ಸಿಕಂದರಾಬಾದ್: ‘ಅಗ್ನಿಪಥ’ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿದ ಹಿಂಸಾಚಾರದ ಹಿಂದಿನ ಮಾಸ್ಟರ್‌ಮೈಂಡ್ ಆವುಲಾ ಸುಬ್ಬಾ ರಾವ್ ಎಂದು ಹೇಳಲಾಗಿದೆ.
ಜನಸಮೂಹವನ್ನು ಸಜ್ಜುಗೊಳಿಸಲು ಅವರು ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದರು ಮತ್ತು ಸಿಕಂದರಾಬಾದ್‌ನಲ್ಲಿ ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸುಬ್ಬಾ ರಾವ್ ಕಳೆದ ಕೆಲವು ವರ್ಷಗಳಿಂದ ನರಸರಾವ್ ಪೇಟೆ, ಹೈದರಾಬಾದ್ ಮತ್ತು ಕನಿಷ್ಠ ಏಳು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುವ ಸೇನಾ ಆಕಾಂಕ್ಷಿಗಳಿಗಾಗಿ ತರಬೇತಿ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಶನಿವಾರ ವಿಚಾರಣೆಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಇಡ್ಲಿ ಮಾರುವವನ ಮಗಳಿಗೆ ವೈದ್ಯೆಯಾಗುವಾಸೆ: ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ
ಶುಕ್ರವಾರ ಸಾವಿರಾರು ಪ್ರತಿಭಟನಾಕಾರರು ರೈಲ್ವೇ ನಿಲ್ದಾಣದಲ್ಲಿ ಹಲವಾರು ಪ್ರಯಾಣಿಕರ ರೈಲುಗಳ ಮೇಲೆ ದಾಳಿ ಮಾಡಿ, ಕೋಚ್‌ಗಳನ್ನು ಸುಟ್ಟುಹಾಕಿ ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ್ದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಹಾರಸಿದ ಗುಂಡಿಗೆ ವಾರಂಗಲ್ ನ 19 ವರ್ಷದ ರಾಜೇಶ್ ಎಂಬಾತ ಸಾವನ್ನಪ್ಪಿದ್ದ.
ಅದೋನಿ, ಕರ್ನೂಲ್, ಗುಂಟೂರು, ನೆಲ್ಲೂರು, ಅಮದಾಲವಲಸ, ವಿಶಾಖಪಟ್ಟಣ ಮತ್ತು ಯಲಮಂಚಿಲಿಯಿಂದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.