ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ತರಕಾರಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ರೈತ ವಿಶ್ವಾಸ ದ್ರೋಹ ಸಪ್ತಾಹ ಹಮ್ಮಿಕೊಂಡಿರುವ ಸಂಯುಕ್ತ ಹೋರಾಟ-ಕರ್ನಾಟಕ, ರೈತ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ, ಯುವ ಜನರ ಐಕ್ಯ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ವಾಪಸ್ ಪಡೆಯಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ರಾಜ್ಯ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಆರಂಭಿಸಿರುವ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ರದ್ದು ಪಡಿಸಬೇಕು. ಖಾಸಗಿ ಮಾರುಕಟ್ಟೆಯಿಂದ ಎಪಿಎಂಸಿ ಮಾರುಕಟ್ಟೆ ನೆಲಕಚ್ಚಿದೆ. ಹೀಗಾಗಿ ಖಾಸಗಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಖಾಸಗಿ ಮಾರುಕಟ್ಟೆಯಿಂದ ಬಂಡವಾಳಶಾಹಿಗಳ ಹೊಟ್ಟೆ ತುಂಬಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮಾರುಕಟ್ಟೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಏ. 13ರಿಂದ ಏ. 16ರ ವರೆಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಕಚೇರಿ ಹಾಗೂ ದಕ್ಷಿಣ ಶಾಸಕ ಅಭಯ ಪಾಟೀಲ ನಿವಾಸ ಎದುರು ತರಕಾರಿ ಮಾರಾಟ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಈಗ ಸಮಾರೋಪವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಕೃಷಿ ಉತ್ಪನ್ನಗಳಾದ ಸೌತೇಕಾಯಿ, ಕ್ಯಾಬೀಜ್, ನುಗ್ಗೆಕಾಯಿ, ಮೆಣಸಿನಕಾಯಿ, ಟೊಮೊಟೋ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ರೈತರು, ಕಾರ್ಮಿಕರು, ದಲಿತರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರ ಸ್ಥಿತಿ ದಯನೀಯವಾಗಿದೆ. ಸರ್ಕಾರ ಜನರೊಂದಿಗೆ ಚೆಲ್ಲಾಟವಾಡುತ್ತಿದೆ. ರೈತರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹತ್ತಿಗೆ ಆಮದು ಸುಂಕ ಪೂರ್ತಿ ಸೊನ್ನೆಗೆ ಇಳಿಸಿದೆ. ಕಡಿಮೆ ಬೆಲೆಗೆ ಬೇರೆ ದೇಶದಿಂದ ಹತ್ತಿ ಆಮದು ಮಾಡಿಕೊಂಡರೆ ಹತ್ತಿ ಬೆಳೆಯುವ ನಮ್ಮ ಕರ್ನಾಟಕ ರಾಜ್ಯದ ರೈತರು ಏನು ಮಾಡಬೇಕು. ಹೀಗಾದರೆ ಇಲ್ಲಿಯ ರೈತರ ಪರಿಸ್ಥಿತಿ ಏನಾಗಬೇಕು. ನಮ್ಮ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಚಾಮರಸ ಮಾಲಿಪಾಟೀಲ, ಸಿದಗೌಡ ಮೋದಗಿ, ಡಿ.ಎಚ್. ಪೂಜಾರ, ರವಿ ಪಾಟೀಲ, ರಮೇಶ ವಾಲಿ, ಸಂತೋಷ ಎಚ್.ಎಂ., ಶಿವಲಿಂಗ ಮಿಸಾಳೆ, ಬಿ.ಎಸ್. ಉಪ್ಪಿನ, ಸತೀಶ ನಾಯಿಕ, ಜಿ.ವಿ. ಕುಲಕರ್ಣಿ ಸೇರಿದಂತೆ ಇತರರು ಇದ್ದರು.