Advertisement

ಮತ್ತೆ ಜೊತೆಯಾಯಿತು ರಾಜ್‌ಕುಮಾರ ತಂಡ

11:25 AM Jan 01, 2018 | |

“ರಾಜ್‌ಕುಮಾರ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ಸಂತೋಷ್‌ ಆನಂದರಾಮ್‌ ಯಾವ ಸಿನಿಮಾ ಮಾಡುತ್ತಾರೆಂಬ ಕುತೂಹಲವಿತ್ತು. ಮತ್ತೊಂದು ಸ್ಟಾರ್‌ ಸಿನಿಮಾ ಮಾಡುತ್ತಾರೆಂದು ಸುದ್ದಿ ಓಡಾಡುವ ಜೊತೆಗೆ ಪುನೀತ್‌ರಾಜಕುಮಾರ್‌ ಜೊತೆ ಮತ್ತೆ ಸಿನಿಮಾ ಮಾಡುತ್ತಾರೆಂಬ ಅಂತೆ-ಕಂತೆಗಳು ಓಡಾಡುತ್ತಿದ್ದವು. ಈಗ ಸ್ವತಃ ಸಂತೋಷ ಆನಂದರಾಮ್‌ ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಅದು ಪುನೀತ್‌ರಾಜಕುಮಾರ್‌ ಜೊತೆಗಿನ ಸಿನಿಮಾ.

Advertisement

ಹೌದು, “ರಾಜ್‌ಕುಮಾರ’ ಚಿತ್ರದ ಹಿಟ್‌ ಜೋಡಿ ಮತ್ತೂಮ್ಮೆ ಒಂದಾಗುತ್ತಿದೆ. ಸಂತೋಷ್‌ ಆನಂದರಾಮ್‌ ಅವರ ಮೂರನೇ ಚಿತ್ರಕ್ಕೆ ಪುನೀತ್‌ ನಾಯಕರಾಗಿದ್ದು, “ರಾಜ್‌ಕುಮಾರ’ ಸಿನಿಮಾ ನಿರ್ಮಿಸಿದ ಹೊಂಬಾಳೆ ಪ್ರೊಡಕ್ಷನ್ಸ್‌ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಪುನೀತ್‌ರಾಜಕುಮಾರ್‌ ಜೊತೆ ಹೊಂಬಾಳೆ ಪ್ರೊಡಕ್ಷನ್ಸ್‌ನ ಮೂರನೇ ಸಿನಿಮಾ ಇದಾಗಿದ್ದು, ಈಗಾಗಲೇ ಪುನೀತ್‌ ಜೊತೆ “ನಿನ್ನಿಂದಲೇ’, “ರಾಜ್‌ಕುಮಾರ’ ಚಿತ್ರಗಳನ್ನು ನಿರ್ಮಿಸಿದ್ದು, ಈಗ ಪುನೀತ್‌ ಜೊತೆಗಿನ ಮೂರನೇ ಚಿತ್ರವನ್ನು ಅನೌನ್ಸ್‌ ಮಾಡಿದೆ. ಈ ಚಿತ್ರ ಜೂನ್‌ ನಂತರ ಆರಂಭವಾಗಲಿದೆ. 

“ನಾವೆಲ್ಲರು ಕುಳಿತು ಚರ್ಚೆ ಮಾಡಿದಾಗ ಒಂದು ಒಳ್ಳೆಯ ಕಥೆ ಹುಟ್ಟಿಕೊಂಡಿತು. ಆ ಚರ್ಚೆಯೇ ತುಂಬಾ ಸ್ವಾರಸ್ಯಕರವಾಗಿತ್ತು. ಈ ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲೂ ಒಂದು ಅದ್ಭುತ ಸಂದೇಶವಿದ್ದು, ಸದುದ್ದೇಶದಿಂದ ಈ ಸಿನಿಮಾ ಮಾಡುತ್ತಿದ್ದೇನೆ’ ಎಂದು ಸಿನಿಮಾ ಬಗ್ಗೆ ಮಾತನಾಡುತ್ತಾರೆ ನಿರ್ದೇಶಕ ಸಂತೋಷ್‌ ಆನಂದರಾಮ್‌. ಅಂದಹಾಗೆ, “ಹೊಂಬಾಳೆ’ ಜೊತೆ ಇದಲ್ಲದೇ ಇನ್ನೂ ಎರಡು ಸಿನಿಮಾಗಳನ್ನು ಮಾಡಲಿದ್ದಾರಂತೆ ಸಂತೋಷ್‌. ಸಂತೋಷ್‌ ಆನಂದ್‌ರಾಮ್‌ ಅವರ ಈ ಕಥೆಗೆ ಪುನೀತ್‌ ಅವರೇ ಬೇಕಿತ್ತಂತೆ.

ಏಕೆಂದರೆ ಆ ತರಹದ ಒಂದು ವಿಭಿನ್ನ ಕಥೆ ಇದಾಗಿದ್ದು, ಪುನೀತ್‌ ಅವರಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂಬ ಕಾರಣಕ್ಕೆ ಮತ್ತೆ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ. “ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಬಂದ ಮೊದಲ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಮತ್ತೆ ಪುನೀತ್‌ ಅವರೇ ಯಾಕೆ ಬೇಕಿತ್ತೆಂಬ ಪ್ರಶ್ನೆ ಬರಬಹುದು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ತುಂಬಾನೇ ಇಷ್ಟಪಡುವ ಹಾಗೂ ಬೇಗನೇ ತಲುಪುವ ನಟ ಇನ್ನೊಬ್ಬರಿಲ್ಲ.

ಅವರನ್ನು ಪ್ರತಿ ವರ್ಗದ, ವಯಸ್ಸಿನ ಜನ ಇಷ್ಟಪಡುತ್ತಾರೆ. ಚಿತ್ರದ ಕಥೆ ಕೂಡಾ ಒಂದು ಸದುದ್ದೇಶದಿಂದ ಕೂಡಿದ್ದು, ಪುನೀತ್‌ರಾಜಕುಮಾರ್‌ ಅದನ್ನು ಚೆನ್ನಾಗಿ ಮುನ್ನಡೆಸುತ್ತಾರೆ. ಈ ಸಿನಿಮಾವನ್ನು “ಅಭಿಮಾನದಿಂದ ಅಭಿಮಾನಕ್ಕೆ ಮತ್ತೊಂದು ಪ್ರಯತ್ನ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮಾಡುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ. ಚಿತ್ರದ ಟೈಟಲ್‌ ಹಾಗೂ ನಾಯಕಿ ಇನ್ನಷ್ಟೇ ಅಂತಿಮವಾಗಬೇಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next