ಭೇರ್ಯ: ಕೆ.ಆರ್.ನಗರ ತಾಲೂಕಿನ ಮೂವರು ಪ್ರಗತಿಪರ ರೈತರಿಗೆ ಕೃಷಿ ಪಂಡಿತ ಪ್ರಶಸ್ತಿ ಲಭಿಸಿದೆ. ಪ್ರಗತಿಪರ ರೈತ ಮಹಿಳೆ ಇಂದ್ರಮ್ಮ ಅವರಿಗೆ 2018-19ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ, ಸ್ವರೂಪರಾಣಿ ಅವರಿಗೆ 2019-20ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ನವೀನ್ ಕುಮಾರ್ ಅವರಿಗೆ 2019-20ನೇ ಸಾಲಿನ ಕೃಷಿ ಸಂಸ್ಕರಣಾ ಭಾಗದಿಂದ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಬಂದಿದೆ ಎಂದು ಕೆ.ಆರ್.ನಗರ ತಾಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ.
ಇಂದ್ರಮ್ಮ ಹನುಮನಹಳ್ಳಿಯಲ್ಲಿ 3.2 ಎಕರೆ ಜಮೀನಿನಲ್ಲಿ 10 ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿ ಸಮಗ್ರ ಕೃಷಿ ಪದ್ಧತಿ, ಎರೆಹುಳು ಸಾಕಾಣಿಕೆ, ಎರೆಗೊಬ್ಬರ ತಯಾರಿಕೆಯಲ್ಲಿ ನಿರಂತರವಾಗಿ ತೊಡಗಿರುವ ಇವರ ಸಾಧನೆಗೆ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2018-19ನೇ ಸಾಲಿನ ಕೃಷಿ ಭಾಗದಲ್ಲಿ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಹಾಗೂ 50 ಸಾವಿರ ರೂ. ನಗದು ಲಭಿಸಿದೆ.
ಸ್ವರೂಪರಾಣಿ ಅವರು ಹೊಸ ಅಗ್ರಹಾರ ಹೋಬಳಿಯ ಹಂಪಪುರ ಗ್ರಾಮದಲ್ಲಿ ದೇಸಿ ಗೋಶಾಲೆ ನಡೆಸುತ್ತಿದ್ದಾರೆ. 8 ಭಿನ್ನ ತಳಿಯ 43 ಗೋವುಗಳನ್ನು ಹೊಂದಿದ್ದಾರೆ. ಇವರಿಗೆ ಪಶುಸಂಗೋಪನಾ ಕ್ಷೇತ್ರದ ಸಾಧನೆಗಾಗಿ ಆತ್ಮ ಯೋಜನೆಯಡಿ 2019-20ನೇ ಸಾಲಿನ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ 25 ಸಾವಿರ ರೂ. ನಗದು ಲಭಿಸಿದೆ. ನವೀನ್ ಕುಮಾರ್ ಕೆ.ಆರ್.ನಗರದವರು.
ಐಟಿ ಕಂಪನಿಯ ಉದ್ಯೋಗ ತ್ಯಜಿಸಿ ದೇಸೀಯ ಉತ್ಪನ್ನಗಳಿಗೆ ಮರು ಜೀವ ಕೊಡುವ ನಿಟ್ಟಿನಲ್ಲಿ ಬ್ಯಾಡರಹಳ್ಳಿಯಲ್ಲಿ ದೇಸೀಯ ಮಾದರಿಯ ಎತ್ತಿನ ಗಾಣದಲ್ಲಿ ಅಡುಗೆ ಎಣ್ಣೆ ತಯಾರಿಸುವಲ್ಲಿ ಕ್ರಾಂತಿ ಉಂಟು ಮಾಡಿದ್ದಾರೆ. ಇವರಿಗೆ ಆತ್ಮ ಯೋಜನೆಯಡಿ 2019-20ನೇ ಸಾಲಿನ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ 25 ಸಾವಿರ ರೂ. ನಗದು ಲಭಿಸಿದೆ.