Advertisement

ಏಲಕ್ಕಿ ಏನ್‌ ಲಕ್ಕಿ : ಅಡಿಕೆ ಮಧ್ಯೆ ಬಂಪರ್‌ ಬೆಳೆ

01:46 AM May 30, 2017 | Karthik A |

ಮಲೆನಾಡಲ್ಲಿ ಅಡಿಕೆ, ತೆಂಗು ಬೆಳೆಗಳಿವೆ. ಉಪ ಆದಾಯಕ್ಕೆ ಮಧ್ಯೆ ಮಧ್ಯೆ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ದೇವನಹಳ್ಳಿಯ ಕೃಷಿಕ ಕಾರ್ತೀಕ ಕೂಡ ಹೀಗೇ ಮಾಡಿದ್ದಾರೆ. ಅಡಕೆ ತೋಟದಲ್ಲಿ ಏಲಕ್ಕಿ ನೆಟ್ಟು ಕೈ ತುಂಬ ಹಣ ಎಣಿಸುತ್ತಿದ್ದಾರೆ. ಹೆದ್ದಾರಿ ಪಕ್ಕದಲ್ಲಿಯೇ ಇವರ ಹೊಲವಿದೆ. ಅಡಿಕೆ ತೋಟ ನೋಡುಗರನ್ನು ಆಕರ್ಷಿಸುವಷ್ಟು ಹುಲುಸಾಗಿ ಬೆಳೆದಿದೆ. 

Advertisement

ಕೃಷಿ ಹೇಗೆ ?
ಕಾರ್ತೀಕರದ್ದು 2.5 ಎಕರೆ ಜಮೀನು. ಪೂರ್ತಿ ಅಡಿಕೆ ತೋಟವಿದೆ. ಇವರದು ಖುಷ್ಕಿ ಭೂಮಿ. ನೀರಿಗಾಗಿ ಕೊಳೆವೆ ಬಾವಿ ಇದೆ. ಗಿಡದಿಂದ ಗಿಡಕ್ಕೆ 8 ಅಡಿ ಅಂತರ ಬರುವಂತೆ ಒಟ್ಟು 1,300 ಅಡಿಕೆ ಮರ ಬೆಳೆಸಿದ್ದಾರೆ. ಗಿಡಗಳು ಈಗ 8 ವರ್ಷದ ಪ್ರಾಯದವು. ಉತ್ತಮ ಫ‌ಸಲು ನೀಡುತ್ತಿವೆ. ಬರೀ ಅಡಿಕೆ ನಂಬಿದರೆ ಹೇಗೆ ?ಎಂದು ಯೋಚಿಸಿ, ಏಲಕ್ಕಿ ಬೆಳೆಸಿದ್ದಾರೆ.

ಚಿಕ್ಕಮಗಳೂರಿನ ನರ್ಸರಿಯಿಂದ ಒಂದು ಗಿಡಕ್ಕೆ 5 ರೂ.ನಂತೆ ಏಲಕ್ಕಿ ಗಿಡ ಖರೀದಿಸಿ 4 ವರ್ಷಗಳ ಹಿಂದೆ ನೆಟ್ಟಿದ್ದರು. ಇವರು ಖರೀದಿಸಿದ ಏಲಕ್ಕಿ ಗಿಡಗಳು ಸಕಲೇಶಪುರ ಹಾಗೂ ಕೇರಳದ ನೆಲ್ಯಾಡಿ ತಳಿಗಳಾಗಿವೆ. ಗೊಬ್ಬರವನ್ನು ಇವರೇ ತಯಾರಿಸಿಕೊಳ್ಳುತ್ತಾರೆ. ಅದು ಹೀಗೆ ; ಸಗಣಿ ಗೊಬ್ಬರ ಮತ್ತು ಕಾಡಿನ ಗೋಡು ಮಣ್ಣು ಬಳಸಿ ಕೃಷಿ ಮಾಡುತ್ತಿದ್ದಾರೆ. ಅಡಿಕೆ ಮರಗಳ ನಡುವಿನ ಜಾಗದಲ್ಲಿ ಒಂದೂವರೆ ಅಡಿ ಆಳ ಮತ್ತು ಒಂದೂವರೆ ಅಡಿ ಅಗಲದ ಗುಂಡಿ ತೆಗೆದು ಅದರಲ್ಲಿ ಸಗಣಿಗೊಬ್ಬರ ಮತ್ತು ಕಾಡಿನ ತರಗೆಲೆಗಳನ್ನು ತುಂಬಿದರು. ಅರ್ಧ ಅಡಿ ಮಣ್ಣು ಮುಚ್ಚಿ ಗಿಡ ನೆಟ್ಟಿದ್ದರು. ಇದರಿಂದ ಎಲಕ್ಕಿ ಗಿಡಗಳ ಬೇರು ಚೆನ್ನಾಗಿ ಹರಡಿಕೊಳ್ಳುವಂತಾಗಿದೆ.ನಂತರ 2 ತಿಂಗಳಿಗೊಮ್ಮೆ ಸಗಣಿ ಗೊಬ್ಬರದ ಸ್ಲರಿ ಮತ್ತು ಆಗಾಗ ಎರೆಗೊಬ್ಬರ ಕೊಟ್ಟರು. 6 ತಿಂಗಳಿಗೊಮ್ಮೆ ಏಲಕ್ಕಿ ಗಿಡದ ಬುಡಕ್ಕೆ ಮಣ್ಣು ಏರಿಸುತ್ತಾರೆ. ಇದರಿಂದ ಗಿಡದ ಬೆಳವಣಿಗೆ ಉತ್ತಮವಾಗಿದೆಯಂತೆ. ಮಳೆಗಾಲದಲ್ಲಿ ಗಿಡದ ಬೇರುಗಳಿಗೆ ಕೊಳೆ ಬರದಂತೆ ಬೋಡೋ ದ್ರಾವಣ ಸಿಂಪಡಿಸುತ್ತಾರೆ. ಏಲಕ್ಕಿ ಗಿಡಗಳಿಗೆ 2 ವರ್ಷವಾಗುತ್ತಿದ್ದಂತೆ ಹೂ ಬಿಟ್ಟು ಫ‌ಸಲು ಆರಂಭವಾಗಿತ್ತು.  ಕಳೆದ ವರ್ಷ 3 ವರ್ಷ ಪ್ರಾಯ ತುಂಬಿದ್ದ ಈ ಏಲಕ್ಕಿ ಗಿಡಗಳಿಂದ ಉತ್ತಮ ಫ‌ಸಲು ದೊರೆತಿದೆ. 

ಲಾಭ ಎಷ್ಟು?
ಅಡಿಕೆ ಮರಗಳ ನಡುವಿನ ಖಾಲಿ ಸ್ಥಳವನ್ನು ಆಧರಿಸಿ 1,000 ಏಲಕ್ಕಿ ಗಿಡ ನಾಟಿಮಾಡಿದ್ದಾರೆ. ಇದಕ್ಕೆ 40 ಸಾವಿರ ರೂ.ವೆಚ್ಚ ತಗುಲಿದೆ. ಗಿಡ ನೆಟ್ಟ 2ನೇ ವರ್ಷ ಏಲಕ್ಕಿ ಫ‌ಸಲು ಬಂದು, ಮೊದಲ ವರ್ಷ ಪ್ರತಿ ಗಿಡದಿಂದ ಸರಾಸರಿ 50 ಕಿಲೋ.ನಷ್ಟು ಏಲಕ್ಕಿ ಫ‌ಸಲು ದೊರೆತಿತ್ತು. ಇದರಿಂದ 50 ಕಿ.ಗ್ರಾಂ. ಏಲಕ್ಕಿ ಮಾರಾಟವಾಗಿ ಇವರಿಗೆ ಸುಮಾರು 60 ಸಾವಿರ ಆದಾಯ ಬಂದಿತ್ತು.  ಕಳೆದ ವರ್ಷ ಮೇ ಅಂತ್ಯದ ವರೆಗೂ ಕಾರ್ತಿಕ್‌  ಏಲಕ್ಕಿ ಫ‌ಸಲು ಕೊಯ್ಲು ಮಾಡಿದ್ದರು. ಪ್ರತಿ ಗಿಡದಿಂದ ಸರಾಸರಿ 500 ಗ್ರಾಂ.ಫ‌ಸಲಂತೆ ಒಟ್ಟು 5 ಕ್ವಿಂಟಾಲ್‌ ಏಲಕ್ಕಿ ಫ‌ಸಲು ದೊರೆಯಿತು. ಕ್ವಿಂಟಾಲ್‌ ಒಂದಕ್ಕೆ 60 ಸಾವಿರ ಧಾರಣೆ ಇತ್ತು. 5 ಕ್ವಿಂಟಾಲ್‌ ಏಲಕ್ಕಿಯಿಂದ ಸುಮಾರು 3 ಲಕ್ಷ ರೂ ಆದಾಯ ದೊರೆತಿದೆ. ಅಡಿಕೆಯ ಜೊತೆಗೆ ಏಲಕ್ಕಿ ಕೃಷಿ ನಡೆಸುವುದರಿಂದ ಪ್ರತ್ಯೇಕ ಖರ್ಚು ಸಹ ಇಲ್ಲ. 

ಮಾಹಿತಿಗೆ – 9731853108 

Advertisement

– ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next