Advertisement

94 ಸಿ ತಿದ್ದುಪಡಿಗೆ ಸರ್ವಾನುಮತದ ಒಪ್ಪಿಗೆ

03:45 AM Mar 24, 2017 | Team Udayavani |

ವಿಧಾನಸಭೆ: ನಗರ ಸ್ಥಳೀಯ ಸಂಸ್ಥೆಗಳ ಸುತ್ತ ನಿರ್ದಿಷ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಅಕ್ರಮ ಸಕ್ರಮ ಯೋಜನೆ ಜಾರಿಗೆ ತರುವ 94 ಸಿಸಿಗೆ ತಿದ್ದುಪಡಿ ತರುವ ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ-2017 ಸೇರಿದಂತೆ ಮೂರು ವಿಧೇಯಕಕ್ಕೆ ಸರ್ವಾನುಮತದ ಒಪ್ಪಿಗೆ ನೀಡಲಾಯಿತು.

Advertisement

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಗುರುವಾರ ವಿಧೇಯಕವನ್ನು ಪರ್ಯಾವಲೋಚನೆಗೆ ಮಂಡಿಸಿದರು. ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್‌ರಾಜ್‌ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಬಾರದ ಬಿಬಿಎಂಪಿ ಹೊರವಲಯದ 18 ಕಿ.ಮೀ. ವ್ಯಾಪ್ತಿ, ಮಹಾನಗರ ಪಾಲಿಕೆಗಳ ಹೊರವಲಯದ 10 ಕಿಯಮೀ ವ್ಯಾಪ್ತಿ, ನಗರಸಭೆಗಳ ಹೊರಗಿನ 10 ಕಿ.ಮೀ. ವ್ಯಾಪ್ತಿ, ಪುರಸಭೆಗಳ ಹೊರಗಿನ 5 ಕಿ.ಮೀ. ವ್ಯಾಪ್ತಿ ಹಾಗೂ ಪಟ್ಟಣ ಪಂಚಾಯ್ತಿ ಹೊರಗಿನ 3 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ 30-40 ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ವಿಧೇಯಕ ಮಂಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಲವೊಂದು ಆಕ್ಷೇಪಗಳನ್ನು ವ್ಯಕ್ತಪಡಿಸಿದ ಸದಸ್ಯರು, ನಗರ ಪ್ರದೇಶದಲ್ಲಿ ಈಗಾಗಲೇ 20-30 ಅಳತೆಯ ನಿವೇಶನ ಸಕ್ರಮಗೊಳಿಸುವ ಯೋಜನೆ ಜಾರಿಯಲ್ಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಅಳತೆಯ ನಿವೇಶನಗಳ ಸಕ್ರಮಕ್ಕೆ ಅವಕಾಶವಿದೆ. ಇದೀಗ 94 ಸಿಸಿಗೆ ನಿಗದಿಪಡಿಸಿರುವ ಅಂತರದಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚು ಅಳತೆಯ ನಿವೇಶನ ಸಕ್ರಮಕ್ಕೆ ಅವಕಾಶವಿದ್ದರೂ ಅದನ್ನು 30-40 ಚದರಡಿಗೆ ಸೀಮಿತಗೊಳಿಸಿದರೆ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾಗೋಡು ತಿಮ್ಮಪ್ಪ, ಈಗಾಗಲೇ ಇರುವ 94 ಸಿ ಮತ್ತು 94 ಸಿಸಿ ವ್ಯಾಪ್ತಿಯ ಮಧ್ಯೆ ಬಫ‌ರ್‌ ಝೋನ್‌ ಪ್ರದೇಶವಿದೆ. ಈ ಪ್ರದೇಶದಲ್ಲಿರುವ ಜನರಿಗೆ ಮಾತ್ರ ತಿದ್ದುಪಡಿ ಅನ್ವಯವಾಗುತ್ತದೆ ಎಂದು ಹೇಳಿದರು. ಇದಕ್ಕೆ ಒಪ್ಪಿದ ಸದನ ವಿಧೇಯಕವನ್ನು ಧ್ವನಿತಮದಿಂದ ಅಂಗೀಕರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next