Advertisement

ವಾಯುಮಾಲಿನ್ಯ ತಡೆಗೆ ಲಂಡನ್‌ ಕಂಪನಿ ಜೊತೆ ಒಪ್ಪಂದ 

12:37 PM Dec 06, 2017 | Team Udayavani |

ಬೆಂಗಳೂರು: ವಾಯುಮಾಲಿನ್ಯ ಪರಿಣಾಮ ತಡೆಗಟ್ಟುವ ಉದ್ದೇಶದಿಂದ ಲಂಡನ್‌ ಮೂಲದ “ಸಿ40 ಸಿಟೀಸ್‌ ಕ್ಲೈಮೆಟ್‌ ಲೀಡರ್‌ಶಿಪ್‌ ಗ್ರೂಪ್‌’ (ಸಿ40) ಜತೆ ಬಿಬಿಎಂಪಿ ಮಂಗಳವಾರ ಒಪ್ಪಂದ ಮಾಡಿಕೊಂಡಿತು. 

Advertisement

ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಮೇಯರ್‌ ಆರ್‌. ಸಂಪತ್‌ರಾಜ್‌, ಲಂಡನ್‌ ಮೇಯರ್‌ ಸಾದಿಕ್‌ ಖಾನ್‌, ಪ್ಯಾರಿಸ್‌ ಮೇಯರ್‌ ಆನ್ನೆ ಹಿಡಾಲ್ಗೊ, ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ನಗರಗಳ ವಾಯುಮಾಲಿನ್ಯ ತಗ್ಗಿಸುವ ಸಂಬಂಧದ ಒಂದು ವರ್ಷದ ಕಾರ್ಯಕ್ರಮಕ್ಕೆ ಸಹಿ ಹಾಕಿದರು. 

ಇದರಡಿ ಮುಂದಿನ ಒಂದು ವರ್ಷದಲ್ಲಿ ಸುಮಾರು 64 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಈ ಹಣದಲ್ಲಿ ಹೆಚ್ಚು ಮಾಲಿನ್ಯ ಇರುವ ನಗರದ ವಿವಿಧ ಪ್ರದೇಶಗಳಲ್ಲಿ ಒಂದು ಸಾವಿರ ವಾಯುಗುಣಮಟ್ಟ ಮೇಲ್ವಿಚಾರಣಾ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಈ ಮಾಪಕಗಳ ಅಧ್ಯಯನಕ್ಕಾಗಿ ಲಂಡನ್‌ನಿಂದ ತಜ್ಞರ ತಂಡ ಆಗಮಿಸಲಿದ್ದಾರೆ. 

ಇದರಲ್ಲಿ ನಗರದ ಮಾಲಿನ್ಯಕ್ಕೆ ಕಾರಣಗಳು, ಮಾಲಿನ್ಯದ ತೀವ್ರತೆ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ತಜ್ಞರ ತಂಡ ಒಂದು ವರ್ಷ ಪರಿಶೀಲನೆ ನಡೆಸಲಿದೆ. ನಂತರ ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸಲಾಗುತ್ತದೆ.

ಬೆಂಗಳೂರು, ಚೆನ್ನೈ, ದೆಹಲಿ, ಜೈಪುರ, ಕೊಲ್ಕತ್ತ, ಮುಂಬೈ ಸೇರಿದಂತೆ ಸಿ40 ವಾಯುಗುಣಮಟ್ಟ ಜಾಲದಡಿ ಜಗತ್ತಿನಾದ್ಯಂತ 90ಕ್ಕೂ ಹೆಚ್ಚಿನ ಮಹಾನಗರಗಳನ್ನು ಆಯ್ಕೆ ಮಾಡಲಾಗಿದೆ. ಇದರ ನಾಯಕತ್ವವನ್ನು ಲಂಡನ್‌ ಜತೆಗೆ ಬೆಂಗಳೂರು ನಗರ ವಹಿಸಿಕೊಂಡಿದೆ.  

Advertisement

ಸುಸ್ಥಿರ ಅಭಿವೃದ್ಧಿ ಪಾಠ: ಈ ವೇಳೆ ಮೇಯರ್‌ ಸಂಪತ್‌ ರಾಜ್‌ ಮಾತನಾಡಿ, ವಿಶ್ವದ ಸುಮಾರು 90ಕ್ಕೂ ಹೆಚ್ಚು ನಗರಗಳು ಒಂದೇ ವೇದಿಕೆಯಲ್ಲಿ ಬರುವುದರಿಂದ ಸುಸ್ಥಿರ ನಗರಾಭಿವೃದ್ಧಿ, ಮಾಲಿನ್ಯ ನಿಯಂತ್ರಣ ಸೇರಿದಂತೆ ಹಲವಾರು ಸಂಗತಿಗಳನ್ನು ತಿಳಿಯಲು ಅನುಕೂಲ ಆಗಲಿದೆ ಎಂದು ಹೇಳಿದರು. 

1985ರಲ್ಲಿ 35 ಲಕ್ಷ ಇದ್ದ ನಗರದ ಜನಸಂಖ್ಯೆ ಈಗ ಒಂದು ಕೋಟಿ ದಾಡುತ್ತಿದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರವು ಆರ್ಥಿಕ ವೃದ್ಧಿ ದರದಲ್ಲಿ ಪ್ರಮುಖ ಪಾತ್ರ ವಹಿಸುವುದರ ಜತೆಗೆ ಲಕ್ಷಾಂತರ ಉದ್ಯೋಗ ಸೃಷ್ಟಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ.

ಆದರೆ, ಇಲ್ಲಿ ಇತ್ತೀಚಿನ ದಿನಗಳಲ್ಲಿ ಅತಿಯಾದ ವಾಹನದಟ್ಟಣೆ, ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಹಲವು ಕಾರಣಗಳಿಂದ ವಾಯುಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಿದ್ದು ಮಾಲಿನ್ಯ ತಗ್ಗಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next