ಚೆನ್ನೈ: ದಕ್ಷಿಣ ವಲಯ ಅಂತರ್ ರಾಜ್ಯ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಗೆಲುವಿನ ಖಾತೆ ತೆರೆದಿದೆ. ಸೋಮವಾರದ ತನ್ನ ದ್ವಿತೀಯ ಮುಖಾಮುಖೀಯಲ್ಲಿ ಕೇರಳವನ್ನು 19 ರನ್ನುಗಳಿಂದ ಮಣಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವಿನಯ್ ಕುಮಾರ್ ನಾಯಕತ್ವದ ಕರ್ನಾಟಕ 7 ವಿಕೆಟಿಗೆ 192 ರನ್ ಪೇರಿಸಿದರೆ, ಕೇರಳ 6 ವಿಕೆಟಿಗೆ 173 ರನ್ ಗಳಿಸಿ ಸೋಲನುಭವಿಸಿತು. ರವಿವಾರದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ಕೈಯಲ್ಲಿ 4 ವಿಕೆಟ್ ಅಂತರದ ಸೋಲಿಗೆ ತುತ್ತಾಗಿತ್ತು.
ಕರ್ನಾಟಕ ಆರ್. ಸಮರ್ಥ್ ಅವರನ್ನು ಮೊದಲ ಓವರಿನಲ್ಲೇ ಕಳೆದುಕೊಂಡಿತು. ಆಗಿನ್ನೂ ರನ್ ಖಾತೆ ತೆರೆದಿರಲಿಲ್ಲ. ದ್ವಿತೀಯ ವಿಕೆಟಿಗೆ ಜತೆಗೂಡಿದ ಮಾಯಾಂಕ್ ಅಗರ್ವಾಲ್-ಕೆ. ಗೌತಮ್ 102 ರನ್ ಪೇರಿಸಿ ತಂಡವನ್ನು ಮೇಲೆತ್ತಿದರು. ಅಗರ್ವಾಲ್ ಸರ್ವಾಧಿಕ 67 ರನ್ ಹೊಡೆದರೆ (41 ಎಸೆತ, 5 ಬೌಂಡರಿ, 3 ಸಿಕ್ಸರ್), ಗೌತಮ್ ಕೇವಲ 29 ಎಸೆತಗಳಿಂದ 60 ರನ್ ಬಾರಿಸಿದರು (7 ಬೌಂಡರಿ, 3 ಸಿಕ್ಸರ್). 28 ರನ್ ಮಾಡಿದ ಅನಿರುದ್ಧ ಜೋಶಿ ತಂಡದ ಮತ್ತೂಬ್ಬ ಪ್ರಮುಖ ಸ್ಕೋರರ್.
ಕೇರಳದ ಚೇಸಿಂಗ್ ಉತ್ತಮ ಮಟ್ಟದಲ್ಲೇ ಇತ್ತು. ಆರಂಭಕಾರ ವಿಷ್ಣು ವಿನೋದ್ ಬಿರುಸಿನ ಆಟಕ್ಕೆ ಇಳಿದು 35 ಎಸೆತಗಳಿಂದ 64 ರನ್ ಸಿಡಿಸಿದರು. ಇದರಲ್ಲಿ 6 ಸಿಕ್ಸರ್, 2 ಬೌಂಡರಿ ಒಳಗೊಂಡಿತ್ತು. ಮತ್ತೂಬ್ಬ ಓಪನರ್ ಜಲಜ್ ಸಕ್ಸೇನಾ 17, ಮಧ್ಯಮ ಕ್ರಮಾಂಕದ ಪಿ.ಆರ್. ಪ್ರೇಮ್ ಔಟಾಗದೆ 45 ರನ್ ಮಾಡಿದರು.
ಕರ್ನಾಟಕ ಒಟ್ಟು 7 ಮಂದಿ ಬೌಲರ್‌ಗಳನ್ನು ದಾಳಿಗಿಳಿಸಿತು. 16 ರನ್ನಿಗೆ 2 ವಿಕೆಟ್ ಕಿತ್ತ ಜೆ. ಸುಚಿತ್ ಯಶಸ್ವೀ ಬೌಲರ್.
ಮಂಗಳವಾರ ಕರ್ನಾಟಕ ತಂಡ ಆಂಧ್ರ ಪ್ರದೇಶವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-20 ಓವರ್‌ಗಳಲ್ಲಿ 7 ವಿಕೆಟಿಗೆ 192 (ಅಗರ್ವಾಲ್ 67, ಕೆ. ಗೌತಮ್ 60, ಜೋಶಿ 28, ಸಕ್ಸೇನಾ 30ಕ್ಕೆ 3). ಕೇರಳ-20 ಓವರ್‌ಗಳಲ್ಲಿ 6 ವಿಕೆಟಿಗೆ 173 (ವಿಷ್ಣು ವಿನೋದ್ 64, ಪ್ರೇಮ್ 45, ಸಕ್ಸೇನಾ 17, ಸುಚಿತ್ 16ಕ್ಕೆ 2).