ್ಯ, ದ್ವಿದಳ ಧಾನ್ಯ, ಎಣ್ಣೆಕಾಳು ಹಾಗೂ ವಾಣಿಜ್ಯ ಬೆಳೆ ಸೇರಿ 3.01 ಲಕ್ಷ ಹೆಕ್ಟೇರ್‌ ಗುರಿ ಪೈಕಿ 2.93 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದ್ದು, ಶೇ. 97.44 ಸಾಧನೆಯಾಗಿದೆ.

ಹೆಸರು ಬೆಳೆಗೆ ರೋಗಗಳು-ಹತೋಟಿ ಕ್ರಮಗಳು

ನಂಜುರೋಗ: ಎಲೆಗಳ ಮೇಲೆ ತಿಳಿ ಹಳದಿ  ಬಣ್ಣದ ಕಲೆಗಳು ಕಾಣಿಸುವುದರಿಂದ ಬೆಳೆ ಸಣ್ಣದಾಗುತ್ತದೆ. ಈ ರೋಗ ತೀವ್ರವಾಗಿದ್ದರೆ ಕಾಯಿ ಬಿಡಲ್ಲ. ಕಾಯಿ ಬಿಟ್ಟರೆ ಕಾಳುಗಳು ಸಣ್ಣದಾಗಿ, ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ರೋಗಕ್ಕೆ ತುತ್ತಾದ ಗಿಡಗಳನ್ನು ಆರಂಭದ ಹಂತದಲ್ಲಿ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು. ನಂತರ ಡೈಮಿಥೊಯೇಟ 1.7 ಮಿ.ಲೀ. ಅಥವಾ ಇಮಿಡಾಕ್ಲೊಪ್ರಿಡ್‌ 0.3 ಮಿ.ಲೀ. ಔಷಧಿಯನ್ನು ಪ್ರತಿ ಲೀಟರ್‌ಗೆ ಕೂಡಿಸಿ ಸಿಂಪಡಣೆ ಮಾಡಿ ರಸ ಹೀರುವ ಕೀಟಗಳನ್ನು ಹತೋಟಿ ಮಾಡಿ ರೋಗ ಉಲ್ಬಣಿಸುವುದನ್ನು ತಡೆಯಬಹುದು.

ಬೂದಿರೋಗ
ಎಲೆಯ ಮೇಲೆ ಶಿಲೀಂಧ್ರದ ಬಿಳಿಯ ಪುಡಿಯಂಥ ಬೆಳವಣಿಗೆ ಕಾಣಬಹುದು. ಇದರಿಂದ ಗಿಡಗಳು ಪೂರ್ತಿಯಾಗಿ ಒಣಗುತ್ತವೆ. ಇದರಿಂದ ಶೇ.10-60 ಇಳುವರಿ ನಷ್ಟವಾಗಬಹುದು. ಈ ರೋಗ ನಿಯಂತ್ರಿಸಲು ಪ್ರೊಪಿಕೋನೊಜೋಲ್‌ 1ಮಿ.ಲೀ. ಅಥವಾ
ಕಾರ್ಬಂಡೈಜಿಮ್‌ 1 ಗ್ರಾಂ ಅಥವಾ ನೀರಿನಲ್ಲಿ ಕರಗುವ ಗಂಧಕ 3 ಗ್ರಾಂ ಔಷಧಿಯನ್ನು ಪ್ರತಿ ಲೀಟರ್‌ ನೀರಿಗೆ ಕೂಡಿಸಿ ಸಿಂಪರಿಸಬೇಕು.

ಪ್ರಸ್ತುತ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಿಲ್ಲಾದ್ಯಂತ ಹೆಸರು, ಮೆಕ್ಕೆಜೋಳ, ಶೇಂಗಾ, ತೊಗರಿ ಅಧಿಕ ಕ್ಷೇತ್ರಗಳಲ್ಲಿ ಬಿತ್ತನೆಯಾಗಿದೆ. ಕೆಲವೆಡೆ ಮಾತ್ರ ಬೂದಿರೋಗ ಕಂಡು ಬಂದಿದ್ದು, ಬೂದಿ ರೋಗ ನಿಯಂತ್ರಣಕ್ಕಾಗಿ ಅಧಿಕಾರಿಗಳು ರೈತರಿಗೆ
ಮಾರ್ಗದರ್ಶನ ನೀಡುತ್ತಿದ್ದಾರೆ. ಉಳಿದಂತೆ ಜಿಲ್ಲಾದ್ಯಂತ ಉತ್ತಮ ಇಳುವರಿ ನಿರೀಕ್ಷೆ ಮಾಡಲಾಗಿದೆ.


●ತಾರಾಣಿ ಜಿ.ಎಚ್‌.,
ಜಂಟಿ ಕೃಷಿ ನಿರ್ದೇಶಕರು, ಗದಗ

ಪ್ರಕಸ್ತ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ 4 ಎಕರೆ ಪ್ರದೇಶದಲ್ಲಿ ಹೆಸರು ಬೆಳೆದಿದ್ದೇನೆ. ಬೆಳೆ ಹೂವು ಬಿಟ್ಟು ಕಾಯಿಯಾಗುವ ಹಂತದಲ್ಲಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇನೆ. ಈ ಸಂದರ್ಭದಲ್ಲಿ ಅತಿಯಾದ ಮಳೆ, ಯಾವುದೇ ರೋಗಗಳು ಬಾಧಿಸದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.
●ರಮೇಶ ಭೀಮನಗೌಡರ,
ರೈತ, ಬಳಗಾನೂರ ಗ್ರಾಮ.

■ ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next