Advertisement

ಬೀದರ್: ಡಿ.5 ರಿಂದ ‘ಅಗ್ನಿಪಥ್’ ನೇಮಕಾತಿ ರ‍್ಯಾಲಿ, ನೆಹರು ಕ್ರೀಡಾಂಗಣದಲ್ಲಿ ಸಿದ್ಧತೆ

07:42 PM Dec 04, 2022 | Team Udayavani |

ಬೀದರ್ : ಸುಮಾರು ಆರು ವರ್ಷಗಳ ಬಳಿಕ ಮತ್ತೆ ಗಡಿ ನಾಡು ಬೀದರನಲ್ಲಿ ‘ಅಗ್ನಿಪಥ್’ ಸೇನಾ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದೆ. ಡಿ. 5 ರಿಂದ 22ರವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಈ ರ‍್ಯಾಲಿ ನಡೆಯಲಿದ್ದು, ಜಿಲ್ಲಾಡಳಿತ ಮತ್ತು ಭಾರತೀಯ ಸೇನೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರ‍್ಯಾಲಿಯಲ್ಲಿ ಒಟ್ಟು 6 ಜಿಲ್ಲೆಗಳ 70,375 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

Advertisement

ಸಾಮಾನ್ಯ ಕೆಡರ್ ಮತ್ತು ಇತರೆ ವಿಭಾಗಗಳ (ಟೆಕ್ನಿಕಲ್, ಕ್ಲರ್ಕ್, ಹೌಸ್ ಕಿಪರ್, ಬಾರಬರ್, ಕುಕ್) ಸೈನಿಕ ಹುದ್ದೆಗಳ ನೇಮಕಾತಿಗಾಗಿ ಈ ರ‍್ಯಾಲಿ ನಡೆಯಲಿದ್ದು, ಬೀದರ ಸೇರಿದಂತೆ ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲು ತಮ್ಮ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ಅಗ್ನಿಪಥ್ ಯೋಜನೆಯಡಿ ನಡೆಯುತ್ತಿರುವ ಮೊದಲ ರ‍್ಯಾಲಿ ಇದಾಗಿದ್ದು, ಸಾಮಾನ್ಯ ಕೆಡರ್‌ನ 63,825 ಮತ್ತು ಇತರೆ ಕೆಡರ್‌ಗಳ 6550 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಭಾರತೀಯ ಸೇನೆ ನೇಮಕಾತಿ ವಿಭಾಗದ ಅಧಿಕಾರಿಗಳು ಕ್ರೀಡಾಂಗಣವನ್ನು ಎರಡು ದಿನಗಳ ಹಿಂದೆಯೇ ತಮ್ಮ ಸುಪರ್ದಿಗೆ ಪಡೆದು, ಶಿಸ್ತು ಮತ್ತು ವ್ಯವಸ್ಥಿತವಾಗಿ ರ‍್ಯಾಲಿ ನಡೆಸಲು ತಯ್ಯಾರಿ ಮಾಡಿಕೊಂಡಿದೆ. ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಸೇರಿ ಇತರೆ ವಿವಿಧ ಇಲಾಖೆಗಳು ನೇಮಕಾತಿ ರ‍್ಯಾಲಿಗೆ ಸಹಕಾರ ನೀಡಿವೆ. ಕ್ರೀಡಾಂಗಣದಲ್ಲಿ ಶ್ಯಾಮಿಯಾನ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಸೇರಿ ಅಗತ್ಯ ಸೌಕರ್ಯಗಳನ್ನು ಆಡಳಿತದಿಂದ ಒದಗಿಸಲಾಗಿದೆ. ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಗೆ ಶಿಕ್ಷಣ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಬಂದೋಬಸ್ತ್‌ಗಾಗಿ ಪೊಲೀಸ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಇನ್ನೂ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳಿಗಾಗಿ ಗುರುದ್ವಾರದ ವತಿಯಿಂದ ಉಚಿತ ಊಟದ ವ್ಯವಸ್ಥೆ ಮತ್ತು ಕಡಿಮೆ ದರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಡಿ. 5ರಂದು ಬೆಳಿಗ್ಗೆ 4 ಗಂಟೆಯಿಂದಲೇ ಅಭ್ಯರ್ಥಿಗಳು ಕ್ರೀಡಾಂಗಣಕ್ಕೆ ಬರಲು ಆರಂಭಿಸುವವರು. ಬೆಳಿಗ್ಗೆ 6ಕ್ಕೆ ರನ್ನಿಂಗ್ ಆರಂಭವಾಗಿ ೮ಕ್ಕೆ ಮುಕ್ತಾಯವಾಗಿ ನಂತರ ಇತರೇ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ. ಅಭ್ಯರ್ಥಿಗಳ ದೈಹಿಕ ಪರೀಕ್ಷೆ, ಮೆಡಿಕಲ್, ಸಾಮಾನ್ಯ ಜ್ಞಾನ ಮತ್ತು ಮೆಂಟಲ್ ಎಬಿಲಿಟಿ ಸೇರಿದಂತೆ ನೇಮಕಾತಿ ನಿಯಮದಂತೆ ಪ್ರಕ್ರಿಯೆಗಳು ನಡೆಯಲಿದ್ದು, ಇದಕ್ಕಾಗಿ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದೆ.

ಅಗ್ನಿಪಥ್ ನೇಮಕಾತಿ ರ‍್ಯಾಲಿಯಲ್ಲಿ ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಿಂದ 50,646 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಇನ್ನುಳಿದಂತೆ ಬೀದರ 2772, ರಾಯಚೂರು 2049, ಕೊಪ್ಪಳ 3349, ಕಲ್ಬುರ್ಗಿ 3856 ಮತ್ತು ಯಾದಗಿರಿ ಜಿಲ್ಲೆಯಿಂದ 1153 ಅಭ್ಯರ್ಥಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

Advertisement

ಜಿಲ್ಲೆಯ ಹೆಸರು ರ‍್ಯಾಲಿಯ ದಿನಾಂಕ

ರಾಯಚೂರು                      –   ಡಿ. 5
ಕೊಪ್ಪಳ                               –   ಡಿ. 6
ಕಲ್ಬುರ್ಗಿ                             –  ಡಿ. 7
ಯಾದಗಿರಿ/ ಬೆಳಗಾವಿ       – ಡಿ. 8
ಬೆಳಗಾವಿ                            – ಡಿ. 9 ರಿಂದ 19 ರವರೆಗೆ
ಬೀದರ/ಕೊಪ್ಪಳ               – ಡಿ. 20

ಟೆಕ್ನಿಕಲ್, ಕ್ಲರ್ಕ್/ಎಸ್‌ಕೆಟಿ – ಡಿ. 21
ಟಿಡಿಎನ್                                 – ಡಿ. 22

ಅಗ್ನಿಪಥ್ ಯೋಜನೆಯಡಿ ಮೊದಲ ಸೇನಾ ನೇಮಕಾತಿ ರ‍್ಯಾಲಿ ಬೀದರನಲ್ಲಿ ನಡೆಯಲಿದ್ದು, ೬ ಜಿಲ್ಲೆಗಳ ೭೦,೩೭೫ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲಾಡಳಿತದಿಂದ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇದು ಅವಕಾಶವಾಗಿದ್ದು, ನಮ್ಮ ಭಾಗದ ಹೆಚ್ಚಿನ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು. ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಶುಭಾಷಯಗಳು.

– ಗೋವಿಂದರೆಡ್ಡಿ, ಜಿಲ್ಲಾಧಿಕಾರಿ, ಬೀದರ್.

Advertisement

Udayavani is now on Telegram. Click here to join our channel and stay updated with the latest news.

Next