Advertisement
ತಾಲೂಕಿನಲ್ಲಿ 1000 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಆದರೆ ಬೆಳೆಗೆ ಮುಟುರು ಮತ್ತು ಚಿಬ್ಬು ರೋಗ ಕಾಣಿಸಿದ್ದು ಬೆಳೆ ಸಂಪೂರ್ಣ ಹಾಳಾಗುವ ಹಂತ ತಲುಪಿದೆ. ರೋಗ ನಿಯಂತ್ರಣಕ್ಕೆ ಬಾರದಿರುವುದು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
Related Articles
Advertisement
ರೋಗದ ಲಕ್ಷಣ
ರೋಗಬಾಧೆಯಿಂದ ಮೆಣಸಿನಕಾಯಿ ಬೆಳೆಯ ಎಲೆ ಮೊದಲು ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗುತ್ತದೆ. ನಂತರ ಎಲೆಗಳು ವಕ್ರಾಕಾರವಾಗಿ ಮುಟುರುಗೊಂಡು ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳ ಮೇಲೆ ವೃತ್ತಾಕಾರದ, ತಗ್ಗಾದ, ಕಪ್ಪನೆ ಚುಕ್ಕೆ ಕಂಡುಬರುತ್ತವೆ. ನಂತರ ಎಲೆಗಳು ಉಂಗುರಾಕಾರವಾಗಿ ಪರಿವರ್ತನೆಯಾಗುತ್ತವೆ. ಕಂದು ಅಥವಾ ಬೂದಿ ಬಣ್ಣಕ್ಕೆ ತಿರುಗಿ ಟೊಂಗೆಗಳು ತುದಿಯಿಂದ ಒಣಗಲು ಆರಂಭಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.
ನುಸಿ ಆಕಾರದ ಕೀಟಗಳು ಎಲೆಗಳಿಂದ ರಸ ಹೀರುತ್ತವೆ. ಇದರಿಂದ ಎಲೆಗಳ ಮೇಲ್ಭಾಗ-ಕೆಳಭಾಗ ಮುಟುರುಗೊಳ್ಳುತ್ತವೆ. ಮೊಗ್ಗುಗಳು, ಎಲೆ ಭಾಗಗಳು ವಿಕಾರವಾಗುತ್ತವೆ. ನುಸಿಗಳ ಹಾವಳಿ ಹೆಚ್ಚಾದಾಗ ಕಪ್ಪು ಬೂಸ್ಟ್ ಬೆಳವಣಿಗೆಯಾಗುತ್ತದೆ. ಕೀಟಗಳು ವೈರಸ್ ಹರಡಲು ಶಕ್ತಿಶಾಲಿಯಾಗಿವೆ ಎನ್ನುತ್ತಾರೆ. ಬೆಳೆ ನಾಟಿ ಮಾಡಿದ 2 ಅಥವಾ 5 ವಾರಗಳ ನಂತರ ರೋಗ ತಡೆಗಟ್ಟಲು ರೈತರು ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಸೀಮೆ ಎಣ್ಣೆ ಬೆರೆಸಿ ಕಷಾಯ ಮಾಡಿಕೊಳ್ಳಬೇಕು. ಇದನ್ನು ಬೇವು, ಜನ್ಯ ಕೀಟನಾಶಕದೊಂದಿಗೆ 2.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಿದ್ದಲ್ಲಿ ರೋಗ ಹತೋಟಿಗೆ ಬರುತ್ತದೆ. ಇಲ್ಲವೇ ಹೆಕ್ಸಾಕೊನಾಜೋಲ್, 70 ಡಬ್ಲೂಪಿ ಅಥವಾ ಡಿಫೆನೊಕೊನಾಜೋಲ್ ಕ್ರಿಮಿನಾಶಕ ಸಿಂಪಡಿಸುವಂತೆ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಸತೀಶ ಕಾಳೆಕರ್ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಕೊರೊನಾ, ಬೆಲೆ ಕುಸಿತ, ಖರ್ಚು-ವೆಚ್ಚದ ಹೊಡೆತದೊಂದಿಗೆ ಬೆಳೆಗೆ ಆವರಿಸಿದ ಹಲವು ರೋಗಗಳು ಅನ್ನದಾತರನ್ನು ಅಕ್ಷರಶಃ ನಲುಗಿಸಿವೆ.
-ಸಿದ್ದಯ್ಯ ಪಾಟೀಲ