Advertisement

ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಧ್ಯೆ ಒಡಂಬಡಿಕೆ

11:25 AM Jul 27, 2020 | mahesh |

ದಾವಣಗೆರೆ: ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕ ಮುದ್ರಣ, ಪ್ರಚಾರ, ಪ್ರಸಾರ, ಮಾರಾಟ ಸೇರಿದಂತೆ ಎಲ್ಲ ರೀತಿಯ ಶೈಕ್ಷಣಿಕ ಬೆಳವಣಿಗೆಯ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗಗಳ ನಡುವೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

Advertisement

ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭಾಂಗಣದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶರಣಪ್ಪ
ವಿ. ಹಲಸೆ ಮತ್ತು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸ.ಚಿ. ರಮೇಶ್‌ ಅವರು ಕುಲಸಚಿವ ಪ್ರೊ| ಬಸವರಾಜ ಬಣಕಾರ ಸಮ್ಮುಖದಲ್ಲಿ ಒಡಂಬಡಿಕೆಯ
ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಕುಲಪತಿ ಪ್ರೊ| ಸ.ಚಿ. ರಮೇಶ್‌ ಮಾತನಾಡಿ, ಆಧುನಿಕ ತಂತ್ರಜ್ಞಾನ, ಮೊಬೈಲ್‌ ಬಳಕೆಯ ಪ್ರಭಾವದಿಂದ ವಿದ್ಯಾರ್ಥಿ ಸಮೂಹದಲ್ಲಿ ಪುಸ್ತಕ
ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ವಿದ್ಯಾರ್ಥಿಗಳನ್ನು ಮತ್ತೆ ಓದುವ ಹವ್ಯಾಸ ಬೆಳೆಸಿ ಅವರಲ್ಲಿ ಪರಿವರ್ತನೆ ತರುವ ಪ್ರಯತ್ನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ  ಉಭಯ ವಿಶ್ವವಿದ್ಯಾಲಯಗಳು ಹೊಸ ಹೆಜ್ಜೆ ಇಟ್ಟಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಹುಶಃ ದೇಶದಲ್ಲಿ ಎರಡು ವಿಶ್ವವಿದ್ಯಾಲಯಗಳ ಪ್ರಸಾರಾಂಗ ಮತ್ತು ವಿಸ್ತರಣಾ ಕಾರ್ಯಕ್ರಮಕ್ಕೆ ಸಂಬಂ ಧಿಸಿದಂತೆ ಒಡಂಬಡಿಕೆ ಮಾಡಿದ ಮೊದಲ ವಿಶ್ವವಿದ್ಯಾನಿಲಯಗಳಾಗಿವೆ ಎನ್ನಬಹುದು. ಆಯಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಪುಸ್ತಕ ಮಾರಾಟ, ಪ್ರಸಾರ, ಪ್ರಚಾರದ ಜೊತೆಗೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ತಲುಪಿಸಿ, ಜ್ಞಾನಾರ್ಜನೆಗೆ ತೊಡಗಿಸಿಕೊಳ್ಳುವ ಕ್ರಿಯಾಶೀಲ ಚಟುವಟಿಕೆಗಳನ್ನು ರೂಢಿಸುವ ಕೆಲಸವನ್ನು ಕೈಗೊಳ್ಳಲಿವೆ ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಪುಸ್ತಕಗಳನ್ನು ರಚಿಸಿ, ಅವರಿಗೆ ಕೈಗೆಟುಕುವ ದರದಲ್ಲಿ ಮಾರಾಟ
ಮಾಡುವ ಉದ್ದೇಶವೂ ಒಡಂಬಡಿಕೆಯಲ್ಲಿ ಇದೆ. ಪುಸ್ತಕ ರಚನೆ ಮಾತ್ರವಲ್ಲ, ಸಂಶೋಧನೆ, ಪ್ರಚಾರೋಪನ್ಯಾಸಗಳನ್ನು ಏರ್ಪಡಿಸುವುದು, ವಿಚಾರ ಸಂಕಿರಣ, ಶೈಕ್ಷಣಿಕ ಸಮಾವೇಶಗಳ ನಡೆಸಿ, ಅವುಗಳಲ್ಲಿ ತಜ್ಞರಿಂದ ವ್ಯಕ್ತವಾಗುವ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು, ಸಂಶೋಧನಾ
ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಉದ್ದೇಶವೂ ಇದೆ ಎಂದು ಹೇಳಿದರು.

Advertisement

ದಾವಣಗೆರೆ ವಿವಿ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಮಾತನಾಡಿ, ಕಡಿಮೆ ದರದಲ್ಲಿ ಉತ್ತಮ ಕೃತಿಗಳನ್ನು ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ನೀಡುವ
ಮೂಲಕ ಶೈಕ್ಷಣಿಕ ಬೆಳವಣಿಗೆಗೆ ಪ್ರಾಮಾಣಿಕವಾದ ಕೆಲಸವನ್ನು ಹಂಪಿ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ಪ್ರಸಾರಾಂಗಗಳು ಮಾಡುತ್ತಿವೆ. ವಿದ್ಯಾರ್ಥಿಗಳನ್ನು
ಕ್ರಿಯಾಶೀಲವಾಗಿಟ್ಟು, ಬೌದ್ಧಿಕ ಜ್ಞಾನ ಹೆಚ್ಚಳಕ್ಕೂ ಆದ್ಯತೆ ನೀಡಲಾಗುವುದು ಎಂದರು.

ದಾವಣಗೆರೆ ವಿಶ್ವವಿದ್ಯಾಲಯವು ಈಗಾಗಲೇ 100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದೆ. ವಿಶ್ವವಿದ್ಯಾಲಯದ ಬಹುತೇಕ ಎಲ್ಲ ಪ್ರಾಧ್ಯಾಪಕರು ಬರೆದಿರುವ ಪುಸ್ತಕ ಎಲ್ಲವೂ ಮೌಲ್ಯಯುತವಾಗಿವೆ ಎಂದು ತಿಳಿಸಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ| ಎಚ್‌.ಎಸ್‌. ಅನಿತಾ, ಹಣಕಾಸು ಅಧಿಕಾರಿ ಪ್ರೊ| ಗೋಪಾಲ ಎಂ. ಅಡವಿರಾವ್‌, ಸಿಂಡಿಕೇಟ್‌ ಸದಸ್ಯೆ ವಿಜಯಲಕ್ಷ್ಮೀ, ಹಿರೇಮಠ, ಪ್ರಸಾರಾಂಗ ಸಲಹಾ ಸಮಿತಿ ಸದಸ್ಯರಾದ ಪ್ರೊ| ಜೆ.ಕೆ. ರಾಜು, ಪ್ರೊ| ಕೆ.ಬಿ. ರಂಗಪ್ಪ, ಪ್ರೊ| ವಿ. ಕುಮಾರ್‌, ಪ್ರೊ| ಕೆ. ವೆಂಕಟೇಶ್‌, ಪ್ರೊ| ಎನ್‌.ಎಸ್‌. ಗುಂಡೂರ ಇತರರು ಇದ್ದರು. ಪ್ರಸಾರಾಂಗದ ನಿರ್ದೇಶಕ ಡಾ| ಶಿವಕುಮಾರ ಕಣಸೋಗಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next