Advertisement

ಮಾಸಿಕ ವೇತನದಂತೆ ಕೃಷಿ ಆದಾಯ ಸಾಧ್ಯ

06:04 PM Dec 21, 2021 | Team Udayavani |

ಕಲಬುರಗಿ: ಭೂಮಿಯನ್ನು ನಂಬಿ ಕೃಷಿ ಮಾಡಿದರೆ ಮಾಸಿಕ ವೇತನ ಬರುವಂತೆ ರೈತರು ಕೂಡ ಆದಾಯ ಗಳಿಸಲು ಸಾಧ್ಯವಿದ್ದು, ಅದಕ್ಕಾಗಿ ರೈತರು ಕಾಲಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಯುವುದನ್ನು ರೂಢಿಸಿಕೊಳ್ಳಬೇಕೆಂದು ಕೃಷಿ ಸಾಧಕಿ ಕವಿತಾ ಮಿಶ್ರಾ ಸಲಹೆ ನೀಡಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ವಿದ್ಯಾ ಸಂಸ್ಥೆ ಮತ್ತು ಭಾರತ ವಿಕಾಸ ಸಂಗಮ ಸಹಯೋಗದಲ್ಲಿ ನಡೆದ “ಸೃಜನ ಶಕ್ತಿ ಸಂಗಮ-8’ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಕ ಕೋಟಿಗಳ ಲೆಕ್ಕದಲ್ಲಿ ಮಾತನಾಡಲು ಸಾಧ್ಯವಿದೆ. ವರ್ಷಕ್ಕೆ ಒಂದೇ ಬೆಳೆ ಬೆಳೆಯದೇ ವೈವಿಧ್ಯಮಯ ಕೃಷಿ ಅಳವಡಿಸಿಕೊಳ್ಳಬೇಕು. ಆಯಾ ಕಾಲಗಳಿಗೆ ಅನುಗುಣವಾಗಿ ಬೆಳೆಯುವುದರಿಂದ ನಿತಂತರ ಆದಾಯ ಪಡೆಯಲು ಸಾಧ್ಯ. ಕೃಷಿ ಲಾಭದಾಯಕವಲ್ಲ ಎಂಬುವುದು ಸರಿಯಲ್ಲ. ನಮ್ಮ ಹೊಲದ ಕೊಳವೆ ಬಾವಿಯಲ್ಲಿ 1.5 ಇಂಚು ನೀರು ದೊರಕಿದರೂ, ಅದರ ಸದ್ಬಳಕೆ ಮಾಡಿಕೊಂಡು ಲಾಭ ಪಡೆದುಕೊಂಡಿದ್ದೇನೆ. ಸಾವಯವ ಕೃಷಿ, ದೇಸಿ ಗೋಸಾಕಣೆ ಮತ್ತು ಕುರಿ ಸಾಕಣೆ ಸೇರಿ ಸಮಗ್ರ ಕೃಷಿ ಮಾಡಿದರೆ ರೈತ ಜೀವನದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದರು.

ಕೃಷಿ ವಿಜ್ಞಾನಿ ಎಸ್‌.ಎ.ಪಾಟೀಲ ಮಾತನಾಡಿ, ಕೃಷಿಯೇ ಎಲ್ಲ ಸಂಸ್ಕೃತಿಗಳ ತಾಯಿ. ವೈದ್ಯ, ಇಂಜಿನಿಯರ್‌, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಿಗಿಂತ ಕೃಷಿ ಕ್ಷೇತ್ರ ಮೇಲಾಗಿದೆ. ಕೃಷಿಯಲ್ಲೂ ಹತ್ತು-ಹಲವು ಅವಕಾಶಗಳಿವೆ. ಅವುಗಳನ್ನು ಅರಿತು ಆ ನಿಟ್ಟಿನಲ್ಲಿ ಸಾಗಬೇಕೆಂದು ಕರೆ ನೀಡಿದರು.

ಭಾರತ ವಿಕಾಸ ಸಂಗಮ ಸಂಯೋಜಕಿ ಅಸ್ತಾ ಭಾರದ್ವಾಜ್‌ ಮಾತನಾಡಿ, ಯುವಕರು ಸ್ವಯಂ ಮಾದರಿಗಳನ್ನುಸೃಷ್ಟಿಸಬೇಕು. ಯುವಕರು ಬಳಕೆಗೆ ಯೋಗ್ಯವಲ್ಲ (ಯೂಸ್‌ಲೇಸ್‌) ಎನ್ನಲಾಗುತ್ತದೆ. ಆದರೆ ಅವರನ್ನು ಬಳಕೆ ಮಾಡುವುದೇ ಕಡಿಮೆ (ವಿ ಯೂಸ್ಡ್ ಲೇಸ್‌) ಮಾಡಲಾಗುತ್ತಿದೆ. ಆದ್ದರಿಂದ ಅವರಿಗೆ ಹೆಚ್ಚಿನ ಅವಕಾಶ ನೀಡಿ ಹೊಸ ಮಾದರಿಗಳ ಸೃಷ್ಟಿಗೆ ಪ್ರೇರಣೆ ನೀಡಬೇಕಿದೆ ಎಂದರು.

Advertisement

ವ್ಯಕ್ತಿಯ ಸಂಸ್ಕಾರ ಕುಟುಂಬದಿಂದ ಬಂದರೂ ಸ್ವಂತ ವ್ಯಕ್ತಿತ್ವವೇ ಬೇರೆಯಾಗುತ್ತದೆ. ಆದ್ದರಿಂದ ನಾವು ಬದಲಾಗಬೇಕು. ಯಾರನ್ನೂ ಅಂಧಾನುಕರಣೆ ಮಾಡದೆ ಧನಾತ್ಮಕ ಅಲೋಚನೆಯೊಂದಿಗೆ ಜೀವನ ಸಾಗಿಸಬೇಕು. ಮತ್ತೂಬ್ಬರ ಅಭಿಪ್ರಾಯದ ಬಗ್ಗೆ ಯೋಚಿಸುವುದೇ ಅತಿದೊಡ್ಡ ರೋಗ. ಆದ್ದರಿಂದ ವಿಭಿನ್ನ ಆಲೋಚನೆಯಿಂದ ಮಾತ್ರ ಯಶಸ್ವಿ ಸಾಧ್ಯ. ಧನಾತ್ಮಕ ಚಿಂತನೆಗಳು ಜೀವನಕ್ಕೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಭಾರತ ವಿಕಾಸ ಸಂಗಮ ಸಂಸ್ಥಾಪಕರಾದ ಖ್ಯಾತ ಚಿಂತಕ ಕೆ.ಎನ್‌. ಗೋವಿಂದಾಚಾರ್ಯ ಮಾತನಾಡಿದರು. ಗುವಿವಿ ಕುಲಪತಿ ಪ್ರೊ| ದಯಾನಂದ ಅಗಸರ, ಪ್ರಮುಖರಾದ ಮಾಧವರೆಡ್ಡಿ ಹೈದರಾಬಾದ್‌, ವೇಣುಗೋಪಾಲ ರೆಡ್ಡಿ, ಅಶೋಕ ಟಂಗಸಾಲೆ, ಕೆ.ಜಿ.ಮುರಳಿ, ಚಂದ್ರಶೇಖರ ಧವಳಗಿ, ಸುರೇಶ ಅಗ್ನಿಹೋತ್ರಿ ಇದ್ದರು.

ಅಭಿವೃದ್ದಿ ಹೆಸರಲ್ಲಿ ಪ್ರಕೃತಿಗೆ ಹಾನಿಯನ್ನುಂಟು ಮಾಡುವ ಕ್ರಮಗಳ ತಡೆಗೆ ಗಂಭೀರವಾಗಿ ಆಲೋಚನೆ ಮಾಡುವುದು ಅಗತ್ಯವಿದೆ. ಇದಕ್ಕಾಗಿ ನಮಗೆ ತಕ್ಷಣಕ್ಕೆ “ಯೂ-ಟರ್ನ್’ ತೆಗೆದುಕೊಳ್ಳಲು ಆಗದಿದ್ದರೂ, “ಲಾಂಗ್‌-ಟರ್ನ್’ ತೆಗೆದುಕೊಳ್ಳುವ ಅನಿವಾರ್ಯತೆ ಇದೆ.
ಕೆ.ಎನ್‌.ಗೋವಿಂದಾಚಾರ್ಯ, ಸಂಸ್ಥಾಪಕ, ಭಾರತ ವಿಕಾಸ ಸಂಗಮ

ಜೀವನದಲ್ಲಿ ಏನನ್ನು ಮಾಡಬೇಕು ಎನ್ನುವುದಕ್ಕಿಂತ ಏನನ್ನು ಮಾಡಬಾರದು ಎಂಬುದು ಅರಿಯಬೇಕು. ಮಹಾಭಾರತ ಏನು ಮಾಡಬಾರದು, ರಾಮಾಯಣ ಏನು ಮಾಡಬೇಕು ಎಂಬ ಸಂದೇಶ ನೀಡುತ್ತದೆ. ಆದ್ದರಿಂದ ಎಲ್ಲವನ್ನು ಓದಿ, ತಿಳಿದು ನಮ್ಮ ಸ್ವತಃ ಆಲೋಚನೆಗೆ ಹೊಂದಿಸಿಕೊಳ್ಳಬೇಕು.
ಅಸ್ತಾ ಭಾರದ್ವಾಜ್‌, ಸಂಯೋಜಕಿ ಭಾರತ ವಿಕಾಸ ಸಂಗಮ

Advertisement

Udayavani is now on Telegram. Click here to join our channel and stay updated with the latest news.

Next