“ಒಂಟಿ ಎತ್ತಾದ್ರೆ ಬದುವಿನ ಬುಡದವರೆಗೆ ಉಳುಮೆ ಮಾಡಬಹುದು. ತಿರುಗುವಾಗ ಪಕ್ಕದವರ ತೋಟಕ್ಕೆ ಎತ್ತು ಇಳಿಯುವ ಸಮಸ್ಯೆ ಇಲ್ಲ’ ಎರಡೇ ವಾಕ್ಯದಲ್ಲಿ ಕುಮಾರ್‌ರವರು ತಮ್ಮ ಒಂಟೆತ್ತಿನ ನೇಗಿಲ ಮಹತ್ವವನ್ನು ಹೇಳಿಬಿಟ್ಟಿದ್ದರು ! ಎರಡು ಎತ್ತುಗಳ ಹೆಗಲ ಮೇಲೆ ನೊಗ ಜೋಡಿಸಿದ ಮೇಲೆ ಅವುಗಳ ಸಮತೋಲನ ಕಾಪಾಡುವುದೇ ಮುಖ್ಯ. ಗದ್ದೆಯ ಬದುವಿನ ಪಕ್ಕ ಉಳುಮೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ಪ್ರಯತ್ನಿಸಿದಲ್ಲಿ ಒಂದು ಎತ್ತು ಪಕ್ಕದ ಗದ್ದೆಗೆ ಇಳಿಯಲೇ ಬೇಕು. ಪಕ್ಕದ ಗದ್ದೆ ನಮ್ಮದೇ ಆಗಿದ್ದರೆ ಪರವಾಗಿಲ್ಲ. ಬೇರೆಯವರದ್ದಾಗಿದ್ದರೆ ಅವರ ಬೈಗುಳ ಕೇಳಿಸಿಕೊಳ್ಳಲು ತಯಾರಾಗಿರಬೇಕು. ಇನ್ನು ಅಲ್ಲಿಯೇ ಏನದರೂ ಬೆಳೆ ಇದ್ದರಂತೂ ಕಥೆ ಮುಗಿಯಿತು !
ಅದೂ ಕೂಡಾ ಅಕ್ಕಪಕ್ಕದ ಹೊಲ ಸಮತಟ್ಟಾಗಿದ್ದರೆ ಮಾತ್ರ ಸಾಧ್ಯ. ಒಂದು ವೇಳೆ ತಗ್ಗಿನಲ್ಲಿದ್ದರೆ ಒಂದು ಎತ್ತನ್ನು
ಇಳಿಸುವುದು ತ್ರಾಸ. ಎತ್ತರದಲ್ಲಿದ್ದರೆ ಏರಿಸುವುದು ಪ್ರಯಾಸ. ನೊಗದ ಇನ್ನೊಂದು ಬದಿಯಲ್ಲಿರುವ ಎತ್ತಿಗೆ ಘಾಸಿಯಾದಂತೆ ಉಳುಮೆ ಮಾಡುವುದು ಒಂದು ಅದ್ಭುತವಾದ ಕಲೆ. ಹೇಳಿಕೇಳಿ ಕುಮಾರ್ ಅವರದ್ದು ಮಂಡ್ಯ ಜಿಲ್ಲೆ. ಕಾಲುವೆ ನೀರು ಹರಿಸಿ ಭತ್ತ ಬೆಳೆಯುವ ಸಣ್ಣ ಸಣ್ಣ ಗದ್ದೆಗಳು. ಇಲ್ಲಿ ಉಳುವುದು ಕಷ್ಟ ಎಂದು ಟ್ರಾಕ್ಟರ್, ಟಿಲ್ಲರ್‌ಗಳು ಸುಳಿಯುವುದೇ ಇಲ್ಲ. ಎತ್ತುಗಳ ಅವಲಂಬನೆ ಅನಿವಾರ್ಯ. ಮದ್ದೂರು- ಬೆಸಗರಹಳ್ಳಿ ರಸ್ತೆಯಲ್ಲಿರುವ
ಕುಮಾರ್‌ರವರ ಊರು ರಾಂಪುರ ಕೂಡಾ ಇದಕ್ಕೇನೂ ಹೊರತಾಗಿಲ್ಲ.
ಅಷ್ಟಕ್ಕೂ ಕುಮಾರ್‌ರವರು ಭತ್ತದ ಗದ್ದೆ ಉಳುಮೆಗೆಂದು ಒಂಟೆತ್ತು ನೇಗಿಲು ತಂದವರಲ್ಲ. ಅದೊಮ್ಮೆ ಮೈಸೂರು ಆಕಾಶವಾಣಿಯಲ್ಲಿ ಕೆ ಆರ್ ನಗರದ ವೇಣುಗೋಪಾಲ್‌ರವರ ಒಂಟೆತ್ತು ನೇಗಿಲಿನ ಯಶೋಗಾಥೆಯ ಸಂದರ್ಶನ ಪ್ರಸಾರ ಮಾಡಿದ್ದರು. ಅವರು ಅಡಿಕೆ ತೋಟ ಉಳುಮೆಗಾಗಿ ಈ ನೇಗಿಲು ಬಳಸುತ್ತಿದ್ದರು. ಅಡಿಕೆ ತೋಟದ ಸಾಲುಗಳ ಮಧ್ಯೆ ಎರಡು ಎತ್ತುಗಳು ಹೋಗುವಷ್ಟು ಅಂತರವಿಲ್ಲ. ಅದಕ್ಕಾಗಿ ಅವರು ಒಂಟೆತ್ತಿನ ನೇಗಿಲಿನ ಆಷ್ಕಾರ ಮಾಡಿದರು.
ರೇಡಿಯೋ ಕಾರ್ಯಕ್ರಮ ಕೇಳಿದ ನಂತರ ಕುಮಾರ್ ಕೆ ಆರ್ ನಗರಕ್ಕೆ ಹೋದರು. ವೇಣುಗೋಪಾಲ್‌ರವರಿಂದ ಒಂದು ಒಂಟೆತ್ತಿನ ನೇಗಿಲು ತಂದರು. ಇದು ಎಂಟು ವರ್ಷದ ಹಿಂದಿನ ಕಥೆ. ಆಗ ಆ ನೇಗಿಲಿಗೆ ಅವರು ಕೊಟ್ಟಿದ್ದು ಸಾವಿರದ ಎಂಟುನೂರು ರೂ.
“ನಾನು ನೇಗಿಲು ತಂದಿದ್ದು ಕಾಳು ಮೆಣಸಿನ ತೋಟ ಉಳುಮೆ ಮಾಡೋಕೆ’ ಅಂತ ವಿವರಿಸುತ್ತಾರೆ ಕುಮಾರ್. ಹೊಸದಾಗಿ ಸಿಲ್ವರ್ ಓಕ್ ಮರಗಳಿಗೆ ಕಾಳುಮೆಣಸು ನೆಟ್ಟ ಉತ್ಸಾಹ. ಒಂದು ಕಳೆ ಕೂಡಾ ಬೆಳೆಯಲು ಬಿಡಬಾರದು ಅನ್ನುವ ಹಠಕ್ಕೆ ಬಿದ್ದು ಉಳುಮೆಗಾಗಿ ಒಂಟೆತ್ತಿನ ನೇಗಿಲು ತಂದರು.
ಈಗ ಕಾಳುಮೆಣಸಿನ ತೋಟ ಉಳುವುದೇ ಇಲ್ಲ. ನೈಸರ್ಗಿಕ ಕೃಷಿ ಮಾಡುತ್ತೇನೆ. ಆದರೆ ಹಿಪ್ಪುನೇರಳೆ ತೋಟಕ್ಕೆ ಮಾತ್ರ ಒಂಟಿ ನೇಗಿಲಿನದ್ದೇ ಉಳುಮೆ. ನಾಲ್ಕಡಿ ಅಂತರದ ಸಾಲುಗಳು. ಗಿಡಗಳ ಮಧ್ಯೆ ಎರಡಡಿ ಅಂತರ. ಸಾಲಿನ ಉದ್ದ ಮತ್ತು ಅಡ್ಡ ಉಳುಮೆ ಮಾಡಲು ಸಾಧ್ಯ. ಹಸುವಿನ ಕಾಲಿಗೆ ಗಿಡ ತಗುಲಿ ಏಟಾಗುತ್ತದೆಯೆಂಬ ಭಯವಿಲ್ಲ. ಒಂದೇ ಹಸುವಾದ್ದರಿಂದ ಹುಶಾರಾಗಿ ಗಿಡ ತಪ್ಪಿಸಿಕೊಂಡು ಹೋಗುತ್ತದೆ ಎನ್ನುತ್ತಾರೆ ಕುಮಾರ್. ಹಾn ! ಹೇಳಲು ಮರೆತಿದ್ದೆ. ಕುಮಾರ್ ಅವರ ಈ ನೇಗಿಲು ಈಗ ಎಳೆಯುವುದು ಒಂಟಿ ಎತ್ತೂ ಕೂಡಾ ಅಲ್ಲ. ಒಂಟಿ ಹಸು. ಈ ಹಸು ಒಂದು ಟನ್ ತೂಕ ಎಳೆಯುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕುಮಾರ್.
– ಗಣಪತಿ ಭಟ್ ಹಾರೋಹಳ್ಳಿ