ವರದಿ : ಹು.ಬಾ. ವಡ್ಡಟ್ಟಿ
ಮುಂಡರಗಿ: ಎಲ್ಲೆಡೆ ಮುಂಗಾರು ಮಳೆ ಅಬ್ಬರ ಶುರುವಾಗಿದ್ದರೂ, ತಾಲೂಕಿನಲ್ಲಿ ಮಳೆ ಮಾತ್ರ ಚುರುಕಾಗಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಬಿತ್ತನೆ ಕಾರ್ಯಕ್ಕೆ ಕೊಂಚ ಹಿನ್ನಡೆಯಾಗಿದೆ.
ಬಿತ್ತನೆಗೆ ಪೂರಕವಾದ ಹದವಾದ ಮಳೆಗಾಗಿ ರೈತರು ಕಾಯುವಂತಾಗಿದೆ. ಈಗಾಗಲೇ 5 ಮಳೆಗಳು ಆಗಿದ್ದು, 6ನೇ ಮಳೆ ಪ್ರಾರಂಭವಾಗಿದೆ. ಮೇ-ಜೂನ್ ತಿಂಗಳಿನಲ್ಲಿ ವಾಡಿಕೆಯಂತೆ ಮಳೆ ಬಿದ್ದಿದೆ. ವಾರದಲ್ಲಿ ಒಂದೆರಡು ದಿನಗಳ ಕಾಲ ಬಿರುಸಿನ ಮಳೆಯಾಗಿದ್ದರಿಂದ ವಾಡಿಕೆ ಪ್ರಮಾಣ ತಲುಪಿದೆ. ಆದರೆ, ಬೆಳೆಗಳ ಬಿತ್ತನೆಗೆ ಪೂರಕವಾದ ಹದವಾದ ಮಳೆ ಸುರಿದಿಲ್ಲ. ಮುಖ್ಯವಾಗಿ ಮುಂಗಾರು ಬೆಳೆಗಳಾದ ಶೇಂಗಾ, ಜೋಳ, ಸಜ್ಜೆ, ಗೋವಿನಜೋಳ, ಸೂರ್ಯಕಾಂತಿ, ದ್ವಿದಳ ಧಾನ್ಯಗಳಾದ ತೊಗರಿ, ಅಲಸಂ ದಿ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ತಾಲೂಕಿನ ಮುಂಗಾರಿನ ಹಂಗಾಮಿನ ಬಿತ್ತನೆ ಶೇ.30 ರಿಂದ 45ರಷ್ಟು ಮಾತ್ರ ಆಗಿದೆ ಎನ್ನುತ್ತಾರೆ ರೈತರು.
ವಿವಿಧೆಡೆ ಭಾಗಶಃ ಬಿತ್ತನೆ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಮತ್ತು ಖುಷ್ಕಿ ಭೂಮಿಯಲ್ಲಿ ಒಟ್ಟು 48,500 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಶೇಂಗಾ 6,000 ಹೆಕ್ಟೇರ್, ಸೂರ್ಯಕಾಂತಿ 6,000 ಹೆಕ್ಟೇರ್, ಹೈಬ್ರಿàಡ್ ಜೋಳ 600 ಹೆಕ್ಟೇರ್, ಗೋವಿನಜೋಳ 17,600 ಹೆಕ್ಟೇರ್, ಸಜ್ಜೆ 500 ಹೆಕ್ಟೇರ್, ತೊಗರಿ 100 ಹೆಕ್ಟೇರ್, ಹೆಸರು 12,000 ಹೆಕ್ಟೇರ್, ಭತ್ತ 2,700 ಹೆಕ್ಟೇರ್, ಕಬ್ಬು 1000 ಹೆಕ್ಟೇರ್, ಬಿಟಿ ಹತ್ತಿ 2,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಕೃಷಿ ಇಲಾಖೆ ಗುರಿ ನಿಗದಿಪಡಿಸಿದೆ. ಅದರಲ್ಲಿ ಈವರೆಗೆ ಕೇವಲ ಸೂರ್ಯಕಾಂತಿ 700 ಹೆಕ್ಟೇರ್, ಹೆಸರು 2,500 ಹೆಕ್ಟೇರ್, ಶೇಂಗಾ 2,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆಯಿಂದಾಗಿ ಈಗಾಗಲೇ ಮೊಳಕೆಯೊಡೆದಿರುವ ಬೆಳೆಗಳಿಗೆ ಕೀಟಬಾಧೆ ಹಾಗೂ ಹಳದಿ ರೋಗ ಕಾಡುತ್ತಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದೆ.
ಬಿತ್ತನೆ ಬೀಜಕ್ಕಿಲ್ಲ ಕೊರತೆ: ಮುಂಡರಗಿ ಮತ್ತು ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ 32 ಕ್ವಿಂಟಲ್ ಹೆಸರು, ಹೈಬ್ರಿಡ್ ಜೋಳ 13 ಕ್ವಿಂಟಲ್, ಗೋವಿನಜೋಳ 241 ಕ್ವಿಂಟಲ್, ಶೇಂಗಾ 3 ಕ್ವಿಂಟಲ್, 41 ಕ್ವಿಂಟಲ್ ತೊಗರಿ ಬೀಜಗಳು ಮಾರಾಟವಾಗಿವೆ. ರೈತರು ಬಿತ್ತನೆ ಬೀಜ ಖರೀದಿಸಿ ಸಂಗ್ರಹಿಸಿಟ್ಟುಕೊಂಡು, ಹದವಾದ ಮಳೆಗಾಗಿ ಕಾಯುತ್ತಿರುವುದು ತಿಳಿದುಬಂದಿದೆ.