ಭಾಲ್ಕಿ: ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಮತ್ತು ಕೃಷಿಯನ್ನು ಲಾಭದಾಯಕವಾಗಿ ಮಾಡಲು ಋತು ಆಧಾರಿತ ಬೆಳೆ ಬೆಳೆಯಬೇಕು ಎಂದು ನೈಸರ್ಗಿಕ ಕೃಷಿಕ ಕವಿತಾ ಮಿಶ್ರಾ ಸಲಹೆ ನೀಡಿದರು. ಪಟ್ಟಣದ ಚನ್ನಬಸವಾಶ್ರಮದಲ್ಲಿ ಡಾ| ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ, ವಚನ ಜಾತ್ರೆ ನಿಮಿತ್ತ ನಡೆದ ನೈಸರ್ಗಿಕ ಕೃಷಿ ಗೋಷ್ಠಿಯಲ್ಲಿ ಅವರು ತಮ್ಮ ಅನುಭವ ಹಂಚಿಕೊಂಡರು.
ರೈತ ಸಾಲದಲ್ಲಿಯೇ ಹುಟ್ಟಿ ಸಾಲದಲ್ಲಿಯೇ ಸಾಯುವಂತಹ ಸ್ಥಿತಿ ನಿರ್ಮಾವಾಗಿದೆ. ರೈತ ಸ್ವಾಭಿಮಾನದ ಬದುಕು ನಡೆಸಲು ಹವಣಿಸುತ್ತಾನೆ. ಯಾರಿಗೂ ಮೋಸ ಮಾಡುವುದಿಲ್ಲ. ತುಂಬಾ ಕಷ್ಟ ಎದುರಾದರೆ ನೇಣಿಗೆ ಶರಣಾಗುತ್ತಾನೆ ಎಂದು ಕಳವಳ ವ್ಯಕ್ತಪಡಿಸಿದರು. ಏಕ ಬೆಳೆ ಪದ್ದತಿ ಕೈ ಬಿಟ್ಟು ಬಹು ಬೆಳೆ ಪದ್ಧತಿ ಅನುಸರಿಸಬೇಕು.
ಒಂದು ಬೆಳೆ ಕೈ ಕೊಟ್ಟರೆ ಇನ್ನೊಂದು ಬೆಳೆ ಕೈ ಹಿಡಿಯುತ್ತದೆ. ಆಗ ಸ್ಥಿರ ಬದುಕು ನಡೆಸಲು ಸಾಧ್ಯವಾಗುತ್ತದೆ. ಅರಣ್ಯ ಬೆಳೆಗೆ ವಿಶೇಷ ಗಮನ ಕೊಡುವ ಅಗತ್ಯವಿಲ್ಲ. ಹಾಗಾಗಿ, ತೋಟಗಾರಿಕೆ ಬೆಳೆಯಲ್ಲಿ ಅರಣ್ಯ ಕೃಷಿ ಮಾಡಬೇಕು. ದಾಳಿಂಬೆ, ಮಾವಿನ ಗಿಡ, ಪೇರಲ ಗಿಡ, ಬಾಳೆ, ನಿಂಬೆ, ಬೆಟ್ಟದ ನೆಲ್ಲಿಕಾಯಿ, ಕರಿಬೇವು, ಮೋಸಂಬಿ, ಬೆಳೆಯಬೇಕು.
ಸಾವಯವ ಕೃಷಿಯ ಮೂಲಕ ಮಣ್ಣಿನ ಆರೋಗ್ಯ ಕಾಪಾಡಿ ಉತ್ತಮ ಬೆಳೆ ಬೆಳೆದು ಮಾರುಕಟ್ಟೆಗೆ ಸೆಡ್ಡು ಹೊಡೆದು ನಿಲ್ಲಬೇಕು. ಯಾರಿಗೂ ಕೈ ಒಡ್ಡಬಾರದು ಎಂದು ಸಲಹೆ ನೀಡಿದರು. ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ರೈತರು ಆತ್ಮಸ್ಥೈರ್ಯ ಕುಗ್ಗಿಸಿಕೊಳ್ಳದೇ ಸಮಸ್ಯೆಗಳಿಂದ ಹೊರ ಬರಲು ವಿಭಿನ್ನವಾಗಿ ಯೋಚಿಸಬೇಕು.
ಅವಶ್ಯಕತೆ ಆವಿಷ್ಕಾರದ ತಾಯಿ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ಗುರುಬಸವ ಪಟ್ಟದ್ದೇವರು, ಶಿವಕುಮಾರ ಸ್ವಾಮೀಜಿ, ಕೃಷಿ ಅ ಧಿಕಾರಿ ರವಿ ದೇಶಮುಖ, ಎಚ್.ಸಿ. ರುದ್ರಪ್ಪ, ಶಂಕರೆಪ್ಪ ಬೇವೂರ, ಬಸವರಾಜ ಬುಳ್ಳಾ, ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ಮಾತನಾಡಿದರು.
ಆನಂದ ದೇವಪ್ಪ, ರೈತ ಸಂಘದ ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಅಣದೂರೆ, ಬಾಬುರಾವ್ ಜೋಳದಾಬಕಾ, ಶೇಷರಾವ್ ಕಣಜೆ ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು. ನಾಗಯ್ಯ ಸ್ವಾಮಿ ಸ್ವಾಗತಿಸಿದರು. ಅಕ್ಷರಾ ಪಟೆ, ಪುಷ್ಪಾಂಜಲಿ ಮಹಾದೇವ ಪಟೆ° ವಚನ ನೃತ್ಯ ಪ್ರದರ್ಶಿಸಿದರು. ಆನಂದ ಕಲ್ಯಾಣೆ ನಿರೂಪಿಸಿದರು. ಮಲ್ಲಿಕಾರ್ಜುನ ಮಣಗೀರೆ ವಂದಿಸಿದರು.