Advertisement
ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳವನ್ನು “ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದು, ಶನಿವಾರವೇ ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್-19 ಹೊಡೆತದಿಂದ ಮುಂದೂಡುತ್ತ ರದ್ದಾಗಿದ್ದ ಕೃಷಿ ಮೇಳವು ಈ ಸಲ ರಂಗೇರಿದ್ದು, ಮೇಳಕ್ಕಾಗಿ ಈಗಾಗಲೇ ತಯಾರಿ ಅಂತಿಮ ರೂಪ ಪಡೆದಿದೆ. ವಿವಿ ಆವರಣದಲ್ಲಿ ಮಳಿಗೆಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಮುಖ್ಯ ವೇದಿಕೆ ಸಿದ್ಧಪಡಿಸುವ ಕಾರ್ಯ ಸಾಗಿದೆ.
Related Articles
Advertisement
ಬೀಜದ ಜತೆಗೆ ಜೈವಿಕ ಗೊಬ್ಬರ:ಮೇಳದಲ್ಲಿ 333 ಕ್ವಿಂಟಲ್ ಹಿಂಗಾರಿ ಜೋಳ, 344 ಕ್ವಿಂಟಲ್ ಗೋಧಿ, 1445 ಕ್ವಿಂಟಲ್ ಕಡಲೆ, 39 ಕ್ವಿಂಟಲ್ ಕುಸುಬೆ ಮತ್ತು 1 ಕ್ವಿಂಟಲ್ ಸಾಸಿವೆ ಒಟ್ಟು 2161 ಕ್ವಿಂಟಲ್ ಬೀಜ ಪ್ರಸಕ್ತ ಕೃಷಿ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದಲ್ಲದೇ ವಿಶ್ವವಿದ್ಯಾಲಯಕ್ಕೆ ಪ್ರಪ್ರಥಮ ಬಾರಿಗೆ ಜೈವಿಕ ಕೃಷಿ ಪರಿಕರಗಳ ಉತ್ಪನ್ನ ಹಾಗೂ ಮಾರಾಟಕ್ಕೆ ಪರವಾನಗಿ ಪತ್ರ ದೊರೆತಿದೆ. ಈ ಹಿನ್ನೆಲೆಯಲ್ಲಿ 847 ಕೆಜಿ ವಿವಿಧ ಪ್ರಕಾರದ ಜೈವಿಕ ಗೊಬ್ಬರಗಳ ಪುಡಿ, 410 ಲೀಟರ್ ವಿವಿಧ ಪ್ರಕಾರದ ಜೈವಿಕ ಗೊಬ್ಬರದ ದ್ರವಗಳು ಪ್ರಸಕ್ತ ಕೃಷಿ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ.
ಕಾಡುತ್ತಿದೆ ಮಳೆ ಆತಂಕ
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಬ್ಬರ, ನೆರೆ ಹಾವಳಿ ಮುಂದುವರಿದಿದ್ದು, ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ವರುಣಾರ್ಭಟ ಸಾಗಿದೆ. ಇದರ ಮಧ್ಯೆಯೇ ಕೃಷಿ ಮೇಳಕ್ಕೆ ವೇದಿಕೆ ಸಜ್ಜಾಗಿದ್ದು, ವರುಣ ದೇವನ ಕೃಪೆ ಕಾದು ನೋಡಬೇಕಿದೆ. ಉತ್ತರ ಕರ್ನಾಟಕ ಭಾಗ ಸೇರಿದಂತೆ ಧಾರವಾಡ ಜಿಲ್ಲೆಯಲ್ಲೂ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಬೆಳೆ ನಷ್ಟದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇದಲ್ಲದೇ ಮೇಳದ ಸಮಯದಲ್ಲಿಯೇ ಮಳೆಯ ಮುನ್ಸೂಚನೆ ಇರುವ ಕಾರಣ ಮಳೆಯ ಆತಂಕವಿದ್ದು, ರೈತರ ಸಂಖ್ಯೆಯಲ್ಲಿ ಇಳಿಮುಖ ಆಗುವ ಸಾಧ್ಯತೆ ಇದೆ.
ಈ ಬಾರಿ ದನಕರುಗಳಿಗೆ ಅವಕಾಶ ಇಲ್ಲ
ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ 7 ಜಿಲ್ಲೆಗಳಿಂದ 2021-22ನೇ ಸಾಲಿಗೆ ಆಯ್ಕೆಯಾದ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿ ಮೇಳದಲ್ಲಿ ನೀಡುತ್ತಿದ್ದ ತಾಲೂಕುವಾರು ಯುವ ಕೃಷಿಕ ಹಾಗೂ ಮಹಿಳೆ ಪ್ರಶಸ್ತಿಯನ್ನು ಈ ಸಲ ಕೈಬಿಡಲಾಗಿದೆ. ಇನ್ನು ಇದೇ ಮೊದಲ ಬಾರಿಗೆ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಜಾನುವಾರು ಪ್ರದರ್ಶನದಲ್ಲಿ ದನಕರುಗಳಿಗೆ ಅವಕಾಶ ನೀಡಿಲ್ಲ. ಶ್ವಾನ ಸೇರಿದಂತೆ ಬರೀ ಸಾಕು ಪ್ರಾಣಿಗಳಿಗಷ್ಟೇ ಅವಕಾಶ ನೀಡಲಾಗಿದೆ.