ನಾಶಿಕ್: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಲಿಕಾಪ್ಟರ್ ಇಂದು ಶನಿವಾರ ಬೆಳಗ್ಗೆ ಬಲವಂತದಿಂದ ಭೂ ಸ್ಪರ್ಶ ಮಾಡಿದ ಘಟನೆ ನಡೆಯಿತು.
ಫಡ್ನವೀಸ್ ಅವರು ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಮತ್ತು ಇತರರೊಂದಿಗೆ ನಾಶಿಕ್‌ನಿಂದ ಔರಂಗಾಬಾದ್‌ಗೆ ಇಂದು ಬೆಳಗ್ಗೆ 9.30ರ ಹೊತ್ತಿಗೆ ಹೆಲಿಕಾಪ್ಟರ್‌ನಲ್ಲಿ ಮರಳುವಾಗ ಈ ಘಟನೆ ಸಂಭವಿಸಿತು.
ಫಡ್ನವೀಸ್ ಅವರ ಹೆಲಿಕಾಪ್ಟರ್ ನೆಲದಿಂದ ಟೇಕ್ ಆಫ್ ಆಗಿ ಕೇವಲ 50 ಅಡಿ ಎತ್ತರ ಏರಿದಾಗ ಅದಕ್ಕೆ ಮುಂದೆ ಹಾರಲು ಸಾಧ್ಯವಾಗಲಿಲ್ಲ. ಆದರೆ ಪೈಲಟ್ ಕೆಲವೇ ಮೀಟರ್‌ಗಳ ಆಚೆ ಹೆಲಿಕಾಪ್ಟರನ್ನು ಸುರಕ್ಷಿತವಾಗಿ ಇಳಿಸಿದರು ಎಂದು ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ ಓವರ್‌ಲೋಡ್ ಆಗಿತ್ತು; ಆದುದರಿಂದಲೇ ಅದಕ್ಕೆ ಹಾರಲು ಸಾಧ್ಯವಾಗಲಿಲ್ಲ. ಆಗ ಹೆಲಿಕಾಪ್ಟರ್‌ನಲ್ಲಿದ್ದ ಫಡ್ನವೀಸ್ ಅವರ ಅಡುಗೆಯಾಳನ್ನು ಮತ್ತು ಆತನ ಚೀಲವನ್ನು ಕೆಳಗಿಳಿಸಲಾಯಿತು. ಅನಂತರವೇ ಹೆಲಿಕಾಪ್ಟರ್ ಯಶಸ್ವಿಯಾಗಿ ಗಗನಕ್ಕೆ ನೆಗೆಯಿತು ಎಂದು ಮೂಲಗಳು ಹೇಳಿವೆ.
ಸಿಎಂ ಮತ್ತು ಅವರ ಸಹಚರರು 25 ನಿಮಿಷಗಳಲ್ಲಿ ಹೆಲಿಕಾಪ್ಟರ್ ಮೂಲಕ ಔರಂಗಾಬಾದ್ ತಲುಪುತ್ತಿರುವಂತೆಯೇ, ಫಡ್ನವೀಸ್ ಅಡುಗೆಯಾಳು ಮತ್ತು ಆತನ ಬ್ಯಾಗನ್ನು ಮೂರು ತಾಸುಗಳ ರಸ್ತೆ ಪ್ರಯಾಣದ ಮೂಲಕ ಔರಂಗಾಬಾದ್‌ಗೆ ತಲುಪಿಸಲಾಯಿತು.
ಈ ಹಿಂದೆ ಮೂರು ಬಾರಿ ಫಡ್ನವೀಸ್ ಹೆಲಿಕಾಪ್ಟರ್ ಟೇಕಾಫ್ ಆಗದೇ ನೆಲಕ್ಕಿಳಿದ ಘಟನೆಗಳು ನಡೆದಿವೆ. ಆ ಘಟನೆಗಳು ಮೇ 10, ಮೇ 25 ಮತ್ತು ಜುಲೈ 7ರಂದು ನಡೆದಿವೆ.