ಮಂಗಳೂರು: ಇಂಡಿಯನ್ ನ್ಯಾಶನಲ್ ಶಿಪ್ಪಿಂಗ್ ಅಸೋಸಿಯೇಶನ್ (ಐಎನ್‌ಎಸ್‌ಎ) ಮತ್ತು ಸಮುದ್ರಯಾನಗಾರರ ಸಂಸ್ಥೆಗಳ ನ್ಯಾಶನಲ್ ಯೂನಿಯನ್ ಆಫ್ ಸೀಫೇರರ್ಸ್ ಆಫ್ ಇಂಡಿಯಾ (ಎನ್‌ಯುಎಸ್‌ಐ) ನಡುವಿನ ಒಪ್ಪಂದದ ಪ್ರಕಾರ ಈ ವರ್ಷ ಭಾರತೀಯ ನಾವಿಕರಿಗೆ ವೇತನ ಪರಿಷ್ಕರಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
2024ರ ಜ. 1ರಿಂದ ಪರಿಷ್ಕರಣೆ ಜಾರಿಯಾಗಲಿದೆ. ಭಾರತೀಯ ಹಡಗುಗಳಲ್ಲಿನ ಸಿಬಂದಿಗೆ ವೇತನ ಮತ್ತು ಇತರ ಸೌಲಭ್ಯಗಳಲ್ಲಿ ಹೆಚ್ಚಳ ಲಭ್ಯವಿರುವ ಮಾಹಿತಿಯಂತೆ ವಿದೇಶಕ್ಕೆ ಹೋಗುವ ನೌಕೆಗಳಲ್ಲಿ ಕೆಲಸ ಮಾಡುವವರ ಮೂಲ ವೇತನ ಶೇ. 42ರ ವರೆಗೆ, ಹೋಂ ಟ್ರೇಡ್ ಹಡಗುಗಳಲ್ಲಿ ಕೆಲಸ ಮಾಡುವವರಿಗೆ ಶೇ. 25ರಷ್ಟು ಹೆಚ್ಚಾಗಲಿದೆ.
ಕೆಲಸದ ವೇಳೆ ಜೀವ ಕಳೆದು ಕೊಳ್ಳುವ ಉದ್ಯೋಗಿಗಳ ಕುಟುಂಬಕ್ಕೆ ನೀಡುತ್ತಿದ್ದ ನಷ್ಟ ಪರಿಹಾರ 22 ಲಕ್ಷದಿಂದ 40 ಲಕ್ಷ ರೂ. ವರೆಗೆ ಹೆಚ್ಚಿಸಲಾಗಿದೆ. ಉದ್ಯೋಗದ ಸಂದರ್ಭಲ್ಲಿ ಶೇ. 100 ಅಂಗವೈಕಲ್ಯಕ್ಕೆ ಒಳಗಾದವರಿಗೆ ನೀಡುವ ನೆರವು 25 ಲಕ್ಷದಿಂದ 35 ಲಕ್ಷ ರೂ. ವರೆಗೆ ಹೆಚ್ಚಿಸಲಾಗಿದೆ. 55 ವರ್ಷದಲ್ಲಿ ಕೆಲಸದಿಂದ ನಿವೃತ್ತರಾದರೆ 6 ಲಕ್ಷ ರೂ., 58ರಲ್ಲಿ 4.5 ಲಕ್ಷ, 58ರ ಮೇಲೆ ನಿವೃತ್ತರಾದರೆ 4 ಲಕ್ಷ ರೂ. ನೀಡಲಾಗುತ್ತದೆ.
ರೇಟಿಂಗ್, ಪೆಟ್ಟಿ ಆಫೀಸರ್, ರಾಂಕಿಲ್ ನೌಕರಿ ಮಾಡುವ ನೌಕಾ ಯಾನದ ಸಿಬಂದಿ, ಆಫ್‌ಶೋರ್ ಉದ್ಯೋಗ ಮಾಡುವವರು ಕೂಡ ಎನ್‌ಎಂಬಿ (ಐ) ಒಪ್ಪಂದದ ಅಡಿ ಯಲ್ಲಿ ಬರುತ್ತಾರೆ.
ಎನ್‌ಯುಎಸ್‌ಐನ ಜನರಲ್ ಸೆಕ್ರೆಟರಿ ಮಿಸ್ಟರ್ ಮಿಲಿಂದ್ ಕಂಡಲ್ ಗಾಂವ್ಕರ್, ಉಪಾಧ್ಯಕ್ಷ ಲೂಯಿಸ್ ಗೋಮ್ಸ್, ಸಹಾಯಕ ಕರ್ಯದರ್ಶಿ ಸುನಿಲ್ ನಾಯರ್ ಮೊದಲಾದವರು ಮಾಡಿಕೊಂಡಿರುವ ಒಪ್ಪಂದವು 2027ರ ಡಿ. 31ರ ವರೆಗೆ ಜಾರಿಯಲ್ಲಿ ರುತ್ತದೆ ಎಂದು ಪ್ರಕಟನೆ ತಿಳಿಸಿದೆ.