ತುಳು ಚಿತ್ರರಂಗದಲ್ಲೀಗ ಮೆಲ್ಲನೆ ಅದ್ಧೂರಿ ಬಜೆಟ್‌ನ ಚಿತ್ರಗಳು ಶುರುವಾಗುತ್ತಿವೆ. ಆ ಸಾಲಿಗೆ ಈಗ “ಅಗೋಳಿ ಮಂಜಣ್ಣ’ ಚಿತ್ರ ಕೂಡ ಹೊಸ ಸೇರ್ಪಡೆಯಾಗಿದೆ. ಹೌದು, ಇದು ಬರೀ ತುಳು ಭಾಷೆಯಲ್ಲಿ ಮಾತ್ರವಲ್ಲ, ಕನ್ನಡ ಮತ್ತು ಮರಾಠಿ ಭಾಷೆಯಲ್ಲೂ ತಯಾರಾಗುತ್ತಿದೆ. ಈ ಚಿತ್ರದ ಶೀರ್ಷಿಕೆಗೆ “ಸೂಪರ್ ಮ್ಯಾನ್ ಆಫ್ ತುಳುನಾಡು’ ಎಂಬ ಅಡಿಬರಹವೂ ಇದೆ. ಅಂದಹಾಗೆ, ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ಕುಮಾರ್ ಕಟೀಲು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಈ ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶಕರು.
“ತುಳುನಾಡಿನ ವೀರಪುರುಷ ಎಂದೇ ಹೆಸರಾದ “ಅಗೋಳಿ ಮಂಜಣ್ಣ’ ಒಬ್ಬ ಅಸಾಧ್ಯ ಧೈರ್ಯ ಶಾಲಿ. ಅದು ಎಷ್ಟರಮಟ್ಟಿಗೆ ಅಂದರೆ, ಒಂದೇ ಬಾರಿಗೆ ಹತ್ತು ಮೂಟೆ ಅಕ್ಕಿ ಎತ್ತಬಲ್ಲಂತಹ ಬಲಶಾಲಿ. ಮಂಗಳೂರಿನ ಮುಲ್ಕಿ ಸೀಮೆಯ ಅಧಿಪತಿ ಎನಿಸಿಕೊಂಡಿದ್ದ “ಅಗೋಳಿ ಮಂಜಣ್ಣ’, ಸುಮಾರು 200 ವರ್ಷಗಳ ಹಿಂದೆ ಮಂಗಳೂರಿನ ಸುರತ್ಕಲ್ ಸಮೀಪದ ಚೇಳಾರ್ ಗುತ್ತಿನಲ್ಲಿ ಬದುಕು ಸವೆಸಿದ್ದರು. ಅವರ ರೋಚಕವಾದ ಸಾಹಸಮಯ ಜನಪದ ಕಥೆ ಚಿತ್ರದ ಜೀವಾಳ’ ಎಂಬುದು ನಿರ್ದೇಶಕ ಸುಧೀರ್ ಅತ್ತಾವರ ಮಾತು.
ಈ ಚಿತ್ರವನ್ನು ಮುಂಬೈನ ಸಕ್ಸಸ್ ಫಿಲ್ಮ್ಸ್ ಇಂಡಿಯಾ ಬ್ಯಾನರ್‌ನಡಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮೂರು ದಿನಗಳ ಪ್ರೋಮೋ ಚಿತ್ರೀಕರಣ ನಡೆದಿದ್ದು, ಚಿತ್ರೀಕರಣ ಶುರುವಾಗಬೇಕಿದೆ. ಚಿತ್ರದ ಹೀರೋ ರೋಹಿತ್‌ಕುಮಾರ್ ಕಟೀಲ್ ಅವರಿಗೆ ನಾಯಕಿಯಾಗಿ ಗುಜರಾತಿ ಚಿತ್ರರಂಗದ ಹಿಮಾಂಗಿನಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಮತ್ತು ಡಾ.ಮೋಹನ್ ಆಳ್ವ ಅವರೂ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ನ ಕೆಲವು ನಟರು ಅಭಿನಯಿಸುತ್ತಿದ್ದಾರೆ.
ಚಿತ್ರಕ್ಕೆ ಬಾಲಿವುಡ್‌ನ ಶಫಿಖಾನ್ ಛಾಯಾಗ್ರಹಣ ಮಾಡಿದರೆ, ಚಂದ್ರಕಾಂತ್ ಅವರು ಸಂಗೀತ ನೀಡುತ್ತಿದ್ದಾರೆ. ವಿದ್ಯಾಧರ್ ಅವರ ಸಂಕಲನವಿದೆ. ಮಾಸ್ ಮಾದ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ನಿರ್ದೇಶಕ ಸುಧೀರ್ ಅತ್ತಾವರ್ ನಿರ್ದೇಶನದ ಜೊತೆಗೆ ಸಾಹಿತ್ಯ ಮತ್ತ ಸಂಭಾಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆಯಲ್ಲಿ ಪ್ರೊಫೆಸರ್ ಜಯಪ್ರಕಾಶ್ ಮಾವಿನಕುಳಿ, ರಾಜಶೇಖರ್ ಜೋಗಿನ್ಮನೆ ಸಾಥ್ ನೀಡಿದ್ದಾರೆ.