ಕಲಘಟಗಿ: ಇದೀಗ ಆರಂಭಗೊಂಡ ಪುನರ್ವಸು ಮಳೆಯು ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈಗಾಗಲೇ ಬಿತ್ತಿದ ಗೋವಿನಜೋಳ, ಸೋಯಾಬೀನ್, ಭತ್ತ ಮುಂತಾದ ಬೀಜಗಳು ಸಕಾಲಕ್ಕೆ ಸುರಿದ ಸಮರ್ಪಕ ಮಳೆಯಿಂದಾಗಿ ಬೆಳೆದು ನಿಂತಿವೆ. ರೈತರು ಮೇಲುಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ಔಷಧಿ ಸಿಂಪಡಣೆ ಪ್ರಾರಂಭಿಸಿದ್ದಾರೆ.
ಭತ್ತದ ಕಣಜವೆಂದೇ ಹೆಸರುವಾಸಿಯಾದ ತಾಲೂಕಿನಾದ್ಯಂತ ವರ್ಷಗಳು ಗತಿಸಿದಂತೆ ಭತ್ತದ ಬೀಜಗಳ ಬಿತ್ತನೆ ಪ್ರಮಾಣ ಕ್ಷೇತ್ರ ಗಣನೀಯವಾಗಿ ಕಡಿಮೆಯಾಗುತ್ತಿದೆ. ರೈತರು ವಾಣಿಜ್ಯ ಬೆಳೆಗೆ ಮಾರುಹೋಗುತ್ತಿದ್ದಾರೆ. ತಾಲೂಕಿನಾದ್ಯಂತ 18,345 ಹೆಕ್ಟೇರ್ ಜಮೀನಿನಲ್ಲಿ ಗೋವಿನಜೋಳ, 13,207 ಹೆಕ್ಟೇರ್ ಜಮೀನಿನಲ್ಲಿ ಸೋಯಾಬೀನ್, 5,311 ಹೆಕ್ಟೇರ್ ಜಮೀನಿನಲ್ಲಿ ಭತ್ತದ ಬಿತ್ತನೆಯಾಗಿದೆ. 4200 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ನಾಟಿಯಾಗಿದೆ.
ಈ ಬೆಳೆಗಳಿಗೆ ತೇವಾಂಶಕ್ಕೆ ಅನುಗುಣವಾಗಿ ಪ್ರತಿಶತ ನೀರಿನ ಪ್ರಮಾಣದಷ್ಟು ಮಳೆಯಾಗುತ್ತಿದ್ದು, ರೈತರಲ್ಲಿ ಉತ್ಸಾಹ ಮೂಡಿದೆ. ಕಳೆದ ಎರಡು ವಾರಗಳಿಂದ ಮಳೆರಾಯ ಬಾರದಿರುವುದನ್ನೇ ಉತ್ತಮ ಸಮಯವನ್ನಾಗಿಸಿಕೊಂಡ ರೈತರು ತಮ್ಮ ಜಮೀನಿನಲ್ಲಿನ ಬೆಳೆಗಳಿಗೆ ಮೇಲುಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಶೇ.80 ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈಗಲೂ ಅಂದಿನ ಅತಿವೃಷ್ಟಿ ದೃಶ್ಯ ಕಣ್ಮುಂದೆ ಕಟ್ಟಿದಂತಿದೆ. ಹಿಂದಿನ ವ್ಯವಸಾಯಕ್ಕಾಗಿ ಮಾಡಿದ ಸಾಲವೇ ಭಾರವಾಗಿದ್ದು, ಸಮಯಕ್ಕೆ ಸರಿಯಾಗಿ ಸಮರ್ಪಕವಾದ ಮಳೆ ಮುಂದೆಯೂ ಆದಲ್ಲಿ ಉತ್ತಮ ಫಸಲು ಬಂದು ಬಾಳು ಹಸನಾಗಿಸಿಕೊಳ್ಳುವ ನಿರೀಕ್ಷೆಯಲ್ಲಿ ರೈತಕುಲವಿದೆ. ವಾಡಿಕೆ ಮಳೆ 336 ಮಿಲಿಮೀಟರ್ ಆಗಬೇಕಿದ್ದು, ವಾಸ್ತವವಾಗಿ 356 ಮಿಲಿಮೀಟರ್ ಮಳೆ ಸುರಿದಿರುವುದರಿಂದ ಪ್ರತಿಶತ ನೂರರಷ್ಟು ಮಳೆಯಾಗಿ ರೈತವರ್ಗ ಹರ್ಷಚಿತ್ತವಾಗಿದೆ. ಈಗಾಗಲೇ ತಾಲೂಕಿನಾದ್ಯಂತ ಅಧಿಕೃತ ಕೃಷಿ ಪರಿಕರ ಮಾರಾಟಗಾರರು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರೆಲ್ಲರಿಗೆ ಅವಶ್ಯಕ ರಸಗೊಬ್ಬರದ ದಾಸ್ತಾನನ್ನು ಮಾಡಿಸುವಲ್ಲಿ ಅಧಿ ಕಾರಿ ವರ್ಗ ಸಫಲವಾಗಿದೆ.
ಮೇ ತಿಂಗಳಲ್ಲಿ ಸರಕಾರ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ತಾಲೂಕಿನಾದ್ಯಂತ ವಿತರಿಸಿದ ಸೋಯಾಬೀನ್ ಬೀಜವನ್ನು ರೈತರು ಮೇ 25ರಿಂದ 30ರ ಅವಧಿಯಲ್ಲಿ ಬಿತ್ತನೆ ಮಾಡಿದ್ದು, ಹೆಚ್ಚಿನದಾಗಿ ಮೊಳಕೆ ಒಡೆಯದೇ ಹುಸಿ ಹೋಗಿದೆ. ಕೆಲವೆಡೆ ಮಾತ್ರ ಅಲ್ಪ ಸ್ವಲ್ಪ ಮೊಳಕೆ ಒಡೆದಿದೆ. ಅದಕ್ಕೆ ಮಾಡಿದ ಖರ್ಚು ವೆಚ್ಚದ ಸಾಲವು ರೈತರಿಗಾಗಿದ್ದು ಸದ್ಯ ಸಂಕಷ್ಟುವನ್ನು ಎದುರಿಸುತ್ತಿದ್ದಾರೆ. ಶಾಸಕರು, ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಅನುಕೂಲಕರ ಆಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಿದ್ದಾರೆ.
ಗೋವಿನಜೋಳ ಬೆಳೆದ ರೈತರು ಅಂತರ ಬೇಸಾಯ (ಎಡೆಕುಂಟಿ) ಮಾಡದಿರುವುದು ಗಮನಕ್ಕೆ ಬಂದಿದೆ. ಪ್ರತಿಯೊಬ್ಬ ರೈತರು ಎಡೆಕುಂಟೆ ಮಾಡಿ ಗೋವಿನಜೋಳಕ್ಕೆ ಮಣ್ಣನ್ನು ಏರಿಸುವುದರಿಂದ ಬೆಳೆಗೆ ತೇವಾಂಶವು ಲಭಿಸುವುದರ ಜೊತೆಗೆ ಗಿಡಗಳಿಗೆ ಗಾಳಿಯಿಂದ ಭದ್ರತೆ ದೊರಕಲಿದೆ. 15ರಿಂದ 30 ದಿನಗಳ ಗೋವಿನಜೋಳದ ಬೆಳೆಗೆ ಪಾಲ್‌ಸೈನಿಕ ಹುಳದ ಬಾಧೆ ಕಂಡುಬಂದಲ್ಲಿ ಇಮಾಮೆಕ್ಟಿನ್ ಬೆಂಜೊಯೇಟ್ ಕೀಟನಾಶಕವನ್ನು ತಕ್ಷಣ ಸಿಂಪಡಿಸಿ ಹತೋಟಿ ಕ್ರಮಕ್ಕೆ ಮುಂದಾಗಬೇಕು. –
ಎನ್.ಎಫ್. ಕಟ್ಟೆಗೌಡರ, ಸಹಾಯಕ ಕೃಷಿ ನಿರ್ದೇಶಕ
ಸರಕಾರ ನೀಡಿರುವ ಸೋಯಾಬೀಜವನ್ನು ಮೇ ತಿಂಗಳಲ್ಲಿ ಬಿತ್ತನೆ ಮಾಡಿದ್ದು ಮೊಳಕೆ ಒಡೆಯದೇ ಅದರ ಖರ್ಚು ವೆಚ್ಚದ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಇದೀಗ ಸ್ಥಳೀಯವಾಗಿ ದೊರೆತ ಬೀಜಗಳನ್ನು ಮರು ಬಿತ್ತನೆ ಮಾಡಿ ಉಳಿದ ಜಮೀನಿನಲ್ಲಿ ಗೋವಿನ ಜೋಳ ಬಿತ್ತಲಾಗಿದೆ. ದನಕರುಗಳ ಮೇವು ಹಾಗೂ ಗೋವಿನಜೋಳದ ಫಸಲನ್ನು ಪಡೆಯುವ ವಿಶ್ವಾಸದಲ್ಲಿದ್ದೇವೆ. –
ಪ್ರಭುಲಿಂಗ ಕಂಪ್ಲಿ, ಉಗ್ಗಿನಕೇರಿ ರೈತ
–ಪ್ರಭಾಕರ ನಾಯಕ