Advertisement

ಬಿತ್ತನೆ ಬೀಜದ ಕೊರತೆ ಇಲ್ಲ

06:25 AM Jun 15, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಾದ ಡಿಎಪಿ ರಸಗೊಬ್ಬರದ ಸರಬರಾಜಿನಲ್ಲಿ ಕೊರತೆ ಇದ್ದು, ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಸಚಿವ ಎನ್‌. ಎಚ್‌.ಶಿವಶಂಕರೆಡ್ಡಿ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮಿಗೆ 21.87 ಲಕ್ಷ ಟನ್‌
ವಿವಿಧ ಗ್ರೇಡ್‌ ರಸಗೊಬ್ಬರಗಳ ಬೇಡಿಕೆಯಿದೆ. ಜೂನ್‌ 13ರವರೆಗೆ 7.31 ಲಕ್ಷ ಮೆಟ್ರಿಕ್‌ ಟನ್‌ ಸರಬರಾಜು
ಮಾಡಲಾಗಿದ್ದು, 6.21 ಲಕ್ಷ ಟನ್‌ಗಳ ದಾಸ್ತಾನು ಲಭ್ಯತೆ ಇದೆ. ಈ ಪೈಕಿ ಡಿಎಪಿ ರಸಗೊಬ್ಬರ ಕೊರತೆ ಇದ್ದು, ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಮುಂಗಾರು ಹಂಗಾಮಿಗೆ 8.60 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜದ ಬೇಡಿಕೆ ಇದ್ದು, ರಾಜ್ಯದ ಬೀಜ ಉತ್ಪಾದನಾ ಸಂಸ್ಥೆಗಳಿಂದ ಪೂರೈಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೂನ್‌ 13 ರವರೆಗೆ 1.30 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜವನ್ನು ರಿಯಾಯಿತಿಯಲ್ಲಿ ವಿತರಿಸಲಾಗಿದೆ. ರಾಜ್ಯದಲ್ಲಿ 103 ಲಕ್ಷ ಹೆಕ್ಟೇರ್‌ ಕೃಷಿ ಪ್ರದೇಶವಿದ್ದು ಶೇ.65ರಷ್ಟು 
ಮಳೆಯಾಶ್ರಿತ, ಶೇ.35ರಷ್ಟು ನೀರಾವರಿ ಕೃಷಿ ಪ್ರದೇಶವಾಗಿದೆ. 78 ಲಕ್ಷ ರೈತ ಕುಟುಂಬಗಳು ಕೃಷಿಯಲ್ಲಿ ತೊಡಗಿವೆ. ರಾಜ್ಯದಲ್ಲಿ ಬಿತ್ತನೆ ಕಾರ್ಯವೂ ಚುರುಕುಗೊಂಡಿದ್ದು 74.69 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯ ಪೈಕಿ 9.44 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಜೂನ್‌ ಎರಡನೇ ವಾರದ ಅಂತ್ಯಕ್ಕೆ 13.90 ಲಕ್ಷ ಹೆಕ್ಟೇರ್‌ ಬಿತ್ತನೆ ಪೂರ್ಣಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ (ಏಪ್ರಿಲ್‌-ಮೇ) ಸಾಮಾನ್ಯ ಮಳೆ 118 ಮಿ.ಮೀ.ಗೆ ಪ್ರತಿಯಾಗಿ 171 ಮಿ.ಮೀ. ಮಳೆ ಆಗಿದೆ. ನೈಋತ್ಯ ಮಾರುತ ಮಳೆಯು ಮೇ 30ರಂದು ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಪ್ರವೇಶಿಸಿ ಜೂ.8 ರಂದು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆವರಿಸಿದೆ ಎಂದು ವಿವರಿಸಿದರು
ಕಳೆದ ಐದು ವರ್ಷಗಳಲ್ಲಿ ರಾಜ್ಯವು ನಾಲ್ಕು ವರ್ಷ ಬರಗಾಲಕ್ಕೆ ತುತ್ತಾಗಿದ್ದು 2010-11ರಲ್ಲಿ ಆಹಾರ ಉತ್ಪಾದನೆ ಗರಿಷ್ಠ 137.91 ಲಕ್ಷ ಮೆಟ್ರಿಕ್‌ ಟನ್‌ ಆಗಿತ್ತು. 2015-16 ರಲ್ಲಿ ಆಹಾರ ಉತ್ಪಾದನೆಯು ಕನಿಷ್ಠ 96.44 ಲಕ್ಷ ಮೆಟ್ರಿಕ್‌ ಟನ್‌ಗೆ ಇಳಿದು 2017-18 ನೇ ಸಾಲಿನಲ್ಲಿ ಚೇತರಿಸಿಕೊಂಡು 111.78 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟಾಗಿದೆ. ರಾಜ್ಯದ ದಾವಣಗೆರೆ, ತುಮಕೂರು, ಬೆಳಗಾವಿ, ಮೈಸೂರು ಮತ್ತು ಚಾಮರಾಜನಗರ ಸೇರಿ ಐದು ಜಿಲ್ಲೆಗಳಲ್ಲಿ 1686.44 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು.

ವಿಶ್ವಬ್ಯಾಂಕ್‌ ನೆರವಿನ “ಸುಜಲಾ’ ಯೋಜನೆಯಡಿ ರಾಜ್ಯದ 11 ಜಿಲ್ಲೆಗಳ 2,531 ಕಿರು ಜಲಾನಯನ ಪ್ರದೇಶಗಳ
ಮಳೆಯಾಶ್ರಿತ ಪ್ರದೇಶದಲ್ಲಿ ಭೂಸಂಪನ್ಮೂಲ ಹಾಗೂ ಜಲಸಂಪನ್ಮೂಲ ಸಮೀಕ್ಷೆ ನಡೆಸಲಾಗಿದೆ. ಯೋಜನೆಯ ಅನುಷ್ಟಾನಕ್ಕೆ ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವ ಪಡೆಯಲಾಗುವುದು ಎಂದು ಹೇಳಿದರು.

Advertisement

69 ರೈತರು ಆತ್ಮಹತ್ಯೆ
ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಸಾಲಭಾದೆಯಿಂದ 69 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡದಲ್ಲಿ ಅತಿ ಹೆಚ್ಚು 10, ಬೆಳಗಾವಿಯಲ್ಲಿ 9, ಹಾವೇರಿಯಲ್ಲಿ 7, ರಾಯಚೂರಿನಲ್ಲಿ 4 ಹಾಗೂ ಹಾಸನದಲ್ಲಿ 4 ರೈತರು ಸಾವಿಗೆ ಶರಣಾಗಿದ್ದಾರೆ. ಎರಡು ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಎರಡು ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 13 ಪ್ರಕರಣಗಳಲ್ಲಿ ಎಫ್ಎಸ್‌ಎಲ್‌ ವರದಿಗಾಗಿ ಕಾಯಲಾಗುತ್ತಿದೆ. 49 ಪ್ರಕರಣಗಳು ವಿವಿಧ ಕಾರಣಕ್ಕೆ ಇನ್ನೂ ಇತ್ಯರ್ಥಗೊಂಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next