ಬೆಂಗಳೂರು: ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಆಧುನಿಕ ತಂತ್ರಜ್ಞಾನದ ಜೊತೆಗೆ ಸಮೀಕರಿಸುವ ಉದ್ದೇಶದಿಂದ ಕೃಷಿ ಬೆಳೆಗಳಿಗೆ ಬಾಧಿಸುವ ರೋಗಗಳು, ಕೀಟಬಾಧೆ ಹಾಗೂ ಪೋಷಕಾಂಶಗಳ ಕೊರತೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ, ಅದನ್ನು ಸಮರ್ಥವಾಗಿ ನಿಭಾಯಿಸುವ ಮತ್ತು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವ “ಪ್ಲಾಂಟಿಕ್ಸ್’ ಅನ್ನುವ ವಿನೂತನ ಮೊಬೈಲ್ ಆ್ಯಪ್ ಇದೀಗ ಕರ್ನಾಟಕದ ರೈತರಿಗೂ ಲಭ್ಯವಾಗಲಿದೆ.
ಜರ್ಮನ್ ದೇಶದ ನವೋದ್ಯಮ ಸಂಸ್ಥೆಯಾಗಿರುವ “ಪಿಇಎಟಿ’ ಈ ಆ್ಯಪ್ ಅನ್ನು ವಿನ್ಯಾಸಗೊಳಿಸಿದ್ದು, ದೇಶದ ಪ್ರತಿಷ್ಠಿತ ಕೃಷಿ ಸಂಶೋಧನಾ ಸಂಸ್ಥೆಯಾಗಿರುವ “ಇಕ್ರಿಸ್ಯಾಟ್’ ಇದಕ್ಕೆ ತಾಂತ್ರಿಕ ಸಹಯೋಗ ನೀಡಿದೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಈ ವಿನೂತನ “ಪ್ಲಾಂಟಿಕ್ಸ್’ ಆ್ಯಪ್ ಬಿಡುಗಡೆಗೊಳಿಸಿದರು.
ಸೋಮವಾರದಿಂದಲೇ ಈ ಆ್ಯಪ್ ಕರ್ನಾಟಕದ ರೈತರಿಗೆ ಕನ್ನಡ ಭಾಷೆಯಲ್ಲಿ ಲಭ್ಯವಾಗಲಿದೆ. ಈ ಆ್ಯಪ್ ಅನ್ನು ಗೂಗಲ್‌ಪ್ಲೇ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. 3ಜಿ ಆ್ಯಂಡ್ರಾಯ್ಡ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಬಳಸಿಕೊಳ್ಳಬಹುದು. ರೈತರು ಅಥವಾ ಬಳಕೆದಾರರು ಯಾವುದೇ ರೋಗಪೀಡಿತ, ಕೀಟ ಬಾಧೆ ಅಥವಾ ಪೋಷಕಾಂಶಗಳ ಕೊರತೆ ಇರುವ ಬೆಳೆ ಅಥವಾ ಸಸಿಯ ಫೋಟೋಗಳನ್ನು ಪ್ಲಾಂಟಿಕ್ಸ್ ಅಪ್ಲಿಕೇಷನ್ ಮೂಲಕ ಅಪ್‌ಲೋಡ್ ಮಾಡಿದರೆ, ಅದು ತನ್ನ ವಿಶಿಷ್ಠ ತಂತ್ರಜ್ಞಾದ ಕೃತಕ ಬುದ್ದಿವಂತಿಕೆಯಿಂದ ರೋಗ ಗುರುತಿಸಿ ಅದರ ನಿರ್ವಹಣಾ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಸುತ್ತದೆ.
ಅಲ್ಲದೇ ಪ್ಲಾಂಟಿಕ್ಸ್ ಅಪ್ಲಿಕೇಷನ್ ಬಳಕೆದಾರರ ಗ್ರೂಪ್ ರಚಿಸಿಕೊಂಡು ಅದರ ಮೂಲಕ ಒಂದೇ ವೇದಿಕೆಯಡಿ ರೈತರು, ವಿಜ್ಞಾನಿಗಳು ಹಾಗೂ ಆಸಕ್ತರು ಮಾಹಿತಿ, ಅನುಭವ ಹಾಗೂ ಸಲಹೆಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಪ್ಲಾಂಟಿಕ್ಸ್ ಬೆಳೆಗಳ ಮಾರ್ಗದರ್ಶಿ ಮೂಲಕ ಬೆಳೆಯ ವಿವಿಧ ಹಂತಗಳಲ್ಲಿ ಕೈಗೊಳ್ಳುವ ಸಂಪೂರ್ಣ ವಿವರವನ್ನು ಮುಂಚಿತವಾಗಿ ಅಳವಡಿಸಿರುವುದರಿಂದ ಈ ಹಂತಗಳನ್ನು ಅನುಸರಿಸುವುದರಿಂದ ಒಳ್ಳೆಯ ಗುಣಮಟ್ಟ ಹಾಗೂ ಹೆಚ್ಚು ಇಳುವರಿ ಪಡೆದುಕೊಳ್ಳಬಹುದು. ಅದೇ ರೀತಿ ಸಸ್ಯಪೀಡೆಗಳ ಕೋಶ (ಲೈಬ್ರರಿ) ಮೂಲಕ ಪೀಡೆಗಳ ವಿವರಣೆ ಹಾಗೂ ಅವುಗಳ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಇಲ್ಲಿವರೆಗೆ ಈ ಆ್ಯಪ್ ಅನ್ನು ಸುಮಾರು 3 ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳ ಬಳಕೆದಾರರ ಸರಾಸರಿ ಸಂಖ್ಯೆ 6 ಲಕ್ಷ ಇದೆ.
ರೈತರಿಗೆ ಅರಿವು ಮೂಡಿಸಲಾಗುವುದು: ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ, ಕೃಷಿ ಪದ್ದತಿಯಲ್ಲಿ ತಂತ್ರಜ್ಞಾನದ ಬಳಕೆಗೆ ಪ್ಲಾಂಟಿಕ್ಸ್ ಆ್ಯಪ್ ಒಂದು ಅತ್ಯುತ್ತಮ ಹಾಗೂ ಅತ್ಯಾಧುನಿಕ ಸಾಧನವಾಗಿದೆ. ಇದರ ಬಳಕೆ ಹೆಚ್ಚಾದಂತೆ, ರೈತರಿಗೆ ಅನುಕೂಲಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಆ್ಯಪ್ ಅನ್ನು ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ತಾಲೂಕ ಹಾಗೂ ಹೊಬಳಿ ಮಟ್ಟದಲ್ಲಿ ರೈತರ ಗ್ರೂಪ್‌ಗ್ಳನ್ನು ರಚಿಸಿ ಆ ಮೂಲಕ ಪರಸ್ಪರ ಅಭಿಪ್ರಾಯ, ಅನುಭವ ಹಾಗೂ ಸಲಹೆಗಳನ್ನು ಹಂಚಿಕೊಳ್ಳುಲು ವೇದಿಕೆ ಸೃಷ್ಟಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಇಎಟಿ ಹಾಗೂ ಇಕ್ರಿಸ್ಯಾಟ್‌ನ ಪ್ರತಿನಿಧಿಗಳು, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.