Advertisement

ಬೆಚ್ಚಗೆ ಕೂತವರನ್ನು ಬೆಚ್ಚಿ ಬೀಳಿಸುವ ಅಘೋರ

10:45 AM Mar 05, 2022 | Team Udayavani |

“ಪುನರಪಿ ಜನನಂ ಪುನರಪಿ ಮರಣಂ’ ಎಂಬ ಮಾತಿನಂತೆ ಮನುಷ್ಯನೂ ಸೇರಿದಂತೆ ಜಗತ್ತಿನಲ್ಲಿರುವ ಪ್ರತಿ ಜೀವರಾಶಿಯೂ ಹುಟ್ಟುತ್ತಿರುತ್ತದೆ ಮತ್ತು ಸಾಯುತ್ತಿರುತ್ತದೆ. ಹುಟ್ಟು ಮತ್ತು ಸಾವು ಎಂಬ ಪ್ರಕ್ರಿಯೆ ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹುಟ್ಟು ಮತ್ತು ಸಾವಿನ ನಡುವಿನ ಅಂತರದಲ್ಲಿ ಮನುಷ್ಯನ ಭೌತಿಕವಾಗಿ ಬದುಕಿದರೆ, ಈ ಸಾವು ಮತ್ತು ಹುಟ್ಟಿನ ನಡುವಿನ ಅಂತರದಲ್ಲಿ ಮನುಷ್ಯ ಏನಾಗಿರುತ್ತಾನೆ? ಇಂಥದ್ದೊಂದು ಕಲ್ಪನೆಯ ಎಳೆಯನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “ಅಘೋರ’.

Advertisement

ಅಘೋಚರ ನಕಾರಾತ್ಮಕ ಶಕ್ತಿಯ ಬಲೆಯೊಳಗೆ ಹೋಗುವ ನಾಲ್ವರು ಅದರಿಂದ ಏನೆಲ್ಲ ಸಂಕಷ್ಟಗಳನ್ನು ಎದುರಿಸುತ್ತಾರೆ, ಅದರಿಂದ ಆಗುವ ಅನಾಹುತಗಳೇನು ಎಂಬುದೇ “ಅಘೋರ’ ಚಿತ್ರದ ಕಥಾಹಂದರ. ಅದು ಹೇಗೆ ಅನ್ನೋದನ್ನ ತೆರೆ ಮೇಲೆ ನೋಡುವುದು ಒಳ್ಳೆಯದು.

ಹೆಸರೇ ಹೇಳುವಂತೆ “ಅಘೋರ’ ಔಟ್‌ ಆ್ಯಂಡ್‌ ಔಟ್‌ ಹಾರರ್‌-ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ಸಾಮಾನ್ಯವಾಗಿ ಹಾರರ್‌-ಥ್ರಿಲ್ಲರ್‌ ಸಿನಿಮಾಗಳ ಕಥೆಯ ಎಳೆ ಸರಳವಾಗಿದ್ದರೂ, ಅದನ್ನು ಚಿತ್ರಕಥೆ ಮತ್ತು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಡುವುದು ಬಹಳ ಮುಖ್ಯ. “ಅಘೋರ’ ಚಿತ್ರದಲ್ಲೂ ಸಾವು ಮತ್ತು ಹುಟ್ಟಿನ ನಡುವಿನ ಅಂತರದಲ್ಲಿ ಮನುಷ್ಯ ಏನಾಗಿರುತ್ತಾನೆ? ಎಂಬ ಸಣ್ಣ ಕಾಲ್ಪನಿಕ ಎಳೆಯನ್ನು ಇಟ್ಟುಕೊಂಡು ಅದನ್ನು ಪ್ರೇಕ್ಷಕರ ಮುಂದೆ ಪರಿಣಾಮಕಾರಿಯಾಗಿಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಬೆರಳೆಣಿಕೆಯಷ್ಟು ಕಲಾವಿದರು, ಕಡಿಮೆ ಸಂಭಾಷಣೆಯಲ್ಲಿ ದೃಶ್ಯಗಳ ಮೂಲಕವೇ ಇಡೀ ಸಿನಿಮಾವನ್ನು ತೆರೆಮೇಲೆ ಕಟ್ಟಿಕೊಡಲಾಗಿದೆ.

ಅಘೋರಿ ಪಾತ್ರದಲ್ಲಿ ಹಿರಿಯ ನಟ ಅವಿನಾಶ್‌, ಹೀರೋ ಆಗಬೇಕೆಂಬ ಕನಸು ಕಾಣುವ ಪಾತ್ರದಲ್ಲಿ ಅಶೋಕ್‌, ಅಘೋಚರ ಶಕ್ತಿಗಳನ್ನು ಹುಡುಕುವ ಪಾತ್ರದಲ್ಲಿ ಪುನೀತ್‌ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ನಾಯಕಿಯರಾದ ದ್ರವ್ಯಾ ಶೆಟ್ಟಿ, ರಚನಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

Advertisement

ತಾಂತ್ರಿಕವಾಗಿಯೂ “ಅಘೋರ’ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಚಿತ್ರತಂಡ ಹಾಕಿರುವ ಪರಿಶ್ರಮ ತೆರೆಮೇಲೆ ಕಾಣುತ್ತದೆ. ಚಿತ್ರದ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ, ವಿಎಫ್ಎಕ್ಸ್‌ ಕೆಲಸಗಳೂ ಕೂಡ ಗುಣಮಟ್ಟದಲ್ಲಿದೆ. ಚಿತ್ರಕಥೆಗೆ ಇನ್ನಷ್ಟು ವೇಗ ಕೊಟ್ಟಿದ್ದರೆ, “ಅಘೋರ’ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು. ನೋಡುಗರನ್ನು ಅಲ್ಲಲ್ಲಿ ಬೆಚ್ಚಿಬೀಳಿಸುವ “ಅಘೋರ’ ಚಿತ್ರವನ್ನು ವಾರಾಂತ್ಯದಲ್ಲಿ ಒಮ್ಮೆ ನೋಡಿ ಬರಲು ಅಡ್ಡಿಯಿಲ್ಲ.

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next