Advertisement

ಕೃಷಿ ರೇಷ್ಮೆ, ತೋಟಗಾರಿಕೆ 2 ಸಾವಿರ ಹುದ್ದೆ ಕಡಿತ; ಮೂರು ನಿಗಮ, ಏಳು ಪ್ರಾಧಿಕಾರ ಬಂದ್‌

10:52 PM Oct 11, 2022 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಹುದ್ದೆ ಹಾಗೂ ವೆಚ್ಚ ಕಡಿತ ಸಂಬಂಧ ರಚನೆಯಾಗಿದ್ದ ಸಂಪುಟ ಉಪ ಸಮಿತಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಲ್ಲಿನ ಎರಡು ಸಾವಿರ ಹುದ್ದೆಗಳನ್ನು ರದ್ದುಗೊಳಿಸುವ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

Advertisement

ಅಷ್ಟೇ ಅಲ್ಲದೆ ಕೃಷಿ ಇಲಾಖೆ ವ್ಯಾಪ್ತಿಗೆ ಬರುವ ಮೈಸೂರು ತಂಬಾಕು ಕಂಪನಿ, ಕರ್ನಾಟಕ ಕೃಷಿ ಕೈಗಾರಿಕೆ ನಿಗಮ ಹಾಗೂ ಕರ್ನಾಟಕ ಆಹಾರ ನಿಗಮವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ.

ಮೂರೂ ಇಲಾಖೆಯಲ್ಲಿ ನಾಮಕಾವಾಸ್ತೆಗಾಗಿ ಸಮಾನ ಸ್ಥಾನಮಾನ ಕಲ್ಪಿಸಲು ಸೃಷ್ಟಿಯಾಗಿರುವ ಉನ್ನತ ಶ್ರೇಣಿಯ ಹುದ್ದೆಗಳನ್ನು ರದ್ದುಪಡಿಸಲು ತೀರ್ಮಾನಿಸಲಾಗಿದೆ ಎಂದು ಸಂಪುಟ ಉಪ ಸಮಿತಿ ಅಧ್ಯಕ್ಷ ಹಾಗೂ ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಒಂದೇ ಸಚಿವಾಲಯ
ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು ಕೃಷಿ ಕುರಿತ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದ್ದು, ಮೂರನ್ನೂ ಒಂದೇ ಸಚಿವಾಲಯದಡಿ ತರುವ ಚಿಂತನೆ ಇದೆ. ಮೂರು ಇಲಾಖೆಗಳಿಂದ ಒಟ್ಟು 2000ಕ್ಕೂ ಹೆಚ್ಚು ಹುದ್ದೆ ರದ್ದುಪಡಿಸಲಾಗುವುದು ಎಂದು ಹೇಳಿದರು.

ರೇಷ್ಮೆ ಬೆಳೆಯದ ಜಿಲ್ಲೆಗಳಲ್ಲೂ ರೇಷ್ಮೆ ಇಲಾಖೆಯ ಅ ಧಿಕಾರಿಗಳಿದ್ದಾರೆ. ರೇಷ್ಮೆ ಬೆಳೆಗಾರರಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಅ ಧಿಕಾರಿ ಮತ್ತು ಸಿಬ್ಬಂದಿ ವರ್ಗದ ಹುದ್ದೆಗಳನ್ನು ರದ್ದುಪಡಿಸುವ, ಇಲ್ಲವೇ ವಿಲೀನಗೊಳಿಸುವುದು ಸೂಕ್ತ. ಸಮಾನ ಜವಾಬ್ದಾರಿ ನಿರ್ವಹಣೆಯ ನಾನಾ ಶ್ರೇಣಿಯ ಹುದ್ದೆಗಳಿದ್ದು ಅವುಗಳ ಪೈಕಿ ಅನಗತ್ಯ ಹುದ್ದೆಗಳನ್ನು ರದ್ದುಪಡಿಸಲಾಗುವುದು ಎಂದು ವಿವರಿಸಿದರು.

Advertisement

ಮುದ್ರಣ, ಲೇಖನ ಸಾಮಗ್ರಿ ಪ್ರಕಟಣೆ ಇಲಾಖೆಯನ್ನು ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಆಯುಕ್ತರು, ನಿರ್ದೇಶಕ ಶ್ರೇಣಿ ಹುದ್ದೆ ರದ್ದಾಗಲಿದ್ದಾರೆ. ಕೆಳಹಂತದ ಅಧಿಕಾರಿ, ನೌಕರ, ಸಿಬ್ಬಂದಿ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳ್ಳಲಿದ್ದಾರೆ. ಅದೇ ರೀತಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ವಿಲೀನಗೊಳಿಸಲಾಗುವುದು. ಒಂದೇ ಸೂರಿನಡಿ ಪ್ರವಾಸೋದ್ಯಮ ಚಟುವಟಿಕೆ ನಡೆಸುವ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ ಎಂದು ಹೇಳಿದರು. ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆಯಲ್ಲೂ ಕತ್ತರಿ
ಅರಣ್ಯ ಇಲಾಖೆಯಲ್ಲಿ ಜಿಲ್ಲೆಗೆ ಇಬ್ಬರು, ಮೂವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್‌) ಹಾಗೂ ತಾಲ್ಲೂಕಿಗೆ ಇಬ್ಬರು, ಮೂವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿದ್ದಾರೆ(ಎಸಿಎಫ್‌). ಅರಣ್ಯ, ಸಾಮಾಜಿಕ ಅರಣ್ಯಕ್ಕೆ ಪ್ರತ್ಯೇಕವಾಗಿ ಉನ್ನತ ಶ್ರೇಣಿ ಅಧಿಕಾರಿಗಳಿದ್ದಾರೆ. ಅರಣ್ಯ ಪ್ರದೇಶ ಹೆಚ್ಚಾಗಿರುವೆಡೆ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಿ ಉಳಿದೆಡೆ ಅಗತ್ಯಕ್ಕೆ ತಕ್ಕಂತೆ ನಿಯೋಜಿಸಲು ಪರಿಶೀಲನೆ ನಡೆಸಲಾಗಿದೆ. ಉನ್ನತ ಶ್ರೇಣಿಯ ಅನಗತ್ಯ ಹುದ್ದೆಗಳ ರದ್ದು ಹಾಗೂ ಕೆಳಹಂತದ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದರು. ಅರಣ್ಯ ಇಲಾಖೆಯಲ್ಲಿ ಅನಗತ್ಯ ಹುದ್ದೆ ರದ್ದು, ವಿಲೀನ ಸಂಬಂಧ ಪರಿಶೀಲಿಸಲು ಮುಂದಿನ ಸಭೆಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಸೂಚಿಸಲಾಗಿದೆ ಎಂದು ಅಶೋಕ್‌ ಹೇಳಿದರು.

ಯೋಜನಾ ಪ್ರಾಧಿಕಾರ ರದ್ದು
ಬೆಂಗಳೂರಿನ ಸುತ್ತ ನೆಲಮಂಗಲ, ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಸಾತನೂರು, ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ 10 ಅಭಿವೃದ್ಧಿ ಪ್ರಾಧಿಕಾರಗಳಿದ್ದು ಈ ಪೈಕಿ ಏಳು ಪ್ರಾಧಿಕಾರ ರದ್ದುಪಡಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಮುಂದಿನ ಸಭೆಗೆ ಪ್ರಸ್ತಾವ ಮಂಡಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲೆಗೆ ಒಂದು ಪ್ರಾಧಿಕಾರ ಇರುವಂತೆ ನೋಡಿಕೊಳ್ಳಲಾಗುವುದು.
– ಆರ್‌.ಅಶೋಕ್‌

Advertisement

Udayavani is now on Telegram. Click here to join our channel and stay updated with the latest news.

Next